
ಕೊಪ್ಪಳ: ‘ಕೋಟ್ಯಂತರ ಜನರ ಜೀವನಾಡಿ ತುಂಗಭದ್ರಾ ನದಿಗೆ ಕಾರ್ಖಾನೆಗಳ ತ್ಯಾಜ್ಯ, ನಗರಗಳ ಒಳಚರಂಡಿ ನೀರು ಹರಿಬಿಡುತ್ತಿದ್ದು ಈ ನೀರು ಕುಡಿಯುವ ಜನರು, ಪ್ರಾಣಿ, ಪಕ್ಷಿ, ಜಲಚರಗಳು ಸಾಯುವಂತಾಗಿದೆ’ ಎಂದು ನಿರ್ಮಲ ತುಂಗಭದ್ರಾ ಅಭಿಯಾನದ ಶಿವಕುಮಾರ ಹಾದಿಮನಿ ಹೇಳಿದರು.
ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಜಂಟಿ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಟ ಧರಣಿಯ 48ನೇ ದಿನವಾದ ಬುಧವಾರ ಮಾತನಾಡಿದ ಅವರು ‘ಕಾರ್ಖಾನೆ ತ್ಯಾಜ್ಯ ನದಿಗೆ ಸೇರುತ್ತಿದ್ದು ಈ ಘಟಕಗಳ ನಿಲುಗಡೆಗೆ ಸರ್ಕಾರ ಮುಂದಾಗಲಿ, ನಮ್ಮ ಆಂದೋಲನದಲ್ಲಿ ಈ ಹೋರಾಟವನ್ನು ಭಾಗಿಯಾಗಿಸಲಾಗುವುದು’ ಎಂದರು. ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ ಹಾಗೂ ಎಕ್ಸ್ ಇಂಡಿಯಾ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಧರಣಿ ನಡೆಯುತ್ತಿದೆ.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ, ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮೂಕಪ್ಪಮೇಸ್ತ್ರಿ ಬಸಾಪುರ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಉಪನ್ಯಾಸಕ ಶಾಂತವೀರ ಎಂ. ಕಂಬಾಳಿಮಠ, ಶಂಭುಲಿಂಗಪ್ಪ ಹರಗೇರಿ, ಡಿ.ಎಂ.ಬಡಿಗೇರ, ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಭೂಮಿ ಕಳೆದುಕೊಂಡವರಿಂದ ಅರೆಬೆತ್ತಲೆ ಮೆರವಣಿಗೆ
ಕೊಪ್ಪಳ: ಬಿಎಸ್‌ಪಿಎಲ್ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ ರೈತರು ಕೂಡ ಅನಿರ್ದಿಷ್ಟ ಧರಣಿ ಮುಂದುವರಿಸಿದ್ದು 13 ದಿನಗಳಾಗಿವೆ. ‘ಕಾರ್ಖಾನೆ ಸ್ಥಾಪಿಸಬೇಕು ಅಥವಾ ಭೂಮಿ ಕಳೆದುಕೊಂಡವರಿಗೆ ಸರ್ಕಾರಿ ನೌಕರಿ ಕೊಡಬೇಕು’ ಎಂದು ಘೋಷಣೆಗಳನ್ನು ಕೂಗಿದ ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ‘ಕಾರ್ಖಾನೆ ಆರಂಭವಾದರೆ ನಿರಾಶ್ರಿತ ರೈತರ ಮಕ್ಕಳಿಗೆ ಕೆಲಸ ಸಿಗುತ್ತದೆ. ಆದ್ದರಿಂದ ಕಾರ್ಖಾನೆ ಆರಂಭಕ್ಕೆ ಅವಕಾಶ ಕೊಡಬೇಕು’ ಎಂದು ಹೋರಾಟಗಾರರು ಆಗ್ರಹಿಸಿದರು.
ಭೂಮಿ ಕಳೆದುಕೊಂಡ ಹನುಮಂತಪ್ಪ ಕೌದಿ ಹನುಮೇಶ್ ಹಾಲವರ್ತಿ ಪ್ರಾಣೇಶ್ ಹಾಲವರ್ತಿ ಮನೋಜ್ ಹಾಲವರ್ತಿ ಸ್ವಾಮಿ ಹಾಲವರ್ತಿ ದುರುಗಪ್ಪ ಬಾವಿಮನಿ ಈರಪ್ಪ ಓಜನಹಳ್ಳಿ ಬಸವರಾಜ ಹೊಸಮನಿ ಕೆಮಪ್ಪ ಇಟಗಿ ಕಾಮಣ್ಣ ಕಂಬಳಿ ಗೋಣಿಬಸಪ್ಪ ಬಡಿಗೇರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.