ADVERTISEMENT

ಹಿಂಗಾರಿಗಿಲ್ಲ, ನಿಂತ ಬೆಳೆಗಷ್ಟೇ ನೀರು: ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 6:29 IST
Last Updated 15 ನವೆಂಬರ್ 2025, 6:29 IST
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಐಸಿಸಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ, ಸಚಿವರು, ಶಾಸಕರು ಪಾಲ್ಗೊಂಡಿದ್ದರು 
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಐಸಿಸಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ, ಸಚಿವರು, ಶಾಸಕರು ಪಾಲ್ಗೊಂಡಿದ್ದರು    

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಬೇಕಿರುವ ಕಾರಣ ಜಲಾಶಯ ವ್ಯಾಪ್ತಿಯ ಕೊಪ್ಪಳ, ವಿಜಯನಗರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ರೈತರಿಗೆ ಹಿಂಗಾರು ಹಂಗಾಮಿಗೆ ನೀರು ಹರಿಸದಿರಲು ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ 125ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಮುಂಗಾರು ಹಂಗಾಮಿನಲ್ಲಿ ನಾಟಿ ಮಾಡಿ ಬೆಳೆದು ನಿಂತಿರುವ ಬೆಳೆಗಳಿಗೆ ಮಾತ್ರ ನೀರು ಒದಗಿಸಲಾಗುತ್ತದೆ.

ಜಲಾಶಯದ ಮಟ್ಟ 1613 ಅಡಿ ತಲುಪಿದ ನಂತರ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು, ಪ್ರಸ್ತುತ ಇರುವ 76 ಟಿಎಂಸಿ ಅಡಿ ನೀರಿನಲ್ಲಿಯೇ ಬೇಸಿಗೆ ಸಮಯದಲ್ಲಿ ಕುಡಿಯಲು, ಕೆರೆಕಟ್ಟೆ ತುಂಬಿಸಲು ಬಳಕೆ ಮಾಡಲಾಗುತ್ತದೆ.

ADVERTISEMENT

ಪ್ರಸ್ತುತ ಬೆಳೆಗೆ ನೀರು: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ವ್ಯಾಪ್ತಿಯಲ್ಲಿ ಬೆಳೆದು ನಿಂತ ಬೆಳೆಗಳಿಗೆ ಡಿ. 1ರಿಂದ 2026ರ ಜನವರಿ 10ರ ತನಕ 3000 ಕ್ಯುಸೆಕ್ಸ್‌, ಎಡದಂಡೆ ವಿಜಯನಗರ ಕಾಲುವೆಗೆ ಜ. 1ರಿಂದ ಮೇ 10ರ ತನಕ 150 ಕ್ಯುಸಕ್ಸ್‌ನಂತೆ 1ರಿಂದ 11ಎ ಕಾಲುವೆ ತನಕ, ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ. 1ರಿಂದ ಜ. 10ರ ತನಕ 1300 ಕ್ಯುಸಕ್ಸ್‌ನಂತೆ, ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿ. 1ರಿಂದ ಜ. 10ರ ತನಕ 750 ಕ್ಯುಸಕ್ಸ್‌ನಂತೆ, ರಾಯ ಬಸವಣ್ಣ ಕಾಲುವೆಗೆ  ಜ.1ರಿಂದ ಮೇ 31ರ ತನಕ ಸರಾಸರಿ 250 ಕ್ಯುಸೆಕ್ಸ್‌ ಅಥವಾ ಕಾಲುವೆಯಡಿ ನೀರು ಲಭ್ಯತೆ ಇರುವ ತನಕ ಇದರಲ್ಲಿ ಯಾವುದು ಮೊದಲು ಅನ್ವಯವಾಗುತ್ತದೆಯೊ ಅದರಂತೆ ನೀರು ಹರಿಸಲಾಗುತ್ತದೆ. ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ. 1ರಿಂದ 25 ಕ್ಯುಸೆಕ್ಸ್‌ನಂತೆ ಅಥವಾ ಜಲಾಶಯದ ನೀರಿನ ಮಟ್ಟ 1585 ಅಡಿಗಳತನಕ ಇದರಲ್ಲಿ ಯಾವುದು ಮೊದಲೇ ಅದಕ್ಕೆ ಅನುಗುಣವಾಗಿ ನೀರು ಮತ್ತು 150 ಕ್ಯುಸೆಕ್ಸ್‌ನಂತೆ ನದಿ ಪೂರಕ ಕಾರ್ಖಾನೆಗಳಿಗೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಸಚಿವ ಎನ್‌.ಎಸ್‌. ಭೋಸರಾಜು, ಮುನಿರಾಬಾದ್‌ ಕಾಡಾ ಅಧ್ಯಕ್ಷ ಹಸನಸಾಬ್‌ ದೋಟಿಹಾಳ, ಶಾಸಕರಾದ ರಾಘವೇಂದ್ರ ಹಿಟ್ನಾಳ, ದೊಡ್ಡನಗೌಡ ಪಾಟೀಲ, ಹಂಪನಗೌಡ ಬಾದರ್ಲಿ, ನಾಗೇಂದ್ರ, ಗಣೇಶ್, ಬಸನಗೌಡ ದದ್ದಲ್, ಜನಾರ್ದನ ರೆಡ್ಡಿ, ಸಂಸದ ರಾಜಶೇಖರ ಹಿಟ್ನಾಳ, ವಿಧಾನಪರಿಷತ್‌ ಸದಸ್ಯರಾದ ಹೇಮಲತಾ ನಾಯಕ, ವಸಂತಕುಮಾರ್, ಬಸವನಗೌಡ ಬಾದರ್ಲಿ, ಅಚ್ಚುಕಟ್ಟು ಪ್ರದೇಶದ ನಾಲ್ಕೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಇಂದು ಬಿಜೆಪಿ ಸಭೆ

ಎರಡನೇ ಬೆಳೆಗೆ ನೀರು ಹರಿಸಲೇಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಹೋರಾಟ ರೂಪಿಸಲು ಸಜ್ಜಾಗಿರುವ ಬಿಜೆಪಿ ಬೆಂಗಳೂರಿನಲ್ಲಿ ಶನಿವಾರ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಲು ತೀರ್ಮಾನಿಸಿದೆ. ನಾಲ್ಕೂ ಜಿಲ್ಲೆಗಳ ಪ್ರಮುಖರು ಮುನಿರಾಬಾದ್‌ನಲ್ಲಿ ಗುರುವಾರ ಸಭೆ ನಡೆಸಿ ಹೋರಾಟದ ಬಗ್ಗೆ ಚರ್ಚಿಸಿದ್ದರು. ‘ಐಸಿಸಿ ಸಭೆಯಲ್ಲಿ ಎರಡನೇ ಬೆಳೆಗೆ ನೀರು ಹರಿಸಲು ತೀರ್ಮಾನಿಸದಿದ್ದರೆ ಹೋರಾಟ ಕೈಗೊಳ್ಳಲಾಗುವುದು’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದರು. ಈಗ ನೀರು ಹರಿಸಲು ಸಭೆಯಲ್ಲಿ ಒಪ್ಪಿಗೆ ಲಭಿಸದ ಕಾರಣ ನಿಗದಿಯಂತೆ ಸಭೆ ನಡೆಯಲಿದೆ ಎಂದು ವಿಧಾನಪರಿಷತ್‌ ಸದಸ್ಯೆ ಬಿಜೆಪಿಯ ಹೇಮಲತಾ ನಾಯಕ ತಿಳಿಸಿದರು.

ಡಿಸೆಂಬರ್‌ 2ನೇ ವಾರದಿಂದ ಕ್ರಸ್ಟ್‌ಗೇಟ್‌ ಅಳವಡಿಕೆ: ತಂಗಡಗಿ

ಜಲಾಶಯಕ್ಕೆ ಡಿಸೆಂಬರ್‌ ಎರಡನೇ ವಾರದಿಂದ ಹೊಸ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸುವ ಕಾರ್ಯ ಆರಂಭವಾಗಲಿದ್ದು ಜೂನ್‌ ವೇಳೆಗೆ ಎಲ್ಲ ಗೇಟ್‌ಗಳ ಬದಲಾವಣೆ  ಪೂರ್ಣಗೊಳ್ಳಲಿದೆ ಎಂದು ಐಸಿಸಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ‘ಪ್ರಜಾವಾಣಿ’ಗೆ ತಿಳಿಸಿದರು. ಬಿಜೆಪಿ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಬಿಜೆಪಿಗೆ ಮಾನ ಮರ್ಯಾದೆ ಇದೆಯೇ? ಮೊದಲು ಗೇಟ್‌ ಅಳವಡಿಕೆ ಮಾಡುತ್ತೇವೆ ಎಂದು ಸದನದಲ್ಲಿ ಜಲಸಂಪನ್ಮೂಲ ಸಚಿವರು ಹೇಳಿದಾಗ ಬಿಜೆಪಿ ಶಾಸಕರು ಡಿ.ಕೆ. ಶಿವಕುಮಾರ್‌ ಅವರನ್ನು ಅಭಿನಂದಿಸಿದ್ದಾರೆ. ಬಿಜೆಪಿ ಈಗ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಅವರಿಗೆ ಯಾವುದೇ ಬದ್ಧತೆಯಿಲ್ಲ’ ಎಂದರು. ಕ್ರಸ್ಟ್‌ಗೇಟ್ ಅಳವಡಿಸುವ ವಿಚಾರದಲ್ಲಿ ₹52 ಕೋಟಿ ಅವ್ಯವಹಾರವಾದ ಬಗ್ಗೆ ಬಿ. ಶ್ರೀರಾಮುಲು ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿ ‘ಕ್ರಸ್ಟ್‌ಗೇಟ್‌ಗಳಿಗೆ ಟೆಂಡರ್ ಮಾಡಿದ್ದು ಕೇಂದ್ರದ ಅಧೀನದಲ್ಲಿರುವ ತುಂಗಭದ್ರಾ ಮಂಡಳಿ. ರಾಜ್ಯ ಸರ್ಕಾರಕ್ಕೆ ಟೆಂಡರ್‌ ಕರೆಯುವ ಅಧಿಕಾರವಿಲ್ಲ. ಗೇಟ್‌ ತಯಾರಿಯ ಗುತ್ತಿಗೆಯನ್ನು ಗುಜರಾತ್‌ನ ಅಹಮದಾಬಾದ್‌ ಕಂಪನಿಗೆ ನೀಡಲಾಗಿದೆ. ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರವನ್ನು ಕೇಳಲಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.