ಕೊಪ್ಪಳ: ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬೊಮ್ಮಸಾಗರ ತಾಂಡಾ ಕ್ರಾಸ್ ಬಳಿ ಮಂಗಳವಾರ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಇಬ್ಬರು ವ್ಯಕ್ತಿಗಳು ದ್ವಿಚಕ್ರವಾಹನದಲ್ಲಿ ಬೊಮ್ಮಸಾಗರ ಕ್ರಾಸ್ ಕಡೆಯಿಂದ ಕುಷ್ಟಗಿ–ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯ ಏಕಮುಖ ಸಂಚಾರದ ರಸ್ತೆಯಲ್ಲಿ ತೆರಳುತ್ತಿದ್ದರು. ಅವರ ಹಿಂದಿನಿಂದ ಕುಷ್ಟಗಿ ಕಡೆಯಿಂದ ಬಂದ ಉತ್ತರ ಪ್ರದೇಶದ ಲಾರಿಯ ಚಾಲಕ ಶಿವಮಂಗಲ ಸುಖದೇವ್ ವೇಗವಾಗಿ ದ್ವಿಚಕ್ರ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರರನ್ನು ಲಾರಿ 100 ಮೀಟರ್ ದೂರ ಎಳೆದುಕೊಂಡು ಹೋಗಿದ್ದರಿಂದ ಬೈಕ್ ಚಲಾಯಿಸುತ್ತಿದ್ದ ಪರಸಪ್ಪ ಕನಕಗಿರಿ (40) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪರಸಪ್ಪನಿಗೆ ತೀವ್ರಗಾಯಗಳಾಗಿ ದೇಹದ ಮಾಂಸಖಂಡಗಳು ಹೊರಗಡೆ ಬಂದಿದ್ದವು.
ಬೈಕ್ ಹಿಂಬದಿಯಲ್ಲಿದ್ದ ಈರಪ್ಪ (43) ಗಂಭೀರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಕುರಿತು ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.