ಗಂಗಾವತಿ: ತಾಲ್ಲೂಕಿನ ಸಾಣಾಪುರ, ಹನುಮನಹಳ್ಳಿ, ಆನೆಗೊಂದಿ ಭಾಗದ ಕೃಷಿಭೂಮಿಗಳಲ್ಲಿ ಹೊಸದಾಗಿ ನಿರ್ಮಾಣವಾದ ಅನಧಿಕೃತ ಕಟ್ಟಡಗಳನ್ನು ಬುಧವಾರ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ನೇತೃತ್ವದಲ್ಲಿ ತಾಲ್ಲೂಕು ಆಡಳಿತ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು.
ಬೆಳಿಗ್ಗೆ 11 ಗಂಟೆಗೆ ಸಾಣಾಪುರ ಗ್ರಾಮಕ್ಕೆ ಆಗಮಿಸಿದ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಜೆಸ್ಕಾಂ, ಗ್ರಾ.ಪಂ ಅಧಿಕಾರಿ ತಂಡ, ಕೆರೆ ರಸ್ತೆಯ ಸರ್ವೆ ನಂ.6ರಲ್ಲಿನ ಸರ್ಕಾರಿ ಭೂಮಿಯಲ್ಲಿ ವೆಂಕಟನಾರಾಯಣ ಪುಲ್ಲಯ್ಯ ಎಂಬ ವ್ಯಕ್ತಿ ಬೇರೊಬ್ಬರಿಗೆ ಸ್ಥಳ ಗುತ್ತಿಗೆ ನೀಡಿ ಅದರಲ್ಲಿ ಕಬ್ಬಿಣದ ಕಂಬಗಳಿಂದ ಬೃಹತ್ ಕಟ್ಟಡ ನಿರ್ಮಿಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿತು.
ಬೃಹತ್ ಕಬ್ಬಿಣದ ಕಂಬಗಳಿಂದ ನಿರ್ಮಿಸುತ್ತಿದ್ದ ಕಟ್ಟಡವನ್ನು ಕಂಡ ಅಧಿಕಾರಿಗಳು ನಿಬ್ಬೆರಗಾದರು. ನಂತರ ಕಟ್ಟಡದ ಮೌಲ್ಯ ಅಂದಾಜು ಮಾಡಿದಾಗ ₹15 ಲಕ್ಷಕ್ಕೂ ಹೆಚ್ಚಿರುವುದು ತಿಳಿದುಬಂದಿತು. ನಂತರ ಗಂಟೆ ಗಡುವು ನೀಡಿ, ಸಾಮಗ್ರಿಗಳು ಬಿಚ್ಚಿಕೊಳ್ಳುವಂತೆ ತಿಳಿಸಿದರು. ಕಟ್ಟಡದವರು ವಾರ ಗಡುವು ನೀಡುವಂತೆ ತಿಳಿಸಿದಾಗ, ಜೆಸಿಬಿ ಮೂಲಕ ಕಬ್ಬಿಣದ ಕಟ್ಟಡವನ್ನು ಸಂಪೂರ್ಣ ತೆರವುಗೊಳಿಸಲಾಯಿತು. ಸಾಣಾಪುರ ಗ್ರಾಮದ ಅನಧಿಕೃತ ಲೇಔಟ್‌ನಲ್ಲಿ ಪರವಾನಗಿ ಇಲ್ಲದೆ ನಿರ್ಮಿಸುತ್ತಿದ್ದ ಮನೆಯನ್ನು ನೆಪಕ್ಕೆ ಮೂಲೆಯಷ್ಟು ತೆರವುಗೊಳಿಸಿದರು.
ತೆರವಿಗೆ ಅಡ್ಡಿ: ವಿರೂಪಾಪುರ ಗಡ್ಡೆಯ ನದಿಪಾತ್ರದಲ್ಲಿ ಕೆಲವರು ಮನೆ ನಿರ್ಮಾಣ ಮಾಡಿಕೊಂಡಿದ್ದು, ಇವುಗಳ ತೆರವಿಗೆ ಅಧಿಕಾರಿಗಳು ಮುಂದಾದಾಗ ಮನೆಯವರು ಅಡ್ಡಿಪಡಿಸಿದರು. ಸಾಮಗ್ರಿ ತೆಗೆದುಕೊಳ್ಳಲು ಅವಕಾಶ ಕೊಡುವಂತೆ ಕೇಳಿದರು. ರಾಜವಂಶಸ್ಥೆ ಲಲಿತರಾಣಿ ಅವರು ಸ್ವಯಂ ಪ್ರೇರಿತ ತೆರವು ಮಾಡಿಕೊಳ್ಳುವುದಾಗಿ ಅಧಿಕಾರಿಗಳಿಗೆ ಭರವಸೆ ನೀಡಿದರು. ಒಂದು ಕೊಠಡಿಯನ್ನು ಮಾತ್ರ ತೆರವು ಮಾಡಲಾಯಿತು.
ನೆಪದ ಕಾರ್ಯಾಚರಣೆ: ಇದೇ ಭಾಗದಲ್ಲಿ ಅನಧಿಕೃತ ರೆಸಾರ್ಟ್‌ಗಳು ತುಂಬಾ ಇದ್ದು, ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಹಲವು ಬಾರಿ ಪ್ರಕರಣಗಳು ದಾಖಲಾಗಿವೆ. ಕೃತ್ಯಗಳು ಕೂಡ ನಡೆದಿವೆ. ಆದರೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ನ್ಯಾಯಾಲಯದ ಆದೇಶ ಪಾಲಿಸಿ ಕೇವಲ ಹೊಸದಾಗಿ ನಿರ್ಮಿಸಿದ ಕಟ್ಟಡಗಳ ತೆರವು ಮಾಡಿದ್ದು ಕೆಲವರು ಅಸಮಾಧಾನಕ್ಕೆ ಕಾರಣವಾಯಿತು.
ತಹಶೀಲ್ದಾರ್ ಯು.ನಾಗರಾಜ, ಕಂದಾಯ ನಿರೀಕ್ಷಕ ಸೈಯದ್ ಬಷಿರುದ್ದೀನ್, ಗ್ರಾಮಲೆಕ್ಕಿಗ ಚನ್ನಪ್ಪ, ಸಾಣಾಪುರ ಗ್ರಾ.ಪಂ ಪಿಡಿಒ ವತ್ಸಲಾ ಸೇರಿದಂತೆ ಪೊಲೀಸ್ ಇಲಾಖೆ, ಜೆಸ್ಕಾಂ, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.
ಸದ್ಯ ಕಂದಾಯ ಸರ್ಕಾರಿ ಅರಣ್ಯ ಇಲಾಖೆ ಭೂಮಿಯಲ್ಲಿ ಹೊಸದಾಗಿ ನಿರ್ಮಿಸಿಕೊಂಡ ಕಟ್ಟಡ ತೆರವು ಮಾಡಲಾಗಿದೆ. ಗ್ರಾ.ಪಂ ಹಂತದಿಂದಲೇ ಇವುಗಳಿಗೆ ಕಡಿವಾಣ ಹಾಕಬೇಕು.ರಮೇಶ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ
ರಮೇಶ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ
ಪ್ರಕರಣ ವಜಾ
2019ರಲ್ಲಿ ನ್ಯಾಯಾಲಯ ಆದೇಶದಂತೆ ವಿರೂಪಾಪುರಗಡ್ಡೆ ಗ್ರಾಮದಲ್ಲಿ ಅನಧಿಕೃತ ರೆಸಾರ್ಟ್‌ಗಳನ್ನು ತೆರವುಗೊಳಿಸಲಾಗಿತ್ತು. ಇದರ ನಂತರ ಸಾಣಾಪುರ ಆನೆಗೊಂದಿ ಭಾಗದ ಕಂದಾಯ ಭೂಮಿಗಳಲ್ಲಿ ಪರವಾನಗಿ ಇಲ್ಲದೆ ರೆಸಾರ್ಟ್‌ಗಳು ನಿರ್ಮಿಸಲಾಗಿದೆ. ಹಂಪಿ ಪ್ರಾಧಿಕಾರದ ವಿರುದ್ಧ ಬೆಂಗಳೂರು ನ್ಯಾಯಾಲಯದಲ್ಲಿ ಕೊಟ್ಟೂರು ಸ್ವಾಮಿ ಕಲ್ಯಾಣ ಕೇಂದ್ರ 2017ರಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. 2024ರ ಫೆ. 24ರಂದು ಕೊಟ್ಟೂರು ಸ್ವಾಮಿ ಕಲ್ಯಾಣ ಕೇಂದ್ರದ ಪ್ರಾಧಿಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ವಜಾಗೊಳಿಸಿ 2021ರ ಪ್ರಾಧಿಕಾರ ಮಾಸ್ಟರ್ ಪ್ಲಾನ್ ಅನ್ವಯ ಅನಧಿಕೃತ ಹೊಸ ಕಟ್ಟಡಗಳ ನಿರ್ಮಾಣ ತೆರವಿಗೆ ಆದೇಶ ನೀಡಿದ್ದು ಈ ಹಿಂದೆ ನೋಟಿಸ್ ನೀಡಿ ವಿದ್ಯುತ್ ಕಡಿತ ಮಾಡಿ ಉಳಿದ ರೆಸಾರ್ಟ್ ಬಿಟ್ಟು ಹೊಸ ಕಟ್ಟಡಗಳ ತೆರವಿಗೆ ಮಾತ್ರ ಆದೇಶ ನೀಡಿದ್ದು ಚರ್ಚೆಗೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.