ADVERTISEMENT

ಕೊಪ್ಪಳ| ಚುನಾವಣೆಯಲ್ಲಿ ಎಲ್ಲರಿಗೂ ಅತಂತ್ರ ಪರಿಸ್ಥಿತಿ: ಪ್ರಕಾಶ ಕಮ್ಮರಡಿ

‘ಮುಕ್ತ ಮತದಾನ ಸಮರ್ಥ ಸರ್ಕಾರ’ ತಂಡದ ಮುಂದಾಳು ಪ್ರಕಾಶ ಕಮ್ಮರಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 8:35 IST
Last Updated 4 ಮಾರ್ಚ್ 2023, 8:35 IST
ಪ್ರಕಾಶ್‌ ಕಮ್ಮರಡಿ
ಪ್ರಕಾಶ್‌ ಕಮ್ಮರಡಿ   

ಕೊಪ್ಪಳ: ‘ಮಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರ ಮನದಾಳ ಅರಿಯಲು ಬೆಂಗಳೂರಿನ ಸಮಾಜವೇದಿ ವೇದಿಕೆ ಮತ್ತು ಜನತಾಂತ್ರಿಕ ಸಮಾಜವಾದ ಸಂಘಟನೆ ಸ್ವತಂತ್ರ್ರವಾಗಿ ನಡೆಸಿದ ಜನತಂತ್ರದ ನೈಜ ಹಕ್ಕುದಾರರ ಧ್ವನಿ ಹಿಡಿದಿಡುವ ಡಯಾಗ್ನೋಸ್ಟಿಕ್‌ ವರದಿಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ ಎನ್ನುವ ಅಂಶ ಗೊತ್ತಾಗಿದೆ’ ಎಂದು ಸ್ವತಂತ್ರ ಅಧ್ಯಯನ ತಂಡದ ಮುಂದಾಳು ಡಾ. ಟಿ.ಎನ್‌. ಪ್ರಕಾಶ್‌ ಕಮ್ಮರಡಿ ತಿಳಿಸಿದರು.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ರಾಜ್ಯದ 20 ಜಿಲ್ಲೆಗಳಿಂದ ಎಲ್ಲಾ ವಯಸ್ಸು, ಶೈಕ್ಷಣಿಕ ಹಿನ್ನಲೆಯ ವಿವಿಧ ಜಾತಿ, ಧರ್ಮಗಳ ಸಾವಿರಕ್ಕೂ ಹೆಚ್ಚು ಮತದಾರರ ಕ್ಷಿಪ್ರ ಸಮೀಕ್ಷೆ 2022ರ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಮಾಡಲಾಗಿದೆ. ನಿರುದ್ಯೋಗ, ಬೆಲೆಏರಿಕೆ, ಭ್ರಷ್ಟಾಚಾರ ರಾಜ್ಯದ ಜನರನ್ನು ಕಾಡುತ್ತಿರುವ ಸಮಸ್ಯೆಗಳಾಗಿವೆ. ಇವುಗಳ ಜೊತೆಗೆ ರಾಜ್ಯದಲ್ಲಿ ಇತ್ತೀಚೆಗೆ ಜರುಗಿದ ಕೋಮುಗಲಭೆ, ಮತೀಯ ವಿವಾದಗಳು ಸಹಜವಾಗಿ ಹುಟ್ಟಿರುವುದಿಲ್ಲ. ಅವುಗಳನ್ನು ಸೃಷ್ಟಿ ಮಾಡಲಾಗಿದೆ ಎನ್ನುವ ಮಹತ್ವದ ಅಂಶ ಪದವೀಧರರು, ಪಟ್ಟಣದ ಜನ ಮತ್ತು ಮೇಲ್ಜಾತಿಯ ಸಮುದಾಯದ ಜನ ಪಾಲ್ಗೊಂಡಿದ್ದ ಜನರ ಸಮೀಕ್ಷೆಯಿಂದ ಗೊತ್ತಾಗಿದೆ’ ಎಂದರು.

‘ಹಣದಿಂದ ಆಮಿಷವೊಡ್ಡಿ ಮಾಧ್ಯಮಗಳ ಮೂಲಕ ಸುಳ್ಳು ನಿರೂಪಣೆಗಳನ್ನು ಭಿತ್ತಿ ಚುನಾವಣಾ ಫಲಿತಾಂಶವನ್ನು ತಮ್ಮ ಪರ ಮಾಡಿಕೊಳ್ಳುವ ಹುನ್ನಾರಗಳು ಮುಂಬರುವ ಚುನಾವಣೆಯಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳಲಿವೆ’ ಎಂದರು.

ADVERTISEMENT

‘ಸಮರ್ಥ ನಾಯಕರು ವಿಷಯದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದಾಗ ಕಾಂಗ್ರೆಸ್‌ ಪಕ್ಷಕ್ಕೆ ಸಿದ್ದರಾಮಯ್ಯ ಸಮರ್ಥರು ಎನ್ನುವುದು ಮತದಾರರ ಅಭಿಪ್ರಾಯವಾಗಿದೆ. ಬಿಜೆಪಿಯಲ್ಲಿ ಹೊಸಬರು ಬರಬೇಕಿದೆ ಎನ್ನುವ ಮಹತ್ವದ ಆಶಯ ವ್ಯಕ್ತವಾಗಿದೆ. ಇದು ಕರಾವಳಿ, ಮಲೆನಾಡು ಭಾಗದ ಮತದಾರರ ಜನಮತವೂ ಆಗಿದೆ ಎನ್ನುವುದು ಮುಖ್ಯ’ ಎಂದರು.

ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ ‘ಬೆಲೆ ಏರಿಕೆ, ಭ್ರಷ್ಟಾಚಾರದಿಂದ ಜನ ಬೇಸತ್ತು ಹೋಗಿದ್ದಾರೆ. ವಿಶ್ವಗುರುವಾಗುವ ಹವಣಿಕೆಯಲ್ಲಿರುವ ಭಾರತ ಮೊದಲು ಶಾಲಾ, ಕಾಲೇಜುಗಳಲ್ಲಿ ಗುರುಗಳನ್ನು ನೇಮಕ ಮಾಡಲಿ. ಒಂದು ದೇಶ, ಒಂದೇ ಭಾಷೆ, ಒಂದೇ ಧರ್ಮ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ. ಹಲವು ಭಾಷೆ, ಹಲವು ಧರ್ಮ ಎನ್ನುವುದೇ ಪ್ರಧಾನವಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಹೋರಾಟಗಾರ ಬಸವರಾಜ ಶೀಲವಂತರ, ಆರ್ಥಿಕ ತಜ್ಞ ಜಿ.ವಿ. ಸುಂದರ, ಮಹಾಂತೇಶ ಕೊತಬಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.