ADVERTISEMENT

ಅಕಾಲಿಕ ಮಳೆ: ಸಂಕಷ್ಟದಲ್ಲಿ ಅನ್ನದಾತ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 16:33 IST
Last Updated 9 ನವೆಂಬರ್ 2023, 16:33 IST
ಕನಕಗಿರಿ ಸಮೀಪದ ನವಲಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನ ಕೆರೆಯಾಗಿರುವುದು
ಕನಕಗಿರಿ ಸಮೀಪದ ನವಲಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನ ಕೆರೆಯಾಗಿರುವುದು   

ಕನಕಗಿರಿ: ಮಳೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಬುಧವಾರ ರಾತ್ರಿ ಸುರಿದ ಅಕಾಲಿಕ ಮಳೆ ಮತ್ತಷ್ಟು ಸಂಕಷ್ಟ ತಂದಿದೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ರೈತರ ಬೆಳೆಗಳು ಹಾನಿಯಾಗಿವೆ. ಒಣಭೂಮಿ ಪ್ರದೇಶವಾಗಿರುವ ಈ ಭಾಗದ ರೈತರು ಬೋರ್‌ವೆಲ್ ನೀರು ಬಳಸಿಕೊಂಡು ಭತ್ತ ನಾಟಿ ಮಾಡಿದ್ದು ಇಲ್ಲಿನ ಲಕ್ಷ್ಮಿದೇವಿ ಕೆರೆ ಪರಿಸರದಲ್ಲಿರುವ ರೈತರ ಹೊಲಗಳಲ್ಲಿ ಬೆಳೆದು ಕಟಾವ್ ಹಂತದಲ್ಲಿರುವಾಗ ಮಳೆ ಹಾಗೂ ಗಾಳಿಗೆ ಭತ್ತದ ಬೆಳೆ ನಾಶವಾಗಿದೆ.

ರೈತರಾದ ನೀಲಮ್ಮ ಗಡಾದ ಅವರ 6 ಎಕರೆ, ಹೊನ್ನುರುಸಾಬ ಸಂತ್ರಾಸ್ ಹಾಗೂ ಗಂಗಾಧರ ಸಜ್ಜನ್ ಅವರ ತಲಾ 4 ಎಕರೆ, ಹಟೇಲಸಾಬ ಸಂತ್ರಾಸ್ 4.5 ಎಕರೆ ಸೇರಿದಂತೆ ಹಲವಾರು ರೈತರು ಬೆಳೆದ ಭತ್ತದ ಬೆಳೆ ನೀರುಪಾಲಾಗಿದೆ.

ADVERTISEMENT

ಮಳೆ ಇಲ್ಲದೆ ಬೆಳೆ ಒಣಗುತ್ತಿದ್ದ ಸಮಯದಲ್ಲಿ ಟ್ಯಾಂಕರ್ ಮೂಲಕ ಬೆಳೆಗಳಿಗೆ ನೀರು ಹರಿಸಿದ್ದು, ಈಗ ಅಕಾಲಿಕವಾಗಿ ಸುರಿದ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬೀಳದ ಸ್ಥಿತಿ ತಲೆದೋರಿದೆ. ಭತ್ತದ ಸಸಿ ಖರೀದಿ, ನಾಟಿ ಮಾಡುವುದು, ಗೊಬ್ಬರ, ಕೀಟನಾಶಕ ಔಷಧಿ ಸಿಂಪರಣೆ ಸೇರಿದಂತೆ ಇತರೆ ಕೃಷಿ ಕೆಲಸಕ್ಕೆ ಪ್ರತಿ ಎಕೆರೆಗೆ ₹25 ಸಾವಿರ ಹಣ ವೆಚ್ಚ ಮಾಡಲಾಗಿದೆ. ಬೆಳೆದ ಬೆಳೆ ಕೈಗೆ ಸಿಗದ ಲಕ್ಷಣಗಳು ಕಾಣುತ್ತಿಲ್ಲ. ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ ಎಂದು ರೈತ ಅಮರೇಶ ಗಡಾದ ಅವರು ಅಳಲು ತೋಡಿಕೊಂಡರು.

ಪಟ್ಟಣದ ವಿವಿಧ ವಾರ್ಡ್‌ಗಳ ತಗ್ಗು ಗುಂಡಿಗಳಲ್ಲಿ ನೀರು ನಿಂತು ಪಾದಚಾರಿಗಳು ಹಾಗೂ ದ್ವಿ ಚಕ್ರ ವಾಹನ ಸವಾರರ ಸಂಚಾರಕ್ಕೆ ಅಡಚಣೆಯಾಗಿದೆ. ಪಟ್ಟಣದ 7ನೇ ವಾರ್ಡ್‌ನ ಅಶೋಕ ಯಂಕಣ್ಣ ಅವರ ಮನೆಯ ಮೇಲ್ಛಾವಣಿ ಕುಸಿದಿರುವುದು ಗೊತ್ತಾಗಿದೆ. ನವಲಿ ಕಂದಾಯ ವ್ಯಾಪ್ತಿಯಲ್ಲಿ 103.4 ಎಂಎಂ ಮಳೆ ಸುರಿದಿದ್ದು, ಜೀರಾಳ ಕಲ್ಗುಡಿ, ಹಿರೇ ಡಂಕನಕಲ್, ಹಳೆ ಕಲ್ಗುಡಿ, ಜೀರಾಳ, ನವಲಿ ಇತರೆ ಗ್ರಾಮಗಳಲ್ಲಿ ಅಂದಾಜು 152 ಎಕರೆ ಭತ್ತದ ಬೆಳೆ ನೆಲಕ್ಕುರುಳಿದೆ ಎಂದು ಕಂದಾಯ ನಿರೀಕ್ಷಕ ಹನುಮಂತಪ್ಪ ತಿಳಿಸಿದರು.

ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಹಾನಿಯಾದ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ನವಲಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಮಳೆ ನೀರು ನಿಂತು ಕೆರೆಯಾಗಿ ಬದಲಾಗಿದ್ದು, ವಿದ್ಯಾರ್ಥಿಗಳು ನೀರಿನಲ್ಲಿಯೇ ತರಗತಿಗಳಿಗೆ ಹಾಜರಾದರು.

ನರೇಗಾ ಅನುದಾನದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕಾಲೇಜಿನ ಮೈದಾನವನ್ನು ಕಳೆದ ವರ್ಷ ಅಭಿವೃದ್ದಿ ಪಡಿಸಲಾಗಿದೆ. ಕಾಮಗಾರಿ ಅವೈಜ್ಞಾನಿಕವಾದ ಪರಿಣಾಮ ಮೈದಾನದಲ್ಲಿ ನೀರು ಸಂಗ್ರಹವಾಗಿದೆ. ನೀರು ಬೇರೆಡೆಗೆ ಹರಿಯುವಂತೆ ನೋಡಿಕೊಂಡಿಲ್ಲ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹನುಮಂತಪ್ಪ ಕಲ್ಲೂರು ದೂರಿದರು

ಕನಕಗಿರಿಯ ನೀಲಮ್ಮ ಗಡಾದ ಅವರ ಹೊಲದಲ್ಲಿ ಬೆಳೆದು ನಿಂತ ಭತ್ತ ಮಳೆಗೆ ನೆಲಕ್ಕುರುಳಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.