ಕಾರಟಗಿ: ಯೂರಿಯಾ ರಸಗೊಬ್ಬರ ವಿಷಯದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಕರೆ ನೀಡಿದ್ದ ಶುಕ್ರವಾರದ ಕಾರಟಗಿ ಬಂದ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳು ಭಾಗಶಃ ಬಂದ್ ಆಗಿದ್ದರೆ ಬಹುತೇಕ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು. ಪ್ರಮುಖ ಬೀದಿಗಳಲ್ಲಿ ಚಕ್ಕಡಿಗಳ ಮೂಲಕ ಮೆರಣಿಗೆ ನಡೆಸಿದ ಪಕ್ಷದ ವಿವಿಧ ಮೋರ್ಚಾಗಳ ಕಾರ್ಯಕರ್ತರು, ಮುಖಂಡರು ನಂತರ ಎಪಿಎಂಸಿ ಬಳಿ ನಡೆಸಿದ ಬಹಿರಂಗ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ನಂತರ ತಹಶೀಲ್ದಾರ್ ಎಂ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ‘ಮುಂಗಾರು ಹಂಗಾಮಿನ ಕೃಷಿಗೆ ಸಂಬಂಧಿಸಿದಂತೆ ರಸಗೊಬ್ಬರಗಳ ಬೇಕು ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಅರಿವಿರಬೇಕಿತ್ತು. ಅಂದರೆ ಮುಂಚಿತವಾಗಿ ಗೊಬ್ಬರ ಸಂಗ್ರಹಿಸಿ ರೈತರಿಗೆ ಸಕಾಲದಲ್ಲಿ ಯೂರಿಯಾ ಗೊಬ್ಬರ ಪೂರೈಸಲು ಸಾಧ್ಯವಾಗುತ್ತಿತ್ತು. ಆದರೆ ಈ ವಿಷಯದಲ್ಲಿ ನಿರ್ಲಕ್ಷ್ಯವಹಿಸಿರುವ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರಿಸುತ್ತಿದೆ. ಅಲ್ಲದೆ ರಾಜ್ಯಕ್ಕೆ ಬಂದಿದ್ದ ಯೂರಿಯಾವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ’ ಎಂದು ಆರೋಪಿಸಿದರಲ್ಲದೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ರಾಜೀನಾಮೆಗೆ ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ದಢೇಸೂಗೂರು ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಹರಿಹಾಯ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರೈತರಿಗೆ ಒಂದಲ್ಲ ಒಂದು ರೀತಿಯಲ್ಲಿ ಅನ್ಯಾಯವಾಗುತ್ತಿದೆ. ಈ ಭಾಗದ ಭಗೀರಥ ಎಂದು ಕೊಚ್ಚಿಕೊಳ್ಳುವ ಸಚಿವ ತಂಗಡಗಿ ರೈತರ ವಿಷಯದಲ್ಲಿ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಪ್ರಮುಖರಾದ ಎಚ್.ಗಿರೇಗೌಡ, ನಾಗರಾಜ ಬಿಲ್ಗಾರ್, ಗುರುಸಿದ್ದಪ್ಪ ಯರಕಲ್, ಚಂದ್ರಶೇಖರ ಮುಸಾಲಿ, ಬಸವರಾಜ ಎತ್ತಿನಮನಿ, ಶಿವಶರಣೇಗೌಡ ಯರಡೋಣಾ, ಶಿವಶರಣಪ್ಪ ಶಿವಪೂಜಿ, ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ರತ್ನಾಕುಮಾರಿ, ಶಾಂತಾ ಪವಾರ್, ಅಶ್ವಿನಿ ದೇಸಾಯಿ, ಹುಲಿಗೆಮ್ಮ ನಾಯಕ, ಅಕ್ಕಮಹಾದೇವಿ, ದೀಪಾ ಹಿರೇಮಠ, ಮರಿಯಪ್ಪ ಸಾಲೋಣಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.