ADVERTISEMENT

ಮೋದಿ ದೇಶ ಕಂಡ ದುರ್ಬಲ ಪ್ರಧಾನಿ: ವಿ.ಎಸ್‌. ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 12:18 IST
Last Updated 19 ಜೂನ್ 2022, 12:18 IST
ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ
ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ   

ಕೊಪ್ಪಳ: ಸುಳ್ಳು ಹೇಳಿಕೆಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿರುವ ನರೇಂದ್ರ ಮೋದಿ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ ಟೀಕಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ’2016ರಿಂದ 2021ರ ಅವಧಿಯಲ್ಲಿ ಕೇಂದ್ರ ಸರ್ಕಾರ 4.44 ಲಕ್ಷ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿದೆ. ವರ್ಷದಿಂದ ವರ್ಷಕ್ಕೆ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಕೋಟ್ಯಂತರ ಜನರಿಗೆ ಉದ್ಯೋಗ ಕೊಡುವುದಾಗಿ ಹೇಳಿ ಮಾತು ತಪ್ಪಿದೆ. ಮೋದಿ ಮಾತುಗಳು ಕೇವಲ ಹೇಳಿಕೆಗೆ ಸೀಮಿತವಾಗಿವೆ‘ ಎಂದು ಆರೋಪಿಸಿದರು.

’ಪ್ರತಿ ಮನುಷ್ಯನಿಗೆ 17ರಿಂದ 23 ವರ್ಷದ ವಯಸ್ಸು ಬಹಳ ಮಹತ್ವದ್ದು. ಅತ್ತ ಯುವಕರು ಓದು ಪೂರ್ಣಗೊಳಿಸಲು ಆಗದು, ಇನ್ನೊಂದೆಡೆ ನಾಲ್ಕು ವರ್ಷ ಸೈನ್ಯದಲ್ಲಿ ಕೆಲಸ ನಿರ್ವಹಿಸಿದ ನಂತರ ಮುಂದೇನು ಮಾಡಬೇಕು? ಯುವ ಜನತೆಯನ್ನು ಅತಂತ್ರಗೊಳಿಸಿ, ಅವರ ಭವಿಷ್ಯ ಹಾಳು ಮಾಡಲು ಹೊರಟಿದೆ. ಆದ್ದರಿಂದ ಅಗ್ನಿಪಥ್‌ ಯೋಜನೆಯನ್ನು ಕೇಂದ್ರ ಕೈಬಿಡಬೇಕು. ಇದು ಜಾರಿಗೆ ತಂದರೆ ದೇಶಕ್ಕೆ ದ್ರೋಹ ಮಾಡಿದಂತೆ‘ ಎಂದು ಹೇಳಿದರು.

ADVERTISEMENT

‘ಅಗ್ನಿಪಥ್‌ ವಿರೋಧಿಸಿ ದೇಶದಾದ್ಯಂತ ನಡೆಯುತ್ತಿರುವ ಹಿಂಸಾರೂಪದಲ್ಲಿ ಯುವಕರು ಭಾಗಿಯಾಗಬಾರದು. ಅಹಿಂಸಾ ರೂಪದಲ್ಲಿ ಹೋರಾಟ ಮಾಡಬೇಕು. ಈ ಹೋರಾಟ ಬಿಜೆಪಿಯ ಜನವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಭಾರತೀಯ ಸೈನ್ಯವನ್ನು ಮೋದಿ ಸರ್ಕಾರ ಕೇಸರಿಕರಣ ಮಾಡಲು ಹೊರಟಿದೆ‘ ಎಂದು ದೂರಿದರು.

ಅಗ್ನಿಪಥ್‌ ಹೋರಾಟದ ಹಿಂದೆ ಕಾಂಗ್ರೆಸ್‌ ಕೈವಾಡವಿದೆ ಎನ್ನುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ ‘ಕಾಂಗ್ರೆಸ್‌ ಯಾವತ್ತೂ ಲಾಠಿ, ಬಂದೂಕು ಹಿಡಿದಿಲ್ಲ. ಚಡ್ಡಿ ಹಾಕಿಕೊಂಡು ಆರ್‌ಎಸ್‌ಎಸ್‌ ಶಾಖೆಯಲ್ಲಿ ನೀವು ಹಿಡಿದಿದ್ದೇನು‘ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.