ಕೊಪ್ಪಳ: ‘ಹಿಂದೂ ಧರ್ಮದ ಎರಡು ಮಹಾಕಾವ್ಯಗಳಲ್ಲಿ ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣಗ್ರಂಥವು ಮನುಕುಲಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಮಂಗಳವಾರ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಮೀಸಲಾತಿಗೆ ಅನುಗುಣವಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದೆ. ಶೇ. 24.1ರಷ್ಟು ಅನುದಾನ ಎಸ್‌ಸಿಎಸ್‌ಟಿ ಅಭಿವೃದ್ಧಿಗೆ ಮೀಸಲಿಡಲಾಗಿದೆ’ ಎಂದರು.
‘ಜಿಲ್ಲೆಯಲ್ಲಿ ನಾಯಕ ಸಮಾಜದ ಜನಸಂಖ್ಯೆ ಹೆಚ್ಚಿರುವ ಕಾರಣ ನಾಯಕ ಸಮಾಜದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳ ಕೊರತೆಯಿದ್ದು, ಅದನ್ನು ನೀಗಿಸಲಾಗುವುದು. ಏಕಲವ್ಯ ವಸತಿ ಶಾಲೆ ಚಾಮರಾಜನಗರದಲ್ಲಿ ಮಾತ್ರ ಇದೆ, ಹಾಗಾಗಿ ಕರ್ನಾಟಕದಲ್ಲಿ ಅತೀ ಹೆಚ್ಚು ವಾಲ್ಮೀಕಿ ಜನಾಂಗದರು ಇರುವ ನಮ್ಮ ಜಿಲ್ಲೆಗೂ ಏಕಲವ್ಯ ವಸತಿ ಶಾಲೆಯನ್ನು ಮಂಜೂರು ಮಾಡುವಂತೆ ಸಿ.ಎಂ.ಗೆ ಪತ್ರ ಬರೆದಿದ್ದೇನೆ’ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ ‘ವಾಲ್ಮೀಕಿ ಅವರು ರಚಿಸಿದ ರಾಮಾಯಣದಿಂದ ನಾವು ಬುದುಕು ರೂಪಿಸಿಕೊಂಡಿದ್ದೇವೆ. ನಮ್ಮ ಸಮಾಜದ ಮಕ್ಕಳಿಗೆ ಹಾಸ್ಟೆಲ್‌ಗಳ ಕೊರತೆಯಿದ್ದು, ಶಾಸಕರು ಹಾಗೂ ಸಚಿವರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ಜಿಲ್ಲಾಕೇಂದ್ರದಲ್ಲಿ ವಾಲ್ಮೀಕಿ ಮಹರ್ಷಿ ಮೂರ್ತಿ ಪ್ರತಿಷ್ಠಾಪಿಸುವ ಕೆಲಸ ಒಂದುವರ್ಷದ ಒಳಗೆ ಆಗಬೇಕು’ ಎಂದು ಆಗ್ರಹಿಸಿದರು.
ಮಹರ್ಷಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಿದ ಗವಿಸಿದ್ದಪ್ಪ ಮುತ್ತಾಳ ‘ವಾಲ್ಮೀಕಿ ಅವರು ರಚಿಸಿರುವ ರಾಮಾಯಣದಲ್ಲಿನ ತತ್ವಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆ ಸಾರ್ಥಕತೆ ಎನಿಸುತ್ತದೆ’ ಎಂದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಕ್ರೀಡೆ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಸಾಧನೆ ಮಾಡಿದ ಪರಿಶಿಷ್ಟ ಪಂಗಡ ಸಮಾಜದ ಮಕ್ಕಳನ್ನು ಸನ್ಮಾನಿಸಲಾಯಿತು. ಪ್ರತಿ ವರ್ಷ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಅವರು ಪರಿಶಿಷ್ಟ ಪಂಗಡದವರ ಸಾಮಾಜಿಕ ಕಾರ್ಯವನ್ನು ಗುರುತಿಸಿ ₹50 ಸಾವಿರ ನಗದು ಮತ್ತು ಗೌರವ ಸನ್ಮಾನಕ್ಕೆ ಸರಸ್ವತಿ ನಾಯಕ ಭಾಜನರಾಗಿದ್ದಾರೆ.
ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ಧಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೋಗಲದ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಡ್ಡಿ ಶ್ರೀನಿವಾಸ, ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ತಹಶೀಲ್ದಾರ್ ವಿಠ್ಠಲ ಚೌಗುಲಾ, ತಾಲ್ಲೂಕು ಪಂಚಾಯಿತಿ ಇಒ ದುಂಡಪ್ಪ ತುರಾದಿ, ಧರ್ಮದರ್ಶಿ ರಾಮಣ್ಣ ಕಲ್ಲನವರ, ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ ಡೊಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ನಾಯಕ, ಹನುಮಂತಪ್ಪ ನಾಯಕ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಮಹರ್ಷಿ ವಾಲ್ಮೀಕಿ ಅವರು ಹಿಂದೂ ಧರ್ಮದ ಸುಪ್ರಸಿದ್ಧ ಕಾವ್ಯಗಳಲ್ಲಿ ಒಂದಾದ ರಾಮಾಯಣ ರಚಿಸಿದ್ದಾರೆ. ಅದು ನ್ಯಾಯ ಧರ್ಮ ಮತ್ತು ಮಾನವೀಯತೆಯ ಮಮಕಾರ ತಿಳಿಸುತ್ತದೆ.ಅಮ್ಜದ್ ಪಟೇಲ್ ನಗರಸಭೆ ಅಧ್ಯಕ್ಷ
ಸಮಾಜದ ಜನರಲ್ಲಿ ಹೆಸರಲ್ಲಿ ಬಹಳಷ್ಟು ಜನ ಖೊಟ್ಟಿ ಪ್ರಮಾಣಪತ್ರ ಪಡೆಯುವ ಪ್ರಕರಣಗಳು ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು.ಕೆ.ಎನ್.ಪಾಟೀಲ ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ
‘ಮುಂದಿನ ಜಯಂತಿ ವೇಳೆ ಮೂರ್ತಿ ಸ್ಥಾಪನೆ‘ ಕೊಪ್ಪಳ: ನಗರದಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿ ಸ್ಥಾಪನೆ ಅಗತ್ಯವಿದ್ದು ಆದಷ್ಟು ಬೇಗನೆ ಕ್ರಮ ವಹಿಸುವುದಾಗಿ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು. ‘ಮೂರ್ತಿ ಸ್ಥಾಪನೆಗಾಗಿ ನಗರಸಭೆ ಸ್ಥಳ ಮತ್ತು ಎಲ್‌ಐಸಿ ಕಚೇರಿ ಹತ್ತಿರ ಎರಡು ಸ್ಥಳಗಳನ್ನು ಗುರುತಿಸಲಾಗಿದ್ದು ಜಾಗ ಅಂತಿಮಗೊಳಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಮುಂದಿನ ವರ್ಷ ಮೂರ್ತಿ ಸಮೇತ ವಾಲ್ಮೀಕಿ ಜಯಂತಿ ಮಾಡೋಣ. ಕನಕಗಿರಿ ಮತ್ತು ಕಾರಟಗಿ ತಾಲ್ಲೂಕುಗಳಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ತಲಾ ₹2 ಕೋಟಿ ನೀಡಿದ್ದೇನೆ’ ಎಂದು ತಿಳಿಸಿದರು.
ಕ್ರೀಡೆಯಲ್ಲಿ ಸಾಧನೆಗೆ ಸನ್ಮಾನ ಕೊಪ್ಪಳ: ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಸಾಹಿತ್ಯ ಹಾಗೂ ಅಕ್ಷರ ಗೊಂಡಬಾಳ ಅವರನ್ನು ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಸಾಹಿತ್ಯ ರಾಷ್ಟ್ರೀಯ ಪೆಂಕಾಕ್ ಸಿಲತ್ ಚಾಂಪಿಯನ್‌ಷಿಪ್‌ನ ಟ್ಯಾಂಡಿಂಗ್ ನ ಜೂನಿಯರ್ ವಿಭಾಗದಲ್ಲಿ ಕಂಚು ಟೀನ್‌ನ ಟ್ಯಾಂಡಿಂಗ್ ಫೈಟ್ ವಿಭಾಗದಲ್ಲಿ ಅಕ್ಷರ ಬೆಳ್ಳಿ ಪದಕ ಜಯಿಸಿದ್ದಾರೆ. ಇವರು ಮಂಜುನಾಥ ಗೊಂಡಬಾಳ ಹಾಗೂ ಜ್ಯೋತಿ ದಂಪತಿಯ ಪುತ್ರಿಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.