ಗಂಗಾವತಿ: ಆನೆಗೊಂದಿ ಭಾಗ ರಾಮಾಯಣ ಕಾಲದ ಇತಿಹಾಸ ಹೊಂದಿದ್ದು, ಮುಂದಿನ ಪೀಳಿಗೆಗೆ ಇಲ್ಲಿನ ಐತಿಹಾಸಿಕತೆ ಸಾರಲು ಆನೆಗೊಂದಿ ಭಾಗಕ್ಕೆ ವಾಲ್ಮೀಕಿ ಅಭಯಾರಣ್ಯ ಎಂಬ ಹೆಸರಿಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಹೇಳಿದರು.
ನಗರದ ವಾಲ್ಮೀಕಿ ವೃತ್ತದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ವಾಲ್ಮೀಕಿ ಸಮಾಜದ 16 ಹಳ್ಳಿಗಳನ್ನು ಆದಿಕರ್ಮಿ ಯೋಜನೆಯಡಿ ಆಯ್ಕೆಮಾಡಿಕೊಂಡು ಅಭಿವೃದ್ಧಿಗೆ ಮುಂದಾಗಲಾಗುತ್ತದೆ. ಇಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ, ಅಂಗನವಾಡಿ ಕೇಂದ್ರ ಸೇರಿದಂತೆ ಎಲ್ಲವೂ ಸುಸಜ್ಜಿತವಾಗಿ ಕಲ್ಪಿಸಲಾಗುತ್ತದೆ’ ಎಂದರು.
ಕಲ್ಮಠದ ಕೊಟ್ಟೂರು ಸ್ವಾಮೀಜಿ ಮಾತನಾಡಿ, ವಾಲ್ಮೀಕಿ ಸಮುದಾಯ ನಮ್ಮ ಶ್ರೀಮಠಕ್ಕೆ ತುಂಬ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಭಕ್ತರ ಕೋರಿಕೆಯಂತೆ ವಾಲ್ಮೀಕಿ ದೇವಸ್ಥಾನ ಸ್ಥಾಪನೆಗೆ ಒಂದು ಎಕರೆ ಜಾಗ ಕೊಡುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ವಾಲ್ಮೀಕಿ ಸಮುದಾಯ ಭವನಗಳ ನಿರ್ಮಾಣ ಕಾರ್ಯಗಳು ಅರ್ಧಕ್ಕೆ ನಿಂತಿದ್ದು, ಅವುಗಳನ್ನು ಶೀಘ್ರ ಪೂರ್ಣಗೊಳಿಸಬೇಕು’ ಎಂದು ಹಾಲಿ ಶಾಸಕರಿಗೆ ಮನವಿ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ, ವಾಲ್ಮೀಕಿ ಸಮಾಜದ ತಾಲ್ಲೂಕು ಅಧ್ಯಕ್ಷ ವೀರಭದ್ರಪ್ಪ ನಾಯಕ, ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು ಮಾತನಾಡಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಜಿ.ವೀರಪ್ಪ, ತಹಶೀಲ್ದಾರ್ ಯು.ನಾಗರಾಜ, ಡಿವೈಎಸ್ಪಿ ಸಿದ್ದನಗೌಡ, ನಗರಸಭೆ ಅಧ್ಯಕ್ಷೆ ಹೀರಾಬಾಯಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಶೃತಿ, ನಗರಸಭೆ ಮಾಜಿ ಅಧ್ಯಕ್ಷ ಹನುಮಂತಪ್ಪ ನಾಯಕ, ದುರ್ಗಾದೇವಿ ದೇವಸ್ಥಾನದ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ಸೇರಿ ನಾಯಕ ಸಮುದಾಯವರು ಹಾಜರಿದ್ದರು.
ಬಿಜೆಪಿ ಕಾರ್ಯಾಲಯ: ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಮಾಜಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಬಿಜೆಪಿ ನಗರಮಂಡಲ ಅಧ್ಯಕ್ಷ ಚಂದ್ರಶೇಖರ ಹಿರೂರು, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ.ಆಗೋಲಿ, ನಗರಸಭೆ ಸದಸ್ಯ ಮೌಲಸಾಬ, ಮನೋಹರಗೌಡ, ಶ್ರೀನಿವಾಸ ದೂಳ, ಅರ್ಜುನ್ ರಾಯ್ಕರ್ ಸೇರಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ವಾಲ್ಮೀಕಿಯನ್ನೂ ಪೂಜಿಸಲಿ: ಪ್ರೊ.ಕರಿಗೂಳಿ ಪ್ರಜಾವಾಣಿ ವಾರ್ತೆ ಗಂಗಾವತಿ: ತಾಲ್ಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಪ್ರೊ.ಕರಿಗೂಳಿ ಮಾತನಾಡಿ ‘ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ಸಮಾಜಕ್ಕೆ ಬೇಕಾದ ನೈತಿಕ ಸಂದೇಶ ನೀಡಿದ ರೂವಾರಿಯಾಗಿದ್ದಾರೆ. ಜನರು ರಾಮಾಯಣದ ಪೂಜೆಗೆ ಮಾತ್ರ ಸೀಮಿತವಾಗದೇ ವಾಲ್ಮೀಕಿ ಅವರನ್ನು ಸಹ ಪೂಜಿಸಬೇಕು’ ಎಂದರು. ಸಹಾಯಕ ಪ್ರಾಧ್ಯಾಪಕ ವಿರುಪಾಕ್ಷ ಶಂಕ್ರಪ್ಪ ಎಂ. ಮಾತನಾಡಿದರು. ಪ್ರಾಧ‍್ಯಾಪಕ ಸರ್ಫರಾಜ್ ಅಹ್ಮದ್ ವೀರೇಶ ಐಕ್ಯೂಎಸಿ ಸಂಚಾಲಕ ರವಿಕುಮಾರ ಡಾ.ಶಶಿಕುಮಾರ ವೆಂಕಟರಾಜು ಗ್ರಂಥಪಾಲಕ ದೇವರಾಜ ಹೊಸಮನಿ ಆಡಳಿತ ಸಿಬ್ಬಂದಿ ಜಬೀನಾ ಬೇಗಂ ವಿನಾಯಕ ಚಿನ್ನ ವರಪ್ರಸಾದ್ ಶಾಂತಿ ಸೇರಿ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.