ವಿಜಯೇಂದ್ರ
(ಸಂಗ್ರಹ ಚಿತ್ರ)
ಕೊಪ್ಪಳ: ‘ದೇಶದ ಅಭಿವೃದ್ಧಿ ಹಾಗೂ ವಿಕಸಿತ ಭಾರತ ನಿರ್ಮಾಣದ ದೃಷ್ಟಿಯನ್ನರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ನೀತಿ ಅನುಷ್ಠಾನಗೊಳ್ಳುತ್ತಿದೆ. ಸ್ವಾವಲಂಬಿ ಭಾರತ ನಿರ್ಮಾಣದ ಪರಿಕಲ್ಪನೆಯ ದೂರದೃಷ್ಟಿತ್ವದಿಂದ ಜಿಎಸ್‌ಟಿ ದರ ಇಳಿಕೆಯಾಗಿದ್ದು, ಉತ್ಪನ್ನ ಹಾಗೂ ವಾಣಿಜ್ಯ ಕ್ಷೇತ್ರಕ್ಕೆ ಚೈತನ್ಯ ತಂದಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
‘ಕಿನ್ನಾಳ ಕಲಾಕೃತಿಗೆ ಬಂಪರ್ ಬೇಡಿಕೆ’ ತಲೆಬರಹದಲ್ಲಿ ಪ್ರಜಾವಾಣಿಯಲ್ಲಿ ಅ. 25ರಂದು ಪ್ರಕಟವಾದ ವರದಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅವರು ‘ಕಲೆ ಹಾಗೂ ಸಂಸ್ಕೃತಿಯನ್ನು ಆಧರಿಸಿ ಬದುಕು ಕಟ್ಟಿಕೊಂಡವರ ಅಂಗಳದಲ್ಲೂ ಹೊಸ ಬೆಳಕು ಚೆಲ್ಲುತ್ತಿದೆ ಎಂಬುದಕ್ಕೆ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲಾಕೃತಿಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರೀಕ್ಷೆ ಮೀರಿ ಬೇಡಿಕೆ ಹೆಚ್ಚಿರುವುದೇ ಸಾಕ್ಷಿಯಾಗಿದೆ’ ಎಂದಿದ್ದಾರೆ.
‘ಜಿಎಸ್‌ಟಿ ಇಳಿಕೆಯಿಂದಾಗಿ ದೇಶದ ಉತ್ಪನ್ನ, ವ್ಯಾಪಾರ ಹಾಗೂ ಸೇವಾ ಕ್ಷೇತ್ರಗಳು ಬಹುದೊಡ್ಡ ಮಟ್ಟದಲ್ಲಿ ಚೇತರಿಸಿಕೊಂಡಿವೆ. ಸ್ವಾವಲಂಬಿ ಬದುಕು ಆಶ್ರಯಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಸದ್ಯ ಕಿನ್ನಾಳ ಕಲಾಕೃತಿಗಳಿಗೆ ಬೇಡಿಕೆ ಬಂದಿರುವುದು ಕರ್ನಾಟಕದ ಹೆಗ್ಗಳಿಕೆಯೂ ಆಗಿದ್ದು, ಕಲಾವಿದರ ಬೇಡಿಕೆಗೆ ಅನುಗುಣವಾಗಿ ಕಲಾಕೃತಿಗಳನ್ನು ತಯಾರಿಸಲು ಬೇಕಾಗುವ ‘ಪೊಳಕಿ ಮರಗಳನ್ನು' ಒದಗಿಸಲು ಅಗತ್ಯ ಕ್ರಮ ಕೈಗೊಂಡು ರಾಜ್ಯ ಸರ್ಕಾರ ಇಚ್ಚಾಶಕ್ತಿ ಪ್ರದರ್ಶಿಸಬೇಕು. ಅಂತೆಯೇ ಇತರ ಕೌಶಲ್ಯ ಆಧಾರಿತ ಉತ್ಪನ್ನ ಕ್ಷೇತ್ರಕ್ಕೆ ಎಲ್ಲ ಬಗೆಯ ಸಹಕಾರ ಹಾಗೂ ಪ್ರೋತ್ಸಾಹ ನೀಡುವ ಬದ್ಧತೆ ತೋರಲಿ’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.