
ಕೊಪ್ಪಳ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಬುಧವಾರ ಜಿಲ್ಲಾ ವಿಶ್ವಕರ್ಮ ಸಮಾಜದ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಹೋರಾಟ ಸಮಿತಿಯ ಅಧ್ಯಕ್ಷ ಜಯರಾಂ ಪತ್ತಾರ ಮಾತನಾಡಿ ‘ಬೇರೆಯವರಿಗೋಸ್ಕರವೇ ಬದುಕು ಮುಡುಪಾಗಿಟ್ಟಿದ್ದು ವಿಶ್ವಕರ್ಮ ಸಮಾಜ. ಆದರೂ ನಾವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದೇವೆ. ಆದ್ದರಿಂದ ಸರ್ಕಾರ ಆದಷ್ಟು ಬೇಗನೆ ನಮಗೆ ಎಸ್.ಟಿ. ಸ್ಥಾನಮಾನ ನೀಡಬೇಕು. ಸರ್ಕಾರ ಅಧ್ಯಯನ ವರದಿ ತೆಗೆದುಕೊಂಡು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.
‘ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮಾಜದ ದೇವಸ್ಥಾನಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಬೇಕು, ಸಮಾಜದ ಬಡ ಜನರಿಗೆ ಜಿಲ್ಲಾ ಕೈಗಾರಿಕಾ ಇಲಾಖೆಯಿಂದ ನಿವೇಶನ ನೀಡಬೇಕು, ಕಾಂತರಾಜ್ ವರದಿ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿನ ದೇವಸ್ಥಾನಗಳಲ್ಲಿ ವಿಶ್ವಕರ್ಮ ಸಮಾಜದ ಒಬ್ಬ ವ್ಯಕ್ತಿಯನ್ನು ದೇವಸ್ಥಾನ ಸಮಿತಿಯಲ್ಲಿ ಸದಸ್ಯರನ್ನಾಗಿ ಮಾಡಬೇಕು’ ಎನ್ನುವ ಬೇಡಿಕೆಗಳನ್ನು ಮುಂದಿಟ್ಟರು.
ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧಿಕಾರೇತರ ಸದಸ್ಯ ಪ್ರಭಾಕರ ಬಡಿಗೇರ, ಮುಖಂಡರಾದ ಚಂದ್ರಶೇಖರ್ ಬಡಿಗೇರ, ವೀರಭದ್ರಪ್ಪ ಬಡಿಗೇರ, ಮೌನೇಶ್ ಮಾದಿನೂರ, ಎಚ್ಚರೇಶ ಹೊಸಮನಿ, ಪ್ರಶಾಂತ್ ವಿಶ್ವ ಬ್ರಾಹ್ಮಣ, ಮೌನೇಶ ಬಡಿಗೇರ ಕೊಪ್ಪಳ, ವೀರೇಶ ಕಮ್ಮಾರ್, ಕೃಷ್ಣ ಬಡಿಗೇರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.