ADVERTISEMENT

ಪ್ರಮಾದವಾಗದಂತೆ ಮತದಾರ ಪಟ್ಟಿ ತಯಾರಿಸಿ

ಬೂತ್‌ ಮಟ್ಟದ ಅಧಿಕಾರಿಗಳಿಗೆ ತಹಶೀಲ್ದಾರ್ ಎಂ.ಸಿದ್ದೇಶ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 13:59 IST
Last Updated 19 ಸೆಪ್ಟೆಂಬರ್ 2021, 13:59 IST
ಹನುಮಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ತರಬೇತಿಯಲ್ಲಿ ಬೂತ್‌ ಮಟ್ಟದ ಅಧಿಕಾರಿಗಳು ತಹಶೀಲ್ದಾರ್ ಎಂ.ಸಿದ್ದೇಶ ಅವರಿಗೆ ಸಮಸ್ಯೆಗಳನ್ನು ನೀವೇದಿಸಿಕೊಂಡರು
ಹನುಮಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ತರಬೇತಿಯಲ್ಲಿ ಬೂತ್‌ ಮಟ್ಟದ ಅಧಿಕಾರಿಗಳು ತಹಶೀಲ್ದಾರ್ ಎಂ.ಸಿದ್ದೇಶ ಅವರಿಗೆ ಸಮಸ್ಯೆಗಳನ್ನು ನೀವೇದಿಸಿಕೊಂಡರು   

ಹನುಮಸಾಗರ: ‘ಮತದಾರರಪಟ್ಟಿ ಸರಿ ಇದ್ದರೆ ಮಾತ್ರ ಚುನಾವಣೆಗಳು ಸುಲಲಿತವಾಗಿ ನಡೆಯಲು ಸಾಧ್ಯ’ ಎಂದು ತಹಶೀಲ್ದಾರ್ ಎಂ.ಸಿದ್ದೇಶ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ತರಬೇತಿಯಲ್ಲಿ ಮಾತನಾಡಿದರು.

‘ನ.8 ರಂದು ಕರಡು ಮತದಾರರ ಪಟ್ಟಿಯನ್ನು ತಹಶೀಲ್‌ ಕಚೇರಿ ಸೇರಿ ಮತದಾನ ಕೇಂದ್ರಗಳಲ್ಲಿ ಪ್ರಕಟಿಸಲಾಗುತ್ತದೆ. ಬೂತ್ ಮಟ್ಟದ ಅಧಿಕಾರಿಗಳು ಯಾವುದೇ ಪ್ರಮಾದವಾಗದಂತೆ ಪಟ್ಟಿ ಪರಿಷ್ಕರಿಸಬೇಕು. ಮತದಾರರ ಪಟ್ಟಿಯಲ್ಲಿ ಮರಣ, ಡಬಲ್, ಖಾಯಂ ಸ್ಥಳಾಂತರ ಆಗಿರುವ ಮತದಾರರ ಹೆಸರುಗಳನ್ನು ಗುರುತಿಸಿ ಕಡ್ಡಾಯವಾಗಿ ತೆಗೆದುಹಾಕಬೇಕು. ಮರಣ ಹೊಂದಿದ ಮತದಾರರ ಮರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು ಅಥವಾ ಮನೆ ಮುಖ್ಯಸ್ಥರಿಂದ ಹೇಳಿಕೆ ಪತ್ರ ಪಡೆಯಬೇಕು’ ಎಂದು ತಿಳಿಸಿದರು.

ADVERTISEMENT

ಕಂದಾಯ ನಿರೀಕ್ಷಕ ಉಮೇಶಗೌಡ ಪಾಟೀಲ ಮಾತನಾಡಿ,‘ಮತದಾರರಿಗೆ ಸುಲಭವಾಗಿ ಮತದಾರರಪಟ್ಟಿ ಲಭಿಸುವಂತಾಗಲಿ ಎಂಬ ದೃಷ್ಟಿಯಿಂದ ಮೊಬೈಲ್ ಅಥವಾ ವೈಯಕ್ತಿಕ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದು ಎಡಿಟ್ ಮಾಡಲಾಗದ ಮತದಾರರ ಗುರುತಿನ ಚೀಟಿ ಆಗಿದೆ. ಇದನ್ನು ಪಿಡಿಎಫ್ ರೂಪದಲ್ಲಿ ಹಾಗೂ ಡಿಜಿಟಲ್ ಲಾಕರ್‌ನಂಥ ಸೌಲಭ್ಯಗಳ ಮೂಲಕ ಸಂಗ್ರಹಿಸಿಡಬಹುದು’ ಎಂದು ಹೇಳಿದರು.

ಬೂತ್ ಮಟ್ಟದ ಅಧಿಕಾರಿಗಳು ತಹಶೀಲ್ದಾರರಿಗೆ ಮನವಿ ಮಾಡಿ,‘ತಿದ್ದುಪಡಿ ಮಾಡಿಕೊಟ್ಟ ಮಾಹಿತಿಯನ್ನು ಸರಿಯಾಗಿ ಗಣಕಯಂತ್ರಕ್ಕೆ ಅಳವಡಿಸಬೇಕು. ಹೋಬಳಿಗೊಂದರಂತೆ ಸೆಂಟರ್ ತೆಗೆದು ತಿದ್ದುಪಡಿಗೆ ಅವಕಾಶ ನೀಡಬೇಕು. ಬಿಎಲ್‌ಒಗಳಿಗೆ ಗೌರವಧನ ಹೆಚ್ಚಿಸುವುದರ ಜತೆಗೆ ಮತದಾನದ ಸಂದರ್ಭದಲ್ಲಿ ನೆರಳಿನ ಅನುಕೂಲ ಒದಗಿಸಬೇಕು’ ಎಂದು ನಿವೇದಿಸಿಕೊಂಡರು.

ಸಂಪನ್ಮೂಲ ವ್ಯಕ್ತಿಗಳಾದ ಕಿಶನರಾವ್ ಕುಲಕರ್ಣಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ವೇಲಪ್ಪನ್ ತರಬೇತಿ ನೀಡಿದರು.

ಉಪತಹಶೀಲ್ದಾರ್ ರೇಣುಕಾ ಹಾದಿಮನಿ, ಮುಖ್ಯಶಿಕ್ಷಕ ಹುಸೇನಸಾಬ ಇಲಕಲ್ಲ, ಗ್ರಾಮ ಲೆಕ್ಕಾಧಿಕಾರಿಗಳಾದ ವೇಲಪ್ಪನ್, ಸಾಲೇಹಾ, ಗಂಗಾಧರ, ಅಭಿಷೇಕ, ಪ್ರಮುಖರಾದ ಖಾಜಾಹುಸೇನ ವಂಟೆಳಿ, ಚಂದಪ್ಪ ಹಕ್ಕಿ, ಶರಣಪ್ಪ ಗುಡಿಗದ್ದಿ ಹಾಗೂ ಶರಣಪ್ಪ ಕೊರಡಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.