ADVERTISEMENT

ಆನೆಗೊಂದಿ: ತೆಪ್ಪದ ಯುವಕರಿಗೆ ಜಲಸಾಹಸ ತರಬೇತಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 5:34 IST
Last Updated 11 ಡಿಸೆಂಬರ್ 2024, 5:34 IST
<div class="paragraphs"><p>ಅಂಬಿಗರಹಳ್ಳಿ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳ ತರಬೇತಿ ಪಡೆಯುತ್ತಿರುವ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ತೆಪ್ಪ ನಡೆಸುವ ಯುವಕರು</p></div>

ಅಂಬಿಗರಹಳ್ಳಿ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳ ತರಬೇತಿ ಪಡೆಯುತ್ತಿರುವ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ತೆಪ್ಪ ನಡೆಸುವ ಯುವಕರು

   

ಕೊಪ್ಪಳ: ಪ್ರವಾಸೋದ್ಯಮಕ್ಕೆ ಹೇರಳ ಅವಕಾಶಗಳಿರುವ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಭಾಗದಲ್ಲಿ ತೆಪ್ಪ (ಹರಿಗೋಲು) ನಡೆಸುತ್ತಿರುವ ಯುವಕರಿಗೆ ಜಿಲ್ಲಾಡಳಿತವೇ ಈಗ ಕೌಶಲ ತರಬೇತಿ ಕೊಡಿಸುತ್ತಿದ್ದು, ಅವರನ್ನು ವೃತ್ತಿಪರ ’ಅಂಬಿಗರ’ನ್ನಾಗಿ ಮಾಡಲು ಮುಂದಾಗಿದೆ.

ಆನೆಗೊಂದಿ, ವಿರೂಪಾಪುರ ಗಡ್ಡೆ, ಸಾಣಾಪುರ ಭಾಗದಲ್ಲಿ ಜಲ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಅಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಸಾಕಷ್ಟು ಜನ ಯುವಕರು ತೆಪ್ಪ ನಡೆಸುತ್ತಿದ್ದರೂ ಅವರಿಗೆ ಯಾವುದೇ ವೃತ್ತಿಪರ ತರಬೇತಿ ಇಲ್ಲ. ಅನೇಕರು ಪರವಾನಗಿಯನ್ನೂ ಪಡೆದಿಲ್ಲ.  ನೀರಿನಲ್ಲಿ ತೆರಳುವಾಗ ಆಗುವ ಅಪಾಯ ಎದುರಿಸಲು ಬೇಕಾಗುವ ಕೌಶಲಗಳ ಬಗ್ಗೆ ಜಿಲ್ಲಾಡಳಿತ ಈಗ ಗಮನ ಹರಿಸಿದೆ.

ADVERTISEMENT

ಪರಂಪರಾಗತವಾಗಿ ಅಜ್ಜ, ತಂದೆ ಮಾಡಿಕೊಂಡ ತೆಪ್ಪ ನಡೆಸುವ ಕೆಲಸವನ್ನು ಈಗ ಅವರ ಕುಟುಂಬದವರು ಮುಂದುವರಿಸಿಕೊಂಡು ಬಂದಿದ್ದಾರೆ. ಅವರಿಗೆ ನೀರಿನಲ್ಲಿ ಅಪಾಯ ಎದುರಾದರೆ ಅದನ್ನು ಎದುರಿಸುವುದು ಹೇಗೆ ಎನ್ನುವ ವೃತ್ತಿಪರ ಕೌಶಲ ತಿಳಿದಿಲ್ಲ. ಆದ್ದರಿಂದ ಜಿಲ್ಲಾಡಳಿತ ಆನೆಗೊಂದಿಯ 20 ಜನ ಯುವಕರನ್ನು ಆಯ್ಕೆ ಮಾಡಿ ಪ್ರತಿಯೊಬ್ಬರಿಗೆ ತಲಾ ₹13 ಸಾವಿರ ಭರಿಸಿ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳ ಸಂಗಮ ಸ್ಥಳವಾದ ಕೆ.ಆರ್‌. ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯಲ್ಲಿ ಹತ್ತು ದಿನಗಳ ಜಲ ಕ್ರೀಡೆಗಳ ತರಬೇತಿ ಕೊಡಿಸುತ್ತಿದೆ. ಇದಕ್ಕಾಗಿ ಜಿಲ್ಲಾಡಳಿತ ಒಟ್ಟು ₹3.30 ಲಕ್ಷ ಖರ್ಚು ಮಾಡಿದೆ.

ಜಲ ಕ್ರೀಡೆಗಳು, ನೀರಿನಲ್ಲಿ ಮುಳುಗುವವರನ್ನು ರಕ್ಷಿಸುವುದು ಹೇಗೆ? ಯಾವ ಸುರಕ್ಷತಾ ಪರಿಕರವಿಲ್ಲದೆ 50 ಮೀಟರ್‌ ತನಕ ಹೋಗಿ ಅಪಾಯದಲ್ಲಿ ಇರುವವರನ್ನು ರಕ್ಷಿಸುವ ವಿಧಾನ, ಕಯಾಕಿಂಗ್‌, ರ್‍ಯಾಫ್ಟಿಂಗ್‌ ಕ್ರೀಡೆಗಳ ತರಬೇತಿ ಹೀಗೆ ಅನೇಕ ಕೌಶಲಗಳನ್ನು ಕಲಿಸಲಾಗುತ್ತಿದೆ. ಡಿ. 6ರಂದು ಈ ತರಬೇತಿ ಆರಂಭವಾಗಿದೆ.

ಆನೆಗೊಂದಿ ಯುವಕರು ಅಲ್ಲಿ ತರಬೇತಿ ಆರಂಭಿಸಿದ ಬಳಿಕ ಅದೇ ಭಾಗದ ಇನ್ನಷ್ಟು ಯುವಕರು ನಮಗೂ ತರಬೇತಿ ಕೊಡಿಸಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಜಲಸಾಹಸಗಳ ತರಬೇತಿ ಪಡೆದವರನ್ನು ಜಿಲ್ಲೆಗೂ ಕರೆಯಿಸಿ ಕೊಪ್ಪಳದಲ್ಲಿರುವ ಐತಿಹಾಸಿಕ ಹುಲಿಕೆರೆಯಲ್ಲಿ ಜಲಕ್ರೀಡೆಗಳನ್ನು ನಡೆಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.

ನೀರಿನಲ್ಲಿ ಸಾಹಸ ಕ್ರೀಡೆಗಳನ್ನು ಆಯೋಜಿಸುವ ಬಗ್ಗೆಯೂ ಕೊಪ್ಪಳದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಸಕ್ತಿ ಹೊಂದಿದ್ದು, ಈ ಕ್ರೀಡೆಗಳನ್ನು ಈಗಾಗಲೇ ನಡೆಸುತ್ತಿರುವ ಸಂಘ ಸಂಸ್ಥೆಗಳು ಮತ್ತು ಸರ್ಕಾರದ ಇಲಾಖೆಗಳ ಜೊತೆ ಸಮಾಲೋಚನೆ ನಡೆಸುತ್ತಿದೆ.

ವಿದೇಶಿಗರಿಂದ ವ್ಯಾಪಕ ಬೇಡಿಕೆ

ವಿಹಂಗಮವಾದ ತುಂಗಭದ್ರಾ ನದಿಯಲ್ಲಿ ತೆಪ್ಪದಲ್ಲಿ ವಿಹರಿಸುತ್ತ ವಿಶ್ವವಿಖ್ಯಾತ ಹಂಪಿ ಹಾಗೂ ಅದರ ಸುತ್ತಮುತ್ತಲಿನ ಜಾಗಗಳನ್ನು ನೋಡಲು ವಿದೇಶಿಗರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇದಕ್ಕಾಗಿ ಸಾಕಷ್ಟು ಬೇಡಿಕೆಯೂ ಇದೆ.

ಹಂಪಿ ನೋಡಲು ಬರುವವರು ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ ಭಾಗಕ್ಕೂ ಬರುವುದು ಸಾಮಾನ್ಯ. ಅಲ್ಲಿ ಸಾಣಾಪುರ, ಅಂಜನಾದ್ರಿ, ಕಿಷ್ಕೆಂಧೆ, ಪಂಪಾಸರೋವರ ಹೀಗೆ ಅನೇಕ ಐತಿಹಾಸಿಕ ಸ್ಥಳಗಳೂ ಇರುವ ಕಾರಣ ಪ್ರವಾಸೋದ್ಯಮ ಹೇರಳವಾಗಿ ಬೆಳೆಯುತ್ತಿದೆ. ತುಂಗಭದ್ರಾ ನದಿ ತೀರದ ಈ ತಾಣಗಳ ಸುತ್ತಲೂ ಜಲ ಪ್ರವಾಸೋದ್ಯಮವನ್ನು ಜಿಲ್ಲಾಡಳಿತವೇ ಅಧಿಕೃತವಾಗಿ ಆರಂಭಿಸಿದರೆ ಸ್ಥಳೀಯರಿಗೆ ಉದ್ಯೋಗದ ಅವಕಾಶಗಳು ಲಭಿಸುತ್ತವೆ. ಆದಾಯವೂ ಸಿಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.