ADVERTISEMENT

ನೀರಿನ ಗಂಟೆ: ರಾಜ್ಯಕ್ಕೆ ಮಾದರಿಯಾದ ಕೊಪ್ಪಳ ಜಿಲ್ಲೆಯ ಯೋಜನೆ

ಮಕ್ಕಳಿಗಾಗಿ ನೀರಿನ ಗಂಟೆ ಬಾರಿಸುವುದನ್ನು ಕಡ್ಡಾಯಗೊಳಿಸಿದ ಶಾಲಾ ಶಿಕ್ಷಣ ಇಲಾಖೆ

ಪ್ರಮೋದ ಕುಲಕರ್ಣಿ
Published 17 ಜನವರಿ 2026, 6:49 IST
Last Updated 17 ಜನವರಿ 2026, 6:49 IST
ಕುಡಿಯುವ ನೀರಿನ ಬಾಟಲ್‌ಗಳ ಜೊತೆ ಗಂಗಾವತಿ ತಾಲ್ಲೂಕಿನ ಚಿಕ್ಕಬೆಣಕಲ್‌ ಗ್ರಾಮದಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಾಲ್ಮೀಕಿ ಆಶ್ರಮ ಶಾಲೆ ವಿದ್ಯಾರ್ಥಿಗಳು
ಕುಡಿಯುವ ನೀರಿನ ಬಾಟಲ್‌ಗಳ ಜೊತೆ ಗಂಗಾವತಿ ತಾಲ್ಲೂಕಿನ ಚಿಕ್ಕಬೆಣಕಲ್‌ ಗ್ರಾಮದಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಾಲ್ಮೀಕಿ ಆಶ್ರಮ ಶಾಲೆ ವಿದ್ಯಾರ್ಥಿಗಳು   

ಕೊಪ್ಪಳ: ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವೆನ್ನುವ ಕಾರಣಕ್ಕೆ ಮಕ್ಕಳಿಗೆ ನೀರು ಕುಡಿಯುವಂತೆ ಜ್ಞಾಪಿಸಲು ಶಾಲೆಗಳಲ್ಲಿ ‘ನೀರಿನ ಗಂಟೆ’ (ವಾಟರ್‌ ಬೆಲ್‌) ಬಾರಿಸುವುದನ್ನು ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಇಲಾಖೆಯ ‘ಪಿ.ಎಂ ಪೋಷಣ್‌ ಶಕ್ತಿ ನಿರ್ಮಾಣ್‌’ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಮೂರೂವರೆ ವರ್ಷಗಳ ಹಿಂದಿನಿಂದಲೇ ಚಾಲ್ತಿಯಲ್ಲಿರುವ ಯೋಜನೆ ಈಗ ರಾಜ್ಯದ ಎಲ್ಲ ಶಾಲೆಗಳಿಗೂ ವಿಸ್ತರಣೆಯಾಗಿದೆ. 

ಆರೋಗ್ಯ ಹಾಗೂ ಬೆಳವಣಿಗೆ ದೃಷ್ಟಿಯಿಂದ ಮಕ್ಕಳು ನಿತ್ಯವೂ ನಿಗದಿತ ಪ್ರಮಾಣದಲ್ಲಿ ನೀರು ಕುಡಿಯಬೇಕು. ಆದರೆ, ಮಕ್ಕಳಿಗೆ ಈ ಕುರಿತು ಸೂಕ್ತ ಅರಿವು ಇರುವುದಿಲ್ಲ. ಅದಕ್ಕಾಗಿ ಶಾಲಾ ಅವಧಿಯಲ್ಲಿ ಮಕ್ಕಳು ನಿಯಮಿತವಾಗಿ ನೀರು ಕುಡಿಯುವುದನ್ನು ನೆನಪಿಸಬೇಕಾದುದು ಶಿಕ್ಷಕರು ಮತ್ತು ಸಿಬ್ಬಂದಿಯ ಜವಾಬ್ದಾರಿಯೂ ಆಗಿದೆ ಎನ್ನುವ ಕಾರಣಕ್ಕೆ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ. ಇದರ ಬಗ್ಗೆ ಹಿಂದೆಯೂ ಅನೇಕ ಬಾರಿ ಚರ್ಚೆಯಾಗಿತ್ತು.

ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಚಿಕ್ಕಬೆಣಕಲ್‌ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಪ್ರತಿ ಗಂಟೆಗೆ ’ವಾಟರ್ ಬೆಲ್‌’ ಪರಿಕಲ್ಪನೆ ಜಾರಿಯಾಗಿಯೇ ಮೂರೂವರೆ ವರ್ಷಗಳಾಗಿವೆ. ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ಓದುವ ಮಕ್ಕಳಿಗೆ ವಾಟರ್‌ ಬಾಟಲ್‌ಗಳನ್ನು ನೀಡಲಾಗಿದ್ದು, ಸರಿಯಾಗಿ ತಾಸಿಗೆ ಒಂದು ಸಲ ಬೆಲ್‌ ಬಾರಿಸಲಾಗುತ್ತದೆ. ಆಗ ಮಕ್ಕಳು ಕೆಲವು ನಿಮಿಷ ನೀರು ಕುಡಿಯುತ್ತಾರೆ. 

ADVERTISEMENT

ಆ ಶಾಲೆಯಲ್ಲಿ ಮಕ್ಕಳು ಬೆಳಿಗ್ಗೆ ತರಗತಿಗೆ ಬರುವಷ್ಟರಲ್ಲಿ ಸಿಬ್ಬಂದಿಯೇ ಅರ್ಧ ಲೀಟರ್‌ ಬಾಟಲಿಯಲ್ಲಿ ನೀರು ತುಂಬಿಡುತ್ತಾರೆ. ಬೆಳಿಗ್ಗೆ 11 ಹಾಗೂ 12 ಗಂಟೆಗೊಮ್ಮೆ ‘ವಾಟರ್‌ ಬೆಲ್‌’ ಬಾರಿಸಲಾಗುತ್ತದೆ. ಮಧ್ಯಾಹ್ನ 1.30ಕ್ಕೆ ಊಟದ ಸಮಯ. ಮಧ್ಯಾಹ್ನದ ಅವಧಿಯಲ್ಲಿ ಮೂರು ಹಾಗೂ ನಾಲ್ಕು ಗಂಟೆಗೆ ಬೆಲ್‌ ಬಾರಿಸಿ ನೀರು ಕುಡಿಯಲು ನೆನಪಿಸಲಾಗುತ್ತದೆ. ಜಿಲ್ಲೆಯ ಮಾದರಿ ಅನುಕರಿಸಿದ ರಾಜ್ಯದ ಅಂದಾಜು 120 ಆಶ್ರಮ ಶಾಲೆಗಳಲ್ಲಿ ’ವಾಟರ್ ಬೆಲ್‌’ ಯೋಜನೆ ಅನುಷ್ಠಾನ ಮಾಡಬೇಕು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಗಲೇ ಆದೇಶಿಸಿತ್ತು. ಈಗ ಎಲ್ಲ ಶಾಲೆಗಳಿಗೂ ಆದೇಶ ಅನ್ವಯವಾಗಲಿದೆ.

ಪ್ರಾಯೋಗಿಕ ಯೋಜನೆ ಬಗ್ಗೆ ಆರಂಭಿಕ ದಿನಗಳಲ್ಲಿ ಅಲ್ಲಿನ ಸಿಬ್ಬಂದಿ ವಿದ್ಯಾರ್ಥಿಗಳಿಗೆ ನೆನಪಿಸಿ ನೀರು ಕುಡಿಯಲು ಪ್ರೇರೇಪಿಸಬೇಕಿತ್ತು. ಈಗ ಮಕ್ಕಳೇ ಸ್ವಯಂಪ್ರೇರಿತರಾಗಿ ಒಂದು ಗಂಟೆಗೊಮ್ಮೆ ನೀರು ಕುಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಆರಂಭವಾದ ಯೋಜನೆಯನ್ನು ಈಗ ರಾಜ್ಯದಾದ್ಯಂತ ಶಾಲೆಗಳಲ್ಲಿ ಅನುಷ್ಠಾನಕ್ಕೆ ತರುವಂತೆ ಸರ್ಕಾರವೇ ಆದೇಶ ಹೊರಡಿಸಿದ್ದು, ಜಿಲ್ಲೆಯ ಅಧಿಕಾರಿಗಳ ಖುಷಿಗೆ ಕಾರಣವಾಗಿದೆ.

ಮೂರೂವರೆ ವರ್ಷಗಳ ಹಿಂದೆಯೇ ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬಂದ ವಾಟರ್‌ಬೆಲ್‌ ಪರಿಕಲ್ಪನೆಯನ್ನು ಶಾಲಾ ಶಿಕ್ಷಣ ಇಲಾಖೆಯ ಈಗ ರಾಜ್ಯದಾದ್ಯಂತ ವಿಸ್ತರಿಸಿದ್ದು ಖುಷಿ ನೀಡಿದೆ. 
–ಅಜ್ಜಪ್ಪ ಸೊಗಲದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ
ಪ್ರಜಾವಾಣಿಯ ಸಂಗತ ಅಂಕಣದಲ್ಲಿ ವಾಟರ್‌ ಬೆಲ್‌ ಕುರಿತು ಪ್ರಕಟವಾಗಿದ್ದ ಲೇಖನ ಪ್ರೇರಣೆಯಾಗಿಟ್ಟುಕೊಂಡು ಮಕ್ಕಳಿಗೆ ಇದನ್ನು ಜಾರಿ ಮಾಡಲಾಗಿತ್ತು. ಮಕ್ಕಳಿಗೆ ಬಹಳಷ್ಟು ಅನುಕೂಲವಾಗಿದೆ.   
–ಗ್ಯಾನನಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಗಂಗಾವತಿ ತಾಲ್ಲೂಕು ಅಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.