ಚಳಿಯ ನಡುವೆ ಶಾಲು ಹೊದ್ದು ಗ್ರಾಹಕರಿಗಾಗಿ ಕಾದು ಕುಳಿತ ಹೂ ಮಾರುವ ಮಹಿಳೆ ಕೊಪ್ಪಳದ ಕನಕದಾಸ ವೃತ್ತದ ಬಳಿ ಕಂಡ ಬಗೆ
ಕೊಪ್ಪಳ: ಸೂರ್ಯನ ಕಿರಣಗಳು ಭೂಮಿಗೆ ಬೀಳುವ ಹೊತ್ತಿಗೆ ಚಳಿ ತನ್ನ ಅಬ್ಬರ ಮುಂದುವರಿಸುತ್ತಿದೆ. ಸೂರ್ಯಾಸ್ತಕ್ಕೂ ಮೊದಲೇ ಚಳಿಯ ನಡುಕ ಶುರುವಾಗುತ್ತದೆ. 2025ನೇ ವರ್ಷ ಮುಗಿಯುವ ಹೊತ್ತಿನಲ್ಲಿರುವಾಗ ಇರುವ ‘ಥಂಡಿ ಥಂಡಿ ಕೂಲ್ ಕೂಲ್’ ವಾತಾವರಣ ದುಡಿಯುವ ವರ್ಗದ ಜನರ ಬದುಕನ್ನು ಹೆಚ್ಚು ಹೈರಾಣಾಗಿಸಿದೆ.
ರಸ್ತೆಯ ಬೀದಿಬದಿಯಲ್ಲಿ ಹಣ್ಣುಗಳನ್ನು, ಹೂಗಳನ್ನು ಮಾರಾಟ ಮಾಡುವವರು, ಪತ್ರಿಕೆ ಹಂಚುವವರು, ಹಾಲು ಹಾಕುವವರು, ಬೆಳಗಿನ ಜಾವವೇ ಪ್ರಯಾಣ ಮಾಡುವವವರು, ಕೃಷಿ ಕಾಯಕಕ್ಕೆ ತೆರಳುವವರು, ಒಂದು ದಿನದ ದುಡಿಮೆಗಾಗಿ ಜಿಲ್ಲಾಕೇಂದ್ರದ ಲೇಬರ್ ವೃತ್ತ, ಗಡಿಯಾರ ಕಂಬದ ಬಳಿ ಆಸೆಗಣ್ಣಿನಿಂದ ಕಾಯುತ್ತ ನಿಲ್ಲುವವರು ಹೀಗೆ ಅನೇಕರಿಗೂ ಕೊರೆಯುವ ಚಳಿ ದೇಹವನ್ನು ಮಾತ್ರವಲ್ಲ; ನಿತ್ಯದ ದುಡಿಮೆಯ ಆಸೆಯನ್ನೂ ಕೊಲ್ಲುತ್ತಿದೆ.
ಈ ಸಲದ ಮುಂಗಾರು ಹಂಗಾಮು ಪೂರ್ವದಿಂದ ಉತ್ತಮ ಮಳೆಯಾಗಿದ್ದು ಅದಕ್ಕೆ ತಕ್ಕಂತೆಯೇ ಚಳಿಯ ವಾತಾವರಣವಿದೆ. ಮಧ್ಯಾಹ್ನ ಕೆಲ ಹೊತ್ತು ಬಿರುಬಿಸಿಲು ಇದ್ದರೆ, ಇನ್ನು ಕೆಲ ಹೊತ್ತಿನಲ್ಲಿ ಚಳಿ ಮೈ ಕೊರೆಯಲು ಶುರು ಮಾಡುತ್ತದೆ.
ಚಳಿಯೇ ಬಂಡವಾಳ: ಒಂದೆಡೆ ಚಳಿ ಹೆಚ್ಚಾಗುತ್ತಿದ್ದಂತೆಯೇ ಇನ್ನೊಂದೆಡೆ ಬೆಚ್ಚಗಿನ ಉಡುಪುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ಈಗಿನ ತಂಪು ಹಾಗೂ ಚಳಿಯ ವಾತಾವರಣವೇ ಬಂಡವಾಳವಾಗಿದೆ. ಸ್ವೆಟರ್, ಸ್ಕಾರ್ಫ್, ಟೋಪಿ, ಕೈಗವುಸು, ತಲೆಗೆ ಹೊದಿಗೆ, ಶಾಲು, ಪುಲಾವರ್ ಹೀಗೆ ಬೆಚ್ಚಗಿನ ಉಡುಪುಗಳ ಖರೀದಿ ಜೋರಾಗಿದೆ.
ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಲೇ ಸಾಗಿದ್ದು ಮಕ್ಕಳು ಹಾಗೂ ವೃದ್ಧರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಮಧ್ಯ ವಯಸ್ಕರು ಮತ್ತು ಹಿರಿಯರಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವ ಕಾರಣ ಹೃದಯಾಘಾತದ ಪ್ರಮಾಣವೂ ಹೆಚ್ಚಾಗುತ್ತಿದೆ. ಚಳಿಗಾಲದಲ್ಲಿರುವ ಅತಿಯಾದ ತಂಪನೆಯ ವಾತಾವರಣವೂ ಇದಕ್ಕೆ ಕಾರಣ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಚಳಿಯೆಂದು ಬೆಚ್ಚಗಿನ ಉಡುಪು ಧರಿಸಿ ಮನೆಯಲ್ಲಿಯೇ ಇದ್ದುಕೊಂಡು ಬದುಕು ಬೆಚ್ಚಗಾಗಿಸಿಕೊಂಡವರ ವರ್ಗ ಒಂದೆಡೆಯಾದರೆ, ಚಳಿಗೆ ಸೆಡ್ಡು ಹೊಡೆದು ಬದುಕಿನ ಅಂದಿನ ಹೊಟ್ಟೆ ತುಂಬಿಸಿಕೊಳ್ಳಲು ಸೂರ್ಯೋದಯಕ್ಕೂ ಮೊದಲು ಮೈಮನಸ್ಸು ಕೊರೆಯುತ್ತಿದ್ದರೂ ವ್ಯಾಪಾರಕ್ಕೆ ಬರುತ್ತಿರುವ ವರ್ಗವೂ ದೊಡ್ಡದಿದೆ. ನಿತ್ಯದ ದುಡಿಮೆಯನ್ನೇ ನಂಬಿಕೊಂಡ ಶ್ರಮಿಕ ವರ್ಗಕ್ಕೆ ಚಳಿ ಹಾಗೂ ಮಳೆ ಹೆಚ್ಚು ವ್ಯತ್ಯಾಸವಾಗುತ್ತಿಲ್ಲ.
ಚಳಿ ಇರಲಿ ಮಳೆಯೇ ಬರಲಿ. ಬದುಕಿನ ಬಂಡಿ ಸಾಗಿಸಲು ನನಗೆ ವ್ಯಾಪಾರ ಅನಿವಾರ್ಯ. ಸೂರ್ಯೋದಕ್ಕೂ ಮೊದಲೇ ಬಂದು ನನ್ನ ವೃತ್ತಿಯಲ್ಲಿ ತೊಡಗಿಕೊಳ್ಳುತ್ತೇನೆ.ರೇಣುಕಮ್ಮ ಹೂವಿನ ವ್ಯಾಪಾರಿ
ಚಳಿ ಈ ವರ್ಷ ಜೋರಾಗಿರುವುದರಿಂದ ಸ್ವೆಟರ್ ಹಾಗೂ ಸ್ಕಾರ್ಫ್ ಖರೀದಿಗೆ ಸಾಕಷ್ಟು ಬೇಡಿಕೆಯಿದೆ. ಚಳಿ ಜಾಸ್ತಿಯಾಗುವ ಸೂಚನೆಯಿದ್ದು ವ್ಯಾಪಾರ ಚೆನ್ನಾಗಿ ಆಗುವ ನಿರೀಕ್ಷೆಯಿದೆ.ಹುಲಿಗೆಮ್ಮ ಬಟ್ಟೆಗಳ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.