ADVERTISEMENT

ಯಲಬುರ್ಗಾ: ಪ್ರತಿಭಾವಂತ ರಥಶಿಲ್ಪಿ ಶರಣಕುಮಾರ ಬಡಿಗೇರ

ಇವರ ಕೈಯಲ್ಲಿ ಅರಳಿದ ರಥಗಳೇ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಉತ್ಸವಕ್ಕೆ ಬಳಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 4:58 IST
Last Updated 23 ಫೆಬ್ರುವರಿ 2025, 4:58 IST
ಯಲಬುರ್ಗಾ ತಾಲ್ಲೂಕಿನ ನರಸಾಪುರ ಗ್ರಾಮದ ಶರಣಕುಮಾರ ಬಡಿಗೇರ ರಥ ನಿರ್ಮಾಣದಲ್ಲಿ ತೊಡಗಿರುವುದು 
ಯಲಬುರ್ಗಾ ತಾಲ್ಲೂಕಿನ ನರಸಾಪುರ ಗ್ರಾಮದ ಶರಣಕುಮಾರ ಬಡಿಗೇರ ರಥ ನಿರ್ಮಾಣದಲ್ಲಿ ತೊಡಗಿರುವುದು    

ಯಲಬುರ್ಗಾ: ರಥ ನಿರ್ಮಾಣವೂ ಒಂದು ಕಲೆಯಾಗಿದೆ. ಸುಮಾರು ವರ್ಷಗಳಿಂದಲೂ ವಂಶಪಾರಂಪರೆಯಾಗಿ ರೂಢಿಸಿಕೊಂಡು ಬಂದಿರುವ ಕಾಷ್ಟ ಕಲೆಯಲ್ಲಿಯೇ ಹೆಚ್ಚು ಕೆಲಸ ಮಾಡಿದ ತಾಲ್ಲೂಕಿನ ನರಸಾಪುರ ಗ್ರಾಮದ ಶರಣಕುಮಾರ ಬಡಿಗೇರ ಸೈ ಎನಿಸಿಕೊಂಡ ಪ್ರತಿಭಾವಂತ ರಥಶಿಲ್ಪಿ.

2015ರಿಂದೀಚೆಗೆ ರಥ ನಿರ್ಮಾಣಕ್ಕೆ ಮುಂದಾದ ಶರಣಕುಮಾರ ‘ಶ್ರೀಮೌನ ಜೋತಿ ಶಿಲ್ಪಕಲಾ ರಥಶಿಲ್ಪಿ ಕಲಾ ಕೇಂದ್ರ’ವನ್ನು ಸ್ಥಾಪಿಸಿ ಅದರ ಮೂಲಕ ಸೂಕ್ಷ್ಮ ಕುಸುರಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಥ ನಿರ್ಮಾಣಕ್ಕೆ ಬೇಕಾದ ಅಗತ್ಯ ಮತ್ತು ಸೂಕ್ತ ಕಟ್ಟಿಗೆ ಬಳಸಿಕೊಂಡು ಕಲಾತ್ಮಕ ಕೃತಿಗಳನ್ನು ರೂಪಿಸುತ್ತಿದ್ದಾರೆ.

ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಇವರು ತಯಾರಿಸಿದ ರಥಗಳು ಉತ್ಸವಕ್ಕೆ ಬಳಕೆಯಾಗುತ್ತಿವೆ. ರಥದ ಗಾತ್ರದ ಆಧಾರದ ಮೇಲೆ ನಿರ್ಮಾಣ ವೆಚ್ಚ ನಿರ್ಣಯವಾಗುತ್ತದೆ. ಬಳಸುವ ಕಟ್ಟಿಗೆ ರಥದಲ್ಲಿ ಮೂಡಿಬರುವ ಸೂಕ್ಷ್ಮತೆಯನ್ನು ನಿರ್ಧಾರ ಮಾಡುತ್ತದೆ. ರಥದ ಸೌಂದರ್ಯ ಹೆಚ್ಚಳದಲ್ಲಿ ಕಟ್ಟಿಗೆ ಹದ ಮತ್ತು ಕಲಾವಿದನ ನೈಪುಣ್ಯತೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ಹೇಳುವ ಶರಣಕುಮಾರ ಸಾಗುವಾನಿ, ಹೊನ್ನೆ, ಪರಮತ್ತಿ, ಬೇವಿನಮರಗಳನ್ನು ಬಳಸಿಕೊಳ್ಳಲಾಗುತ್ತದೆ. ದಾಂಡೇಲಿ, ಗದಗ, ಹೊಸಪೇಟೆ, ಅಳ್ನಾವರ, ಹುಬ್ಬಳ್ಳಿಯಲ್ಲಿ ಕಟ್ಟಿಗೆ ಖರೀದಿಸಲಾಗುತ್ತದೆ. ಕಟ್ಟಿಗೆ ದುಬಾರಿಯಾಗಿರುವುದರಿಂದ ನಿರ್ಮಾಣ ವೆಚ್ಚ ಹೆಚ್ಚಾಗಿ ಕಲಾವಿದರಿಗೆ ಸಿಗುವ ವರಮಾನ ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಡುತ್ತಾರೆ.

ADVERTISEMENT

ಚಳ್ಳಾರಿ ಗ್ರಾಮದ ಮಾರುತೇಶ್ವರ ದೇವರ ಉತ್ಸವಕ್ಕಾಗಿ ಸಾಗುವಾನಿ ಮರದಲ್ಲಿ 31 ಅಡಿ ಎತ್ತರದ ಉಚ್ಚಾಯ ನಿರ್ಮಾಣ, ಹಿರೇ ಮಾದಿನಾಳ ಗ್ರಾಮದ ವೀರಾಂಜನೇಯ ದೇವಸ್ಥಾನಕ್ಕೆ 41 ಅಡಿ ಎತ್ತರದ ಬ್ರಹ್ಮರಥ, ಹೊಸಪೇಟೆಯ ಮೃತ್ಯುಂಜೇಶ್ವರ ರಥ, ಬುಕನಟ್ಟಿಯ ಗುನ್ನೇಶ್ವರ ದೇವರ ರಥ, ಯಾಪಲದಿನ್ನಿ ಗ್ರಾಮದ ಸುಖಮುನೇಶ್ವರ ದೇವಸ್ಥಾನದ ರಥ ಇವರ ಕೈಚಳಕದಲ್ಲಿಯೇ ರೂಪುಗೊಂಡಿವೆ. ಇವುಗಳ ಜೊತೆಗೆ ನರಸಾಪುರದ ಕಂಠಿ ದ್ಯಾಮಮ್ಮ ದೇವಿಯ ಪಾಲಕಿ (ಪಲ್ಲಕ್ಕಿ) ಇದೇ ಗ್ರಾಮದ ಮಾರುತೇಶ್ವರ ದೇವಸ್ಥಾನದ ದೇವರ ತೊಟ್ಟಿಲು, ದೇವಿ ಮೂರ್ತಿ, ದೇವರ ಪಾದುಕೆಗಳು, ಸಿಂಹಾಸನ ಸೇರಿ ಇನ್ನಿತರ ಮೂರ್ತಿಗಳನ್ನು ತಯಾರಿಸುವಲ್ಲಿ ಇವರು ಸಿದ್ಧಹಸ್ತರು.

ಶರಣಕುಮಾರ ಅವರ ಸೂಕ್ಷ್ಮ ಕಲಾಕೃತಿಯನ್ನು ಮೆಚ್ಚಿ ಅನೇಕ ಸಂಘ–ಸಂಸ್ಥೆಗಳು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿವೆ. ಕರುನಾಡ ರತ್ನ ಪ್ರಶಸ್ತಿ, ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಹೀಗೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಈ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡುವ ಉತ್ಕೃಷ್ಟ ಮನಸ್ಸು ಹೊಂದಿರುವ ಬಡಿಗೇರ ಅವರಿಗೆ ಕೈತುಂಬಾ ಕೆಲಸವಿದೆ. ಇನ್ನಷ್ಟು ನೈಪುಣ್ಯತೆಯನ್ನು ಹೆಚ್ಚಿಸಿಕೊಂಡು ರಥ ನಿರ್ಮಾಣ ಕಾರ್ಯ ಅಂತರ ಜಿಲ್ಲೆ ಹಾಗೂ ರಾಜ್ಯಗಳಿಗೆ ವಿಸ್ತರಿಸಲಿ ಎಂಬುದು ನಮ್ಮಲ್ಲೆರ ಆಶಯ.

ಯಲಬುರ್ಗಾ ತಾಲ್ಲೂಕಿನ ನರಸಾಪುರ ಗ್ರಾಮದ ಕಲಾವಿದ ಶರಣಕುಮಾರ ಬಡಿಗೇರ ರಥದ ಗಡ್ಡಿ ತಯಾರಿಯಲ್ಲಿ ನಿರತರಾಗಿರುವುದು 
ರಥ ನಿರ್ಮಾಣದಲ್ಲಿ ಸಾಧನೆ ರಥ ಶಿಲ್ಪಿ ಕಲಾಕೇಂದ್ರ ಸ್ಥಾಪನೆದೇವಿ ಮೂರ್ತಿ ಪಲ್ಲಕ್ಕಿ ನಿರ್ಮಾಣಕ್ಕೂ ಸೈ
ಶರಣಕುಮಾರ ಅವರ ಕೈಚಳಕದಿಂದ ಕಟ್ಟಿಗೆಯಲ್ಲಿ ಕಲೆ ಮೂಡಿಬರುತ್ತಿರುವುದರಿಂದಲೇ ಹೊಸ ಹೊಸ ರಥಗಳ ನಿರ್ಮಾಣಕ್ಕೆ ಬೇಡಿಕೆಗಳು ಬರುತ್ತಿವೆ. ಆದರೆ ರಥ ಶಿಲ್ಪಿಗಳ ಪರಿಶ್ರಮಕ್ಕೆ ತಕ್ಕಂತೆ ಆದಾಯ ದೊರೆಯುತ್ತಿಲ್ಲ. ಸರ್ಕಾರದ ಪ್ರೋತ್ಸಾಹ ಅಗತ್ಯವಿದೆ
ಶ್ರೀಕಾಂತಗೌಡ ಮಾಲಿಪಾಟೀಲ ಕಲಾವಿದ ತರಲಕಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.