ADVERTISEMENT

ಯಲಬುರ್ಗಾ: ಆರೇ ತಿಂಗಳಲ್ಲಿ ಕಿತ್ತುಹೋದ ಸೇತುವೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 7:21 IST
Last Updated 20 ಆಗಸ್ಟ್ 2025, 7:21 IST
<div class="paragraphs"><p>ಯಲಬುರ್ಗಾ ತಾಲ್ಲೂಕು ಗೆದಗೇರಿ-ಮಲ್ಕಸಮುದ್ರ ಗ್ರಾಮದ ಸಂಪರ್ಕ ರಸ್ತೆಯ ಮಧ್ಯ ಇರುವ ಕಿರು ಸೇತುವೆಯು ಕಳೆದ ಒಂದು ವಾರದಲ್ಲಿ ಸುರಿದ ಮಳೆಗೆ ಸಂಪೂರ್ಣ ಕಿತ್ತುಹೋಗಿದೆ</p></div>

ಯಲಬುರ್ಗಾ ತಾಲ್ಲೂಕು ಗೆದಗೇರಿ-ಮಲ್ಕಸಮುದ್ರ ಗ್ರಾಮದ ಸಂಪರ್ಕ ರಸ್ತೆಯ ಮಧ್ಯ ಇರುವ ಕಿರು ಸೇತುವೆಯು ಕಳೆದ ಒಂದು ವಾರದಲ್ಲಿ ಸುರಿದ ಮಳೆಗೆ ಸಂಪೂರ್ಣ ಕಿತ್ತುಹೋಗಿದೆ

   

The bridge that collapsed in six months

ಯಲಬುರ್ಗಾ: ಕಳೆದ ಒಂದು ವಾರದಲ್ಲಿ ಸುರಿದ ಮಳೆಗೆ ತಾಲ್ಲೂಕಿನ ಗೆದಗೇರಿ- ಮಲ್ಕಸಮುದ್ರ ಗ್ರಾಮದ ಸಂಪರ್ಕ ರಸ್ತೆ ಮಧ್ಯೆ ಇರುವ ಕಿರು ಸೇತುವೆ ಸಂಪೂರ್ಣ ಕಿತ್ತುಹೋಗಿದೆ. ನಿರ್ಮಾಣಗೊಂಡು ಕೇವಲ ಆರೇಳು ತಿಂಗಳಲ್ಲೇ ಒಂದೆರೆಡು ಮಳೆಗೆ ಕಿತ್ತುಹೋಗಿದ್ದು, ಕಾಮಗಾರಿಯ ಗುಣಮಟ್ಟದ ಕುರಿತು ಸಾರ್ವಜನಿಕರಲ್ಲಿ ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ.

ADVERTISEMENT

ರೈತಾಪಿ ಜನರು ಹಾಗೂ ಜಾನುವಾರುಗಳು ತಮ್ಮ ಜಮೀನು ಮತ್ತು ಅಕ್ಕಪಕ್ಕದ ಗ್ರಾಮಕ್ಕೆ ಈ ಸೇತುವೆ ಸಂಪರ್ಕ ಕಲ್ಪಿಸಿತ್ತು.

‘ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದವರ ಉಸ್ತುವಾರಿಯಲ್ಲಿ ನಿರ್ಮಾಣಗೊಂಡಿದ್ದ ಈ ಸೇತುವೆಯ ನಿರ್ಮಾಣದ ಹಂತದಲ್ಲಿಯೇ ಸಾಕಷ್ಟು ಮೇಲಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವ ಕಾರಣ ಈ ಅವ್ಯವಸ್ಥೆಗೆ ಕಾರಣವಾಗಿದೆ. ಅಲ್ಲದೇ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡುವಂತೆ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಹೇಳಿ ಸಾರ್ವಜನಿಕರು ಕೂಡಾ ಕಳಪೆ ಕಾಮಗಾರಿಯನ್ನು ಪ್ರಶ್ನಿಸದಂತೆ ನೋಡಿಕೊಳ್ಳುತ್ತಿದ್ದರು’ ಎಂದು ಗೆದಗೇರಿ ಜನಪರಹೋರಾಟ ಸಮಿತಿಯ ಪದಾಧಿಕಾರಿ ಹನುಮೇಶ, ಮಹೇಶಗೌಡ ಪಾಟೀಲ ಆರೋಪಿಸುತ್ತಾರೆ.

‘ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಹರಿವು ಉಂಟಾಗಿ ಸೇತುವೆಗೆ ಅಳವಡಿಸಿದ ಕೊಳವೆಗಳಿಗೆ ಅಡ್ಡ ಗಿಡಗಂಟಿ ಸಿಲುಕಿ ನೀರು ಹರಿಯದೇ ಅಕ್ಕಪಕ್ಕದಲ್ಲಿ ನುಗ್ಗಿ ಈ ಅವಾಂತರಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಲ್ಲದೇ ಸಾಮಾನ್ಯ ಸಭೆಯಲ್ಲಿಯೂ ನಿಗಮದ ಅಧಿಕಾರಿಗಳಿಗೆ ತ್ವರಿತವಾಗಿ ಕ್ರಮಕೈಗೊಳ್ಳಲು ಸೂಚಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ ತಿಳಿಸಿದ್ದಾರೆ.

‘ರೈತರು ತಮ್ಮ ತಮ್ಮ ಹೊಲಮನೆಗಳಿಗೆ ತಿರುಗಾಡುವ ಬಹುಮುಖ್ಯ ರಸ್ತೆಯಾಗಿದ್ದರಿಂದ ತ್ವರಿತವಾಗಿ ಗುಣಮಟ್ಟದಲ್ಲಿ ನಿರ್ಮಾಣಗೊಳ್ಳುವುದು ಅಗತ್ಯವಿದೆ. ನಾಲ್ಕು ಹಾಗೂ ಎರಡು ಚಕ್ರಗಳ ವಾಹನಗಳು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ಇದೇ ರಸ್ತೆಯ ಮೇಲೆ ಸಂಚಾರಗೊಳ್ಳುವುದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ. ತಾಂತ್ರಿಕ ಕಾರಣಗಳನ್ನು ಹೇಳಿಕೊಂಡು ದಿನಗಳನ್ನು ನೂಕುತ್ತಾ ಸಾಗಿದರೆ ಸಾರ್ವಜನಿಕರು ನಿತ್ಯ ಯಾತನೆ ಅನುಭವಿಸಬೇಕಾಗುತ್ತದೆ. ಕಾರಣ ಮೇಲಧಿಕಾರಿಗಳು ಹೊಸದಾಗಿ ಮರು ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕಾಗಿದೆ’ ಎಂದು ಗೆದಗೇರಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸಂಬಂಧಪಟ್ಟ ಕೆಆರ್‌ಐಡಿಎಲ್ ಅಧಿಕಾರಿಗಳ ಗಮನಕ್ಕೆ ತಂದಿದ್ದು ಅವರು ಕೂಡ ಈಗಾಲೇ ಮರು ನಿರ್ಮಾಣಕ್ಕಾಗಿ ಅಂದಾಜುಪಟ್ಟಿ ಸಿದ್ದಗೊಳಿಸಿ ಅನುದಾನ ಮಂಜೂರಾತಿಗೆ ಕೋರಿಕೆ ಸಲ್ಲಿಸಿದ್ದಾರೆ. ಮಳೆ ಸುರಿಯುತ್ತಿರುವುದರಿಂದ ಕಾಮಗಾರಿ ಪ್ರಾರಂಭಗೊಂಡಿಲ್ಲ ಮಳೆ ನಿಂತ ಕೂಡಲೇ ಕೆಲಸ ಪ್ರಾರಂಭಗೊಳ್ಳುತ್ತದೆ.ಸಂತೋಷ ಪಾಟೀಲ ಬಿರಾದಾರ ಇಒ ತಾಪಂ ಯಲಬುರ್ಗಾ ಅಂದಾಜು ಪತ್ರಿಕೆಯಲ್ಲಿರುವಂತೆ ಹಾಗೂ ವೈಜ್ಞಾನಿಕವಾಗಿ ನಿರ್ಮಾಣಗೊಳ್ಳದೇ ಬೇಕು ಬೇಡವಾದ ರೀತಿಯಲ್ಲಿ ಕಳಪೆಯಾಗಿ ನಿರ್ಮಿಸಿದ್ದರಿಂದ ಆರೇಳು ತಿಂಗಳಲ್ಲಿಯೇ ಕಿರುಸೇತುವೆ ಕಿತ್ತುಹೋಗಿದೆ. ತ್ವರಿತವಾಗಿ ನಿರ್ಮಿಸದೇ ಹೋದರೆ ಹೋರಾಟ ಮಾಡಬೇಕಾಗುತ್ತದೆ - ರುದ್ರಪ್ಪ ನಡೂಲಮನಿ ದಸಂಸ ಮುಖಂಡ ಗೆದಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.