
ಯಲಬುರ್ಗಾ: ಮದ್ಯಮುಕ್ತ ಗ್ರಾಮವನ್ನಾಗಿ ಮಾಡುವುದು, ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಮದ್ಯ ಮಾರಾಟ ನಡೆಯಬಾರದು ಎಂದು ಗ್ರಾಮದ ಸಾವಿರಾರು ಸಂಖ್ಯೆಯ ಮಹಿಳೆಯರು ಪಟ್ಟು ಹಿಡಿದು ಪ್ರತಿಭಟಿಸಿದರು.
ತಾಲ್ಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಅನೇಕ ಮಹಿಳೆಯರು ಪಂಚಾಯಿತಿ ಎದುರು ಜಮಾಯಿಸಿ ಆಕ್ರೋಶ ಹೊರಹಾಕಿದರು.
‘ಗ್ರಾಮದ ಪ್ರತಿಯೊಂದು ಅಂಗಡಿಯಲ್ಲಿ ಮದ್ಯದ ಬಾಟಲಿಗಳು ದೊರೆಯುತ್ತವೆ. ಸಣ್ಣ ಸಣ್ಣ ಹುಡುಗರು ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ಅಲ್ಲದೇ ಮನೆಯ ಯಾವ ಸಾಮಗ್ರಿಗಳು ಉಳಿಯುತ್ತಿಲ್ಲ, ಹಣದ ಕೊರತೆಯಾದ ಕೂಡಲೇ ಅವುಗಳನ್ನು ಮಾರಾಟ ಮಾಡಿ ಮದ್ಯ ಸೇವಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ’ ಎಂದು ಮಹಿಳೆಯರು ನೋವು ತೋಡಿಕೊಂಡರು.
ಕರವೇ ಅಧ್ಯಕ್ಷ ರಾಜಶೇಖರ ಶ್ಯಾಗೋಟಿ ಮಾತನಾಡಿ, ‘ಸುಮಾರು ವರ್ಷಗಳಿಂದಲೂ ಗ್ರಾಮದಲ್ಲಿ ಹಾಡು ಹಗಲೇ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಬಕಾರಿ ಅಧಿಕಾರಿಗಳೊಂದಿಗೆ ಪಟ್ಟಣದ ಕೆಲ ಮದ್ಯ ಮಾರಾಟದ ಅಂಗಡಿಯವರು ಶಾಮೀಲಾಗಿದ್ದರ ಪರಿಣಾಮ ಗ್ರಾಮದಲ್ಲಿ ಯಾವ ಭಯವಿಲ್ಲದೇ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ತಾ.ಪಂ ಮಾಜಿ ಸದಸ್ಯ ಶರಣಪ್ಪ ಈಳಿಗೇರ ಮಾತನಾಡಿ, ‘ಅಕ್ರಮವಾಗಿ ಯಾರೇ ಮದ್ಯ ಮಾರಾಟ ಮಾಡುತ್ತಿದ್ದರೂ ಮುಲಾಜಿಲ್ಲದೇ ಕಾನೂನು ಕ್ರಮಕೈಗೊಳ್ಳಬೇಕು. ಯುವಕರ ಜೀವನ ಹಾಳಾಗುತ್ತಿರುವುದನ್ನು ಸಹಿಸಲು ಆಗುವುದಿಲ್ಲ. ಈಗಾಗಲೇ 8 ಜನ ಯುವಕರು ಕುಡಿತದ ಚಟಕ್ಕೆ ಪ್ರಾಣ ಬಿಟ್ಟಿದ್ದಾರೆ’ ಎಂದರು.
ಮಾದಿಗ ದಂಡೂರು ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರಗಪ್ಪ ನಡುಲಮನಿ, ಗ್ರಾಪಂ ಮಾಜಿ ಸದಸ್ಯ ಕಳಕನಗೌಡ ಪಾಟೀಲ, ಸಿಪಿಐ ಮೌನೇಶ್ವರ ಪಾಟೀಲ, ತಾಪಂ ಇಒ ನೀಲಗಂಗಾ, ಅಬಕಾರಿ ನಿರೀಕ್ಷಿಕ ರವಿಕುಮಾರ ಪಾಟೀಲ ಮಾತನಾಡಿದರು.
ಪಿಡಿಒ ರವಿಕುಮಾರ ಲಿಂಗಣ್ಣವರ ಹೇಳಿದರು. ಅಬಕಾರಿ ನಿರೀಕ್ಷಕಿ ನೀಲಾ ಗಲಿಗಲಿ, ಆನಂದ, ಪಿಎಸ್‍ಐ ವಿಜಯ ಪ್ರತಾಪ್, ಕರವೇ ಕಾರ್ಯಧ್ಯಕ್ಷ ಶಿವರಾಜ ಚಿಕ್ಕೊಪ್ಪ, ಕಲ್ಲಿನಾಥ, ಮುಖಂಡ ದೇವಪ್ಪ ಪರಂಗಿ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.