ADVERTISEMENT

ಪ್ರವಾಸೋದ್ಯಮ: ‘ಕೊಪ್ಪಳ ಅನ್ವೇಷಣೆ’ಯ ಪಯಣ

ಎರಡು ದಿನ ಜಿಲ್ಲೆಯ ತಾಣಗಳನ್ನು ಸುತ್ತಾಡಲಿದ್ದಾರೆ ಪ್ರವಾಸಿ ಪ್ರೋತ್ಸಾಹಕರು

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 4:05 IST
Last Updated 22 ಜನವರಿ 2026, 4:05 IST
ಕೊಪ್ಪಳದಲ್ಲಿ ಬುಧವಾರ ನಡೆದ ಪ್ರವಾಸೋದ್ಯಮ; ಕೊಪ್ಪಳ ಅನ್ವೇಷಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಮಾತನಾಡಿದರು
ಕೊಪ್ಪಳದಲ್ಲಿ ಬುಧವಾರ ನಡೆದ ಪ್ರವಾಸೋದ್ಯಮ; ಕೊಪ್ಪಳ ಅನ್ವೇಷಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಮಾತನಾಡಿದರು   

ಕೊಪ್ಪಳ: ಸುಂದರ ತಾಣಗಳು ಹಾಗೂ ಐತಿಹಾಸಿಕ ಮಹತ್ವವನ್ನು ತನ್ನೊಡಲೊಳಗೆ ಹುದುಗಿಸಿಕೊಂಡು ಪ್ರವಾಸಿ ಪ್ರಿಯರನ್ನು ಸೆಳೆಯುತ್ತಿರುವ ಜಿಲ್ಲೆಯ ಸ್ಥಳಗಳನ್ನು ಸುತ್ತಾಡಲು, ಅವುಗಳ ಬಗ್ಗೆ ಅನ್ವೇಷಣೆ ನಡೆಸಲು ಹಲವು ಯೂಟ್ಯೂಬರ್‌ಗಳು, ಬ್ಲಾಗರ್‌ಗಳು, ಟೂರ್‌ ಆಪರೇಟರ್‌ಗಳು ಹಾಗೂ ಇನ್‌ಫ್ಲುಯೆರ್‌ಗಳು ಜಿಲ್ಲೆಗೆ ಬಂದಿದ್ದಾರೆ.

ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ವಿವಿಧ ತಾಣಗಳನ್ನು ಸುತ್ತಾಡಲಿದ್ದು, ಇದರಿಂದ ಜಿಲ್ಲೆಯ ಪ್ರವಾಸೋದ್ಯಮದ ಉತ್ತೇಜನಕ್ಕೆ ನವಚೈತನ್ಯ ಲಭಿಸುವ ನಿರೀಕ್ಷೆಗಳು ಗರಿಗೆದರಿವೆ. ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಮಂತ್ರಾಲಯ, ಬೆಂಗಳೂರು ಕಚೇರಿ, ಜಿಲ್ಲಾಡಳಿದ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ‘ಕೊಪ್ಪಳ ಅನ್ವೇಷಿಸಿ’ ಹೆಸರಿನಲ್ಲಿ ಪ್ರವಾಸಿ ಪ್ರಿಯರು ತಾಣಗಳ ಬಗ್ಗೆ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ರಾತ್ರಿ ನಡೆದ ಸುಂದರ ಕಾರ್ಯಕ್ರಮದಲ್ಲಿ ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದವರು, ಪ್ರವಾಸಿ ಎಜೆಂಟರು, ಪ್ರವಾಸಿ ಮಿತ್ರರು ಹಾಗೂ ಪ್ರವಾಸೋದ್ಯಮದಲ್ಲಿ ಕೆಲಸ ಮಾಡುತ್ತಿರುವವರು ಹೀಗೆ ಅನೇಕರು ಭಾಗವಹಿಸಿದ್ದರು.

ADVERTISEMENT

ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಒದಗಿಸಿ ‘ಜಿಲ್ಲೆಯ ಪ್ರವಾಸೋದ್ಯಮ ಎಲ್ಲರನ್ನೂ ಗಮನ ಸೆಳೆಯುವಂತಿದೆ. ಆದರೆ ನೆರೆ ಜಿಲ್ಲೆಯಲ್ಲಿ ವಿಶ್ವವಿಖ್ಯಾತ ಹಂಪಿಯ ಸೆರಗಿನಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಮುಚ್ಚಿ ಹೋಗಿದೆ. ಹೋಟೆಲ್, ರೆಸಾರ್ಟ್‌ಗಳು ಹೀಗೆ ಎಲ್ಲರೂ ಪರಸ್ಪರ ಸಹಕಾರದಿಂದ ಕೆಲಸ ಮಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ, ಉದ್ಯೋಗದ ಅವಕಾಶಗಳು ಕೂಡ ಲಭಿಸುತ್ತವೆ’ ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಕಾರ್ಯಕ್ರಮದ ಮಧ್ಯದಲ್ಲಿ ಕೊಪ್ಪಳದ ಅಂಜಲಿ ಭರತನಾಟ್ಯ ಕೇಂದ್ರದ ಕಲಾವಿದರು ಭರತನಾಟ್ಯ ನೃತ್ಯ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೊಗಲು ಗೊಂಬೆಯಾಟ ಕಲಾವಿದೆ ಭೀಮವ್ವ ಶಿಳ್ಳೆಕ್ಯಾತರ್ ಅವರ ತಂಡದವರು ತೊಗಲು ಗೊಂಬೆಯಾಟ, ಹೊಸಳ್ಳಿಯ ಹುಲಿಗೆಮ್ಮ ಹಂದ್ರಾಳ ಮತ್ತು ತಂಡದವರು ಗೀಗೀ ಪದಗಳನ್ನು ಪ್ರಸ್ತುತಪಡಿಸಿದರು.  

ಜಿಲ್ಲಾ ತೋಟಗಾರಿಕಾ ಕ್ಷೇತ್ರದಲ್ಲಿ ಬೆಳೆಯಲಾಗುತ್ತಿರುವ ಗುಣಮಟ್ಟದ ಹಣ್ಣುಗಳ ಮತ್ತು ಅವುಗಳ ಉತ್ಪನ್ನಗಳ ಪ್ರದರ್ಶನ, ಅಂತರರಾಷ್ಟ್ರೀಯ ಮಟ್ಟದಲ್ಲಿ ರಫ್ತು ಮಾಡಲಾಗುತ್ತಿರುವ ತಾವರಗೇರಾ ಪಟ್ಟಣದ ನುಗ್ಗೆ ಉತ್ಪನ್ನಗಳ ಪ್ರದರ್ಶನ, ಭಾಗ್ಯನಗರ ಸೀರೆ, ಆನೆಗೊಂದಿಯ ಬಾಳೆನಾರಿನ ಕರಕುಶಲ ವಸ್ತುಗಳು, ಕಿನ್ನಾಳ ಕಲೆಯ ಗೊಂಬೆಗಳು ಮತ್ತು ಕೊಪ್ಪಳ ಬಿದಿರು ಕಲೆ ಉತ್ಪನ್ನಗಳ ಪ್ರದರ್ಶನಕ್ಕೆ ಇರಿಸಲಾಗಿತ್ತು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ರೋಷನ್‌ ಪಿಂಟೊ, ಕೇದಾರ್‌, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಭೀಮವ್ವ ಶಿಳ್ಳೇಕ್ಯಾತರ ಹಾಗೂ ತಂಡದದವರು ಪ್ರದರ್ಶಿಸಿದ ತೊಗಲುಗೊಂಬೆಯಾಟದ ಚಿತ್ರಣ
ವಿದೇಶಕ್ಕೆ ಹೋಗಿ ನೋಡಿದರೆ ಏನು ಸಿಗುವುದಿಲ್ಲವೊ ಆ ಎಲ್ಲ ಸೌಂದರ್ಯವೂ ನಮ್ಮ ಜಿಲ್ಲೆಯಲ್ಲಿದೆ. ಭಕ್ತರ ನಿಜವಾದ ಭಕ್ತಿಯ ಸಾಗರ ನೋಡಲು ಕೊಪ್ಪಳದ ಗವಿಮಠಕ್ಕೆ ಬರಬೇಕು
ರಾಜಶೇಖರ ಹಿಟ್ನಾಳ ಸಂಸದ
ಕೊಪ್ಪಳದಲ್ಲಿ ಒಂದೇ ಜಿಲ್ಲೆ ಹಲವು ಜಗತ್ತು ಎನ್ನುವ ಪರಿಕಲ್ಪನೆ ವ್ಯಾಪಕವಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಬೆಳೆಸಲು ಹೇರಳ ಅವಕಾಶಗಳಿವೆ
ವರ್ಣಿತ್‌ ನೇಗಿ ಜಿಲ್ಲಾ ಪಂಚಾಯಿತಿ ಸಿಇಒ
ಪ್ರವಾಸೋದ್ಯಮ ಇಲಾಖೆಯಿಂದ ಮೊದಲ ಬಾರಿಗೆ ಕೊಪ್ಪಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿನ ರಮ್ಯ ಪ್ರವಾಸಿ ತಾಣಗಳನ್ನು ನೋಡಲು ಕಾಯುತ್ತಿದ್ದೇವೆ
ಸಂಧ್ಯಾ ಹರಿದಾಸ ಪ್ರವಾಸೋದ್ಯಮ ಮಂತ್ರಾಲಯದ ಬೆಂಗಳೂರು ಕಚೇರಿ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.