ADVERTISEMENT

ಆದಿಚುಂಚನಗಿರಿ ಶ್ರೀಗಳಿಗೆ ಗುರುವಂದನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 8:35 IST
Last Updated 11 ಜನವರಿ 2012, 8:35 IST

ಮಂಡ್ಯ:  ಆದಿಚುಂಚನಗಿರಿ ಮಠಾಧೀಶರಾದ ಬಾಲಗಂಗಾಧರ ನಾಥ ಸ್ವಾಮೀಜಿ ಅವರಿಗೆ 68ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಠದ ಭಕ್ತರು, ಬೆಂಬಲಿಗರ ಸಮ್ಮುಖದಲ್ಲಿ ಮಂಗಳವಾರ ಆತ್ಮೀಯ ವಾಗಿ ಗುರುವಂದನೆ ನೀಡಿ ಗೌರವಿಸಲಾಯಿತು.

ಸರ್ಕಾರಿ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ ಭಕ್ತರು, ಬೆಂಬಲಿಗರು, ಹಿತೈಷಿಗಳ ಪರವಾಗಿ ಮಾಜಿ ಸಂಸದ ಅಂಬರೀಶ್ ಮತ್ತು ವಿವಿಧ ಪಕ್ಷಗಳ ಸ್ಥಳೀಯ ಮುಖಂಡರು ಸ್ವಾಮೀಜಿಗಳಿಗೆ ಪುಷ್ಪವೃಷ್ಠಿ ಮಾಡಿ ಗುರುವಂದನೆ ಸಲ್ಲಿಸಿದರು. ಸಭಿಕರು ಚಪ್ಪಾಳೆ ಮೂಲಕ ಇದಕ್ಕೆ ದನಿಗೂಡಿಸಿದರು.

ಇದಕ್ಕೆ ಮುನ್ನ ಸಮಾರಂಭದಲ್ಲಿ ಹಾಜರಿದ್ದ ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ, ಮುನಿಯಪ್ಪ ಮತ್ತು ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಅವರು ಮಾತನಾಡಿ, ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಆದಿಚುಂಚನಗಿರಿ ಮಠವು ಸ್ವಾಮೀಜಿಗಳ ನೇತೃತ್ವದಲ್ಲಿ ಸಲ್ಲಿಸುತ್ತಿರುವ ಸೇವೆ ಕೊಂಡಾಡಿದರು.

ಕೇಂದ್ರ ಸಚಿವ ವೀರಪ್ಪ ಮೊಯಿಲಿ ಸಮಾರಂಭ ಉದ್ಘಾಟಿಸಿ, ವಿವಿಧ ಧರ್ಮಗಳ ನಡುವೆ ಸಮನ್ವಯತೆಯ ಸಾಧನೆ ಮತ್ತು ಅಹಿಂಸೆಯ ಪ್ರತಿಪಾದನೆ ಮನುಕುಲದ ರಕ್ಷಣೆಗೆ ಅಗತ್ಯ ಎಂದು ಪ್ರತಿಪಾದಿಸಿದರು.

ಜಾತಿ, ಮತ, ತತ್ವದ ಸಂಗವು ಜನರ ಹಿತ ರಕ್ಷಿಸಬೇಕು. ಇದೇ ಎಲ್ಲ ಧರ್ಮದ ಉದ್ದೇಶ. ಸೇಡು, ದ್ವೇಷದಿಂದ ಸಮನ್ವಯತೆ ಸಾಧಿಸುವುದು ಸಾಧ್ಯವಿಲ್ಲ ಎಂದು ಹೇಳಿದರು.

ಬಾಲಗಂಗಾಧರನಾಥ ಸ್ವಾಮೀಜಿ ಅವರು  ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮುಂದಿನ ವರ್ಷ ಶ್ರೀಗಳ ಹುಟ್ಟುಹಬ್ಬವನ್ನು ಕೋಲಾರದಲ್ಲಿ ಮಾಡುವ ಆಸಕ್ತಿಯಿದೆ ಎಂದು  ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.

ಸಮಾರಂಭದ ಸಾನ್ನಿಧ್ಯವನ್ನು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯಕ್ರಮದ ಸಂಘಟಕ ಎಸ್. ಸಚ್ಚಿದಾನಂದ, ಮಾಜಿ ಸಂಸದ ಅಂಬರೀಶ್, ನೈಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ, ಸಚಿವ ರಾಜೂಗೌಡ, ಶಾಸಕರಾದ ಹರೀಶ್, ವೆಂಕಟಸ್ವಾಮಿ, ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಮಾಜಿ ಶಾಸಕ ಮಧು ಮಾದೇಗೌಡ, ಕೆಪಿಸಿಸಿ ಸದಸ್ಯರಾದ ಗುರುಚರಣ್, ಎಲ್.ಡಿ. ರವಿ, ಸಿ.ಡಿ.ಗಂಗಾಧರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಪಿ.ಮಹೇಶ್, ಯುವ ಮುಖಂಡ ಅಶೋಕ್ ಎಸ್.ಡಿ. ಜಯರಾಂ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸತೀಶ್, ನಗರಸಭೆ ಅಧ್ಯಕ್ಷ ಅರುಣ್‌ಕುಮಾರ್, ನಗರಸಭೆ ಮಾಜಿ ಅಧ್ಯಕ್ಷರಾದ ಅಂಬುಜಮ್ಮ, ವಿಜಯಲಕ್ಷ್ಮಿ, ಕಾಂಗ್ರೆಸ್ ಮುಖಂಡರಾದ ವಿವೇಕಾನಂದ, ಎಂ.ಬಿ. ಶ್ರೀಕಾಂತ್, ಜಿ.ಸಿ.ಆನಂದ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.