ADVERTISEMENT

ಉದ್ಯೋಗ ಸೇವೆಗೆ ರುಕ್ಮಾಂಗದ ಮೀಸಲು!

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 4:10 IST
Last Updated 9 ಅಕ್ಟೋಬರ್ 2011, 4:10 IST

ಶ್ರೀರಂಗಪಟ್ಟಣ: ಈತನ ಹೆಸರು ರುಕ್ಮಾಂಗದ. ವಯಸ್ಸು ಕೇವಲ 24. ಉದ್ಯೋಗ ಕೊಡಿಸುವುದು ಈತನ ಕಾಯಕ! ಈತ ಈಗಾಗಲೇ ನಾಲ್ಕು ಕಡೆ ಉದ್ಯೋಗ ಮೇಳ ನಡೆಸಿ 1000ಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಿದ್ದಾರೆ.

2009ರಿಂದ ಶ್ರೀರಂಗಪಟ್ಟಣ, ಕೊಳ್ಳೇಗಾಲ, ಪಾಂಡವಪುರಗಳಲ್ಲಿ ಮೇಳ ನಡೆಸಿ ನಿರುದ್ಯೋಗಿ ಯುವಕ-ಯುವತಿಯರಿಗೆ ವಿವಿಧ ಕಂಪೆನಿ, ಸಂಸ್ಥೆಗಳಲ್ಲಿ ಕೆಲಸ   ಸಿಗುವಂತೆ ನೋಡಿಕೊಂಡಿದ್ದಾರೆ. ನೂರಾರು ಮಂದಿಯನ್ನು ತರಬೇತಿಗೆ ಸೇರಿಸಿದ್ದಾರೆ.

2009ರ ಮಾರ್ಚ್ ತಿಂಗಳಲ್ಲಿ ಪಟ್ಟಣದಲ್ಲಿ ನಡೆದ ಮೊದಲ ಮೇಳದಲ್ಲಿ 450 ಮಂದಿ, 2010ರಲ್ಲಿ 380 ಮಂದಿ, 2010ರಲ್ಲಿ ಪಾಂಡವಪುರದಲ್ಲಿ 180ಕ್ಕೂ ಹೆಚ್ಚು ಮಂದಿ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಸಿಕ್ಕಿದೆ. 2011ರ ಆಗಸ್ಟ್‌ನಲ್ಲಿ ಕೊಳ್ಳೇಗಾಲದಲ್ಲಿ ಮತ್ತೊಂದು ಉದ್ಯೋಗ ಮೇಳ ನಡೆಸಿ ಒಂದೇ ದಿನ 820 ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ.

ಕೊಳ್ಳೇಗಾಲದಲ್ಲಿ ನಡೆಸಿದ ಮೇಳದಲ್ಲಿ 3000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು ವಿಶೇಷ. ಮೈಪಾಲ್, ಅಪೋಲೊ ಫಾರ್ಮಸಿ, ಫಾಲ್ಕಾನ್, ಯುರೇಕಾ ಫೋರ್ಸ್, ರವಿಂದು ಟಯೋಟಾ, ವಿಪ್ರೋ, ಜೆ.ಕೆ.ಟೈರ್ಸ್‌, ಬಿಪಿಓಗಳಾದ ಅಸೆಂಚರ್, ಹಿಂದುಜಾ, ಸ್ಪೈಸ್ ಇತರ ಕಂಪೆನಿ, ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈಗಿನ್ನೂ ಬಿಬಿಎಂ ಓದುತ್ತಿರುವ ರುಕ್ಮಾಂಗದ ಕೇವಲ ಎರಡು ವರ್ಷಗಳಲ್ಲಿ 4 ಬೃಹತ್ ಉದ್ಯೋಗ ಮೇಳಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಉದ್ಯೋಗ ಮೇಳ ಆಯೋಜಿಸಿ ಕೆಲಸ ಕೊಡಿಸುವ ಜತೆಗೆ ಗ್ರಾಮೀಣ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸ್ಪೋಕನ್ ಇಂಗ್ಲಿಷ್ ತರಗತಿ ನಡೆಸುತ್ತಿದ್ದಾರೆ. ಖಾಸಗಿ ಕಂಪೆನಿಗಳ ಜತೆ ನಿಕಟ ಸಂಪರ್ಕ ಇರಿಸಿಕೊಂಡಿದ್ದು ಉದ್ಯೋಗ ಕೇಳಿ ಬರುವವರನ್ನು ಬಿಡಿಯಾಗಿ, ತಂಡವಾಗಿ ಕರೆದೊಯ್ದು ಜೀವನಕ್ಕೆ ದಾರಿ ತೋರಿಸುತ್ತಿದ್ದಾರೆ.

`ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಎಲ್ಲರಿಗೂ ಸರ್ಕಾರಿ ಕೆಲಸ ಸಿಗುವ ಖಾತರಿ ಇಲ್ಲ. ನಿರುದ್ಯೋಗಿ ಮಿತ್ರರಿಗೆ ಸಹಾಯ ಮಾಡಬೇಕು ಎಂಬ ಕಾರಣಕ್ಕೆ ಪ್ರತಿಫಲಾಪೇಕ್ಷೆ ಇಲ್ಲದೆ ಇಂತಹ ಮೇಳಗಳನ್ನು ಆಯೋಜಿಸುತ್ತಿದ್ದೇನೆ ಎನ್ನುತ್ತಾರೆ.

2009ರಿಂದ ಇಲ್ಲಿಯವರೆಗೆ ನಾಲ್ಕು ಯಶಸ್ವಿ ಉದ್ಯೋಗ ಮೇಳಗಳನ್ನು ನಡೆಸಲು ಉಪ ವಿಭಾಗಾಧಿಕಾರಿ  ಪ್ರಭು ಅವರ ಸಲಹೆಯೂ ಸಹಕಾರಿಯಾಗಿದೆ. 5 ಸಾವಿರ ಜನರಿಗೆ ಉದ್ಯೋಗ ಲಭಿಸುವಂತೆ ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳ ನಡೆಸುವ ಗುರಿಯೂ ಇದೆ ಎಂದು ಹೇಳುತ್ತಾರೆ.

ರುಕ್ಮಾಂಗದ ಅವರ ಸಂಪರ್ಕ ಸಂಖ್ಯೆ 9164666996 ಆಗಿದ್ದು, ಆಸಕ್ತರು ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.