ADVERTISEMENT

ಎಂಎಸ್‌ಐಎಲ್‌ನಲ್ಲಿ ಮಾರಾಟ:ಸಚಿವ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 8:40 IST
Last Updated 10 ಫೆಬ್ರುವರಿ 2011, 8:40 IST

ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಉತ್ಪಾದನೆಗೊಂಡು ಉಳಿದಿರುವ ವಿಸ್ಕಿ, ರಮ್ ಮದ್ಯವನ್ನು ಎಂಎಸ್‌ಐಎಲ್ ಮೂಲಕ ಮಾರಾಟ ಮಾಡುವ ಚಿಂತನೆ ಇದೆ ಎಂದು ಅಬಕಾರಿ ಖಾತೆ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಮೈಷುಗರ್ ಕಾರ್ಖಾನೆಗೆ ಭೇಟಿ ನೀಡಿ ಕಾರ್ಖಾನೆಯ ಕಾರ್ಯ ವೈಖರಿಯನ್ನು ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಭೇಟಿ ಸಂದರ್ಭದಲ್ಲಿ ಕಾರ್ಖಾನೆಯ ಆಡಳಿತ ಇಲ್ಲಿ ತಯಾರಾದ ಮೈ ವ್ಹಿಸ್ಕಿ, ಮೈ ಬ್ರಾಂದಿ ಹೆಸರಿನ ಮದ್ಯ ಸುಮಾರು 13 ಸಾವಿರ ಕೇಸ್ ಉಳಿದಿದೆ ಎಂಬ ಮಾಹಿತಿ ನೀಡಿದೆ. ಇದನ್ನು ವಿಲೆವಾರಿ ಮಾಡಲು ಇಲಾಖೆ ಚಿಂತನೆ ನಡೆಸಲಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿನ ಮೈಷುಗರ್ ಮತ್ತು ಸಹಕಾರಿ ವ್ಯಾಪ್ತಿಯ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಬದ್ಧವಾಗಿದೆ. ಅಲ್ಲದೆ, ಮೈಷುಗರ್ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಹಣಕಾಸು ಕಾದಿರಿಸುವಂತೆಯೂ ಮನವಿ ಮಾಡಲಾಗುವುದು ಎಂದರು.

ಮೈಷುಗರ್‌ನಲ್ಲಿ ಈಗಾಗಲೇ ಅಗತ್ಯ ಪ್ರಮಾಣದ ಕಬ್ಬು ಅರೆದಿದ್ದು, ಮುಂದಿನಹಂಗಾಮಿನಲ್ಲಿ 6 ಲಕ್ಷ ಟನ್ ಕಬ್ಬು ಅರೆಯುವ ಗುರಿ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾರ್ಖಾನೆಯ ಅಧ್ಯಕ್ಷ ನಾಗರಾಜಪ್ಪ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.