ADVERTISEMENT

ಗಮನ ಸೆಳೆದ ಮಕ್ಕಳ ಕೃಷ್ಣವೇಷ ಸ್ಫರ್ಧೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 6:36 IST
Last Updated 12 ಸೆಪ್ಟೆಂಬರ್ 2013, 6:36 IST

ಪಾಂಡವಪುರ: ಪಟ್ಟಣದ ಆದಿತ್ಯ ವಿದ್ಯಾಸಂಸ್ಥೆ ಹಾಗೂ ದೇವೇಗೌಡನಕೊಪ್ಪಲು ಬಳಿ ಇರುವ ಜ್ಞಾನಬಂಧು ವಿದ್ಯಾ ಸಂಸ್ಥೆಗಳು ಸಂಯುಕ್ತವಾಗಿ ಈಚೆಗೆ ಏರ್ಪಡಿಸಿದ್ದ ಶ್ರೀಕೃಷ್ಣವೇಷ ಸ್ಫರ್ಧೆಯಲ್ಲಿ ಭಾಗವಹಿಸಿದ್ದ ಶಾಲೆಯ ಮಕ್ಕಳು ನೋಡುಗರನ್ನು ರಂಜಿಸಿದರು.

ಶ್ರೀಕೃಷ್ಣ ವೇಷ ಸ್ಪರ್ಧೆ, ಸ್ಥಳದಲ್ಲಿಯೇ ಶ್ರೀಕೃಷ್ಣನ ಚಿತ್ರ ಬಿಡಿಸುವುದು, ರಂಗೋಲಿ ಸ್ಪರ್ಧೆ, ಮಡಿಕೆ ಹೊಡೆಯುವ ಸ್ಪರ್ಧೆಗಳು ನಡೆದವು. ಶ್ರೀಕೃಷ್ಣ ಹಾಗೂ ರಾಧೆ ವೇಷ ಭೂಷಣ ಸ್ಪರ್ಧೆಯಲ್ಲಿ ಸುಮಾರು 110 ಮಕ್ಕಳು ಭಾಗವಹಿಸಿದ್ದರು. ಕೃಷ್ಣ ವೇಷದ ಕೆಲವು ಮಕ್ಕಳು ದೈರ್ಯದಿಂದ ವೇದಿಕೆಯೇರಿ ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ನಮ: ಎಂದು ನಿರ್ಗಮಿಸಿದರೆ, ಇನ್ನು ಕೆಲವು ಮಕ್ಕಳು ನಾನು ಬೆಣ್ಣೆ ಕದ್ದು ತಿಂದೆ. ರಾಧೆ, ರಾಧೆ ಎಂದು ಎಂದು ಹೇಳಿ ಹೋದರೆ, ಮತ್ತೆ ಕೆಲವು ಮಕ್ಕಳು ವೇದಿಕೆಯಲ್ಲಿ ಅಳುತ್ತ ಹೆದರಿಕೊಳ್ಳುತ್ತ ನಿರ್ಗಮಿಸಿದರು. ರಾಧೆಯ ವೇಷದ ಹೆಣ್ಣುಮಕ್ಕಳು ಕೃಷ್ಣ ನೀ ಬೇಗನೆ ಬಾರೋ... ಎಂದು ಹಾಡುತ್ತ ಮನೋಜ್ಞವಾಗಿ ಕುಣಿದರು.

ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಿವಿಧ ರೀತಿಯ ರಂಗೋಲಿ ಬಿಡಿಸಿದರೆ, ಸುಮಾರು 30ಕ್ಕೂ ಹೆಚ್ಚು ಮಕ್ಕಳು ಕೃಷ್ಣನ ಚಿತ್ರ ಬಿಡಿಸಿದರು. ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಮ್ಮ ಎಡಗೈ ಮೇಲೆ ಮಹೆಂದಿ ಬಿಡಿಸಿಕೊಂಡು ಪ್ರದರ್ಶಿಸಿದರು.

ಹಲವಾರು ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಿಕೆ ಹೊಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ರಂಜಿಸಿದರು. ಕೆಲವು ವಿದ್ಯಾರ್ಥಿನಿಯರು ಕೃಷ್ಣ ವೇಷದ ಬಾಲಕನನ್ನು ಹಿಡಿದುಕೊಂಡು ರಾಧೆಯರಾಗಿ ಸಾಮೂಹಿಕ ನೃತ್ಯ ಮಾಡಿದರು.
ಮಕ್ಕಳಿಗೆ ಸಂಸ್ಥೆಯ ಕಾರ್ಯದರ್ಶಿ ಎಂ.ಆರ್.­ಕುಮಾರ­­ಸ್ವಾಮಿ ಬಹುಮಾನವನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.