ADVERTISEMENT

ನ್ಯಾಯಬೆಲೆ ಅಂಗಡಿ ತೆರೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 5:32 IST
Last Updated 12 ಮಾರ್ಚ್ 2014, 5:32 IST

ಮದ್ದೂರು: ತಾಲ್ಲೂಕಿನ  ಸೋಂಪುರ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಆಗ್ರಹಿಸಿ ಮಂಗಳವಾರ ಗ್ರಾಮಸ್ಥರು ತಾಲೂಕು ಕಚೇರಿ ಆಹಾರ ಶಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಮ್ಮ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯದ ಕ್ರಮ ಖಂಡಿಸಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಹಿರಿಯ ಮುಖಂಡ ಶಂಕರಯ್ಯ ಮಾತನಾಡಿ,  ’ಸೋಂಪುರ ಗ್ರಾಮದ ಗ್ರಾಮಸ್ಥರು ಪಡಿತರ ತೆಗೆದುಕೊಳ್ಳಲು ಸುಮಾರು ಒಂದುವರೆ ಕಿ.ಮೀ. ದೂರುವಿರುವ ನಗರಕೆರೆ ಗ್ರಾಮಕ್ಕೆ ಹೋಗಬೇಕು. ಗ್ರಾಮದಿಂದ ಅಲ್ಲಿಗೆ ವೃದ್ಧರು, ಮಹಿಳೆಯರು ತೆರಳಿ ಪಡಿತರ ತರುವುದು ತುಂಬಾ ಕಷ್ಟವಾಗಿದೆ. ಈ ಸಂಬಂಧ ನಮ್ಮ ಮನವಿ ಮೇರೆಗೆ ಈ ಹಿಂದೆ ಇದ್ದ  ತಹಶೀಲ್ದಾರ್ ಜಗದೀಶ್ ಅವರು ನ್ಯಾಯಬೆಲೆ ಅಂಗಡಿಯನ್ನು ನಮ್ಮ ಗ್ರಾಮದಲ್ಲಿ ತೆರೆಯುವಂತೆ  ಆದೇಶಿಸಿದ್ದರು. ಆದೇಶಿಸಿ ಒಂದು ತಿಂಗಳು ಕಳೆದರೂ ಇಂದಿಗೂ ನ್ಯಾಯಬೆಲೆ ಅಂಗಡಿಯನ್ನು ನಮ್ಮ ಗ್ರಾಮದಲ್ಲಿ  ತೆಗೆದಿಲ್ಲ. ಈ ಕೂಡಲೇ  ಅಂಗಡಿ ತೆರೆಯದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ’ ಎಂದು  ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಂಚೇಗೌಡ ಉದ್ರಿಕ್ತ ಗ್ರಾಮಸ್ಥರನ್ನು ಸಮಾಧಾನಗೊಳಿಸಿದರು. ನಿಮ್ಮ ಗ್ರಾಮದಲ್ಲಿ ಶೀಘ್ರದಲ್ಲೇ ನ್ಯಾಯಬೆಲೆ ಅಂಗಡಿ ತೆರೆಯುವುದು ಎಂಬ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

ಗ್ರಾಮದ ಮುಖಂಡರಾದ  ಸುರೇಶ್, ಪುಟ್ಟೇಗೌಡ, ಚಿಕ್ಕಮಾದಯ್ಯ, ಚಿಕ್ಕತಿಮ್ಮಯ್ಯ, ಲತಾ, ಬೋರಮ್ಮ, ಜಯಮ್ಮ, ಯಶೋಧಮ್ಮ, ರಾಮು, ಮಲ್ಲಯ್ಯ, ಸಂದೀಪ್, ಶಶಿ, ಉದಯ್, ದೇವೇಗೌಡ, ಉಮೇಶ್ ಪ್ರತಿಭಟನೆಯ ನೇತೃತ್ವವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.