ADVERTISEMENT

ಮಳವಳ್ಳಿ ಪುರಸಭೆ: ರೂ80 ಲಕ್ಷ ಉಳಿತಾಯ ಬಜೆಟ್

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 8:50 IST
Last Updated 16 ಮಾರ್ಚ್ 2012, 8:50 IST

ಮಳವಳ್ಳಿ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ಪುರಸಭೆ ಅಧ್ಯಕ್ಷೆ   ರಶ್ಮಿ ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಬಸವರಾಜು 2012-13ನೇ ಸಾಲಿಗೆ ರೂ.80,36,769 ಉಳಿತಾಯ ಬಜೆಟ್ ಮಂಡಿಸಿದರು.

ಪ್ರಾರಂಭ ಶಿಲ್ಕು ರೂ. 1,41,08,269. ನಿರೀಕ್ಷಿತ ಆದಾಯ ರೂ.9,30,45,000 ಆದಾಯ ನಿರೀಕ್ಷೆ ಮಾಡಿದ್ದು ಒಟ್ಟು ರೂ.10,71,53,269. ಅದರಲ್ಲಿ ರೂ.9,91,16,500 ವೆಚ್ಚ ಮಾಡುವ ನಿರೀಕ್ಷೆಯಿದ್ದು ರೂ.80,36,769 ಉಳಿತಾಯವಾಗಲಿದೆ. ನಿರೀಕ್ಷಿತ ಆದಾಯದಲ್ಲಿ ಪ್ರಮುಖವಾಗಿ ಎಸ್‌ಎಫ್‌ಸಿ ಅನುದಾನ (ಮುಕ್ತನಿಧಿ) ರೂ. 3,20,00,000, 13ನೇ ಹಣಕಾಸು ಯೋಜನೆ ಅನುದಾನ ರೂ.65,00,000. ಬಳಕೆದಾರರ ಶುಲ್ಕಗಳು-ನೀರು ಮತ್ತು ಒಳಚರಂಡಿ ಶುಲ್ಕಗಳು ನೀರಿನ ತೆರಿಗೆ ರೂ.42,00,000. ಆಸ್ತಿ ತೆರಿಗೆ ಆದಾಯ ರೂ.60,00,000. ಎಸ್‌ಎಫ್‌ಸಿ ವೇತನ ಅನುದಾನ ರೂ. 1,05,45,000. ಎಸ್‌ಎಫ್‌ಸಿ ವಿದ್ಯುಚ್ಛಕ್ತಿ ಅನುದಾನ ರೂ.2,50,00,000. ಕೇಂದ್ರ ಸರ್ಕಾರದಿಂದ ನಿಶ್ಚಿತ ಉದ್ದೇಶಗಳಿಗಾಗಿ ಬಂದ ಅನುದಾನಗಳು ಮತ್ತು ದೇಣಿಗೆಗಳು, ಯೋಜನೆಗಳು, ಕಾರ್ಯಕ್ರಮಗಳು ರೂ.25,00,000.

ಒಟ್ಟಾಗಿ ಆದಾಯ ನಿರೀಕ್ಷೆ ಮಾಡಿರುವುದು ಪುರಸಭೆಯಡಿ ನಿರೀಕ್ಷಿತ ಆದಾಯ ರೂ.160 ಲಕ್ಷ.  ರಾಜ್ಯ ಸರ್ಕಾರ ನಿರೀಕ್ಷಿತ ಅನುದಾನ ರೂ.680. 45ಲಕ್ಷ. ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಅನುದಾನ ರೂ.90 ಲಕ್ಷ. ಒಟ್ಟು ರೂ.930.45 ಲಕ್ಷ.

ಪುರಸಭೆ ಉಪಾಧ್ಯಕ್ಷ ಡಿ.ಶಿವಕುಮಾರ್, ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ ಹಾಗೂ ಪುರಸಭೆ ಸದಸ್ಯರು,ನೌಕರರು ಉಪಸ್ಥಿತರಿದ್ದರು.
ಸಭಾ ತ್ಯಾಗ: ಬಜೆಟ್ ಪ್ರಾರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರೇ ಆದ ಕಿರಣ್‌ಶಂಕರ್ ಅವರು 2011-12ನೇ ಸಾಲಿನಲ್ಲಿ ಶೇ 22.75ರ ಅನುದಾನದಲ್ಲಿ ಪರಿಶಿಷ್ಟ ವರ್ಗ/ಪಂಗಡದ ಫಲಾನುಭವಿಗಳಿಗೆ ಕಂಪ್ಯೂಟರ್, ಹೊಲಿಗೆಯಂತ್ರ ಸೇರಿದಂತೆ ಯೋಜನೆಯನ್ನೇ ಅನುಷ್ಠಾನಗೊಳಿಸಿಲ್ಲ. 12ನೇ ಹಣಕಾಸು ಯೋಜನೆಯಡಿ ತಮ್ಮ ವಾರ್ಡಿಗೆ ಕುಡಿಯುವ ನೀರು ಪೈಪ್ ಅಳವಡಿಸಿ ಒಂದು ವರ್ಷ ಕಳೆದರೂ ಸಂಪರ್ಕ ಕಲ್ಪಿಸಿಲ್ಲ, ವಿವಿಧ ಮಾಹಿತಿಗಾಗಿ ಹಲವು ಬಾರಿ ಅರ್ಜಿಗಳನ್ನು ನೀಡಿದ್ದು ಯಾವುದಕ್ಕೂ ಸಮರ್ಪಕ ಉತ್ತರ ನೀಡಿಲ್ಲ ಎಂದು ಆರೋಪಿಸಿ ಬಜೆಟ್ ಸಭೆಯಿಂದ ಹೊರಹೋಗುವುದಾಗಿ ಹೇಳಿ ಸಭಾತ್ಯಾಗ ಮಾಡಿದರು.

ಸರಳ ವಿವಾಹ ಏ.19ಕ್ಕೆ ಮುಂದೂಡಿಕೆ
ಮದ್ದೂರು: ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಅವರ 70ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಏ.14ರಂದು ಭಾರತೀನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಉಚಿತ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಏ.19ಕ್ಕೆ ಮುಂದೂಡಲಾಗಿದೆ. 

ಡಾ.ಜೈ ಭೀಮ್ ದಲಿತ ಜಾಗೃತಿ ಸಮಿತಿ ನೇತೃತ್ವದಲ್ಲಿ ನಡೆಯುವ ಈ ವಿವಾಹದಲ್ಲಿ ಪಾಲ್ಗೊಳ್ಳುವ ವಧು-ವರರಿಗೆ ಮಾಂಗಲ್ಯ, ಕಾಲುಂಗರ, ವಸ್ತ್ರ, ಕೈಗಡಿಯಾರ ಸೇರಿದಂತೆ ಸ್ಥಳದಲ್ಲೇ ತಲಾ 10ಸಾವಿರ ರೂಪಾಯಿ ನಗದು ಪ್ರೋತ್ಸಾಹಧನ ನೀಡಲಾಗುವುದು. ಇದಲ್ಲದೆ ಆದರ್ಶ ವಿವಾಹಗಳ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದಿಂದ ಪ್ರತಿ ಜೋಡಿಗೆ ಕೊಡಲ್ಪಡುವ 10ಸಾವಿರ ರೂಪಾಯಿ ನಗದು ಧನ ಸಹಾಯ ಕೊಡಿಸಲಾಗುವುದು.

ಆಸಕ್ತರು ತಮ್ಮ ವಯಸ್ಸಿನ ಪ್ರಮಾಣ ಪತ್ರ, ಗ್ರಾಮ ಪಂಚಾಯಿತಿಯಿಂದ ಪಡೆದ ವಾಸ ದೃಢೀಕರಣ ಪತ್ರ, ಮೊದಲನೇ ಮದುವೆ ಎಂದು ಗ್ರಾಮದ ಇಬ್ಬರು ಗಣ್ಯರಿಂದ ದೃಢೀಕರಣ ಪತ್ರದೊಂದಿಗೆ ಏ.10ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ವಿವರಗಳಿಗೆ ಮೊ.99456 20345 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.