ADVERTISEMENT

ಮಳೆ ಬಂದರೆ ಕೆರೆಯಾಗುವ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 5:42 IST
Last Updated 16 ಜೂನ್ 2017, 5:42 IST
ಕೆ.ಆರ್.ಪೇಟೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿರುವ ವಾಹನಗಳು ನೀರಿನಲ್ಲಿರುವುದು
ಕೆ.ಆರ್.ಪೇಟೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿರುವ ವಾಹನಗಳು ನೀರಿನಲ್ಲಿರುವುದು   

ಕೆ.ಆರ್.ಪೇಟೆ: ಮಳೆಗಾಲ ಬಂತೆಂದರೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಭಾಗಶಃ ಕೆರೆಯಾಗಿಬಿಡುತ್ತದೆ. ಮಳೆಯ ನೀರು ಹೊರಹೊಗಲು ಯಾವ ವ್ಯವಸ್ಥೆ ಯನ್ನೂ ಮಾಡದೆ ಇರುವುದರಿಂದ ನಿಲ್ದಾಣದಲ್ಲಿರುವ ಹೊಟೇಲ್ ಹಾಗೂ ಅಂಗಡಿಗಳಿಗೂ ನೀರು ನುಗ್ಗುತ್ತದೆ.

ಕೆರೆ ಅಂಗಳದಲ್ಲಿ ಬಸ್‌ ನಿಲ್ದಾಣ ನಿರ್ಮಿಸಿರುವುದರಿಂದ ಈ ಅವಸ್ಥೆ ಉಂಟಾಗಿದೆ. ಚನ್ನಪ್ಪನಕಟ್ಟೆ ಎಂದು ಕರೆಯುತ್ತಿದ್ದ ಕೆರೆಯನ್ನು ನೀರಿಲ್ಲದಿದ್ದಾಗ ಉದ್ಯಾನ ಮಾಡಿಕೊಳ್ಳಲಾಗುತಿತ್ತು. ಸುಮಾರು 25 ವರ್ಷಗಳ ಹಿಂದೆ ಪಟ್ಟಣದಲ್ಲಿ ಬಸ್ ನಿಲ್ದಾಣದ ಕೊರತೆ ಇದುದ್ದರಿಂದ ಈ ಜಾಗವನ್ನು ಕೆಎಸ್ಆರ್‌ಟಿಸಿಗೆ ಹಸ್ತಾಂತರಿಸಿ ಬಸ್ ನಿಲ್ದಾಣ ನಿರ್ಮಿಸಲಾಯಿತು.

ಐದಾರು ವರ್ಷಗಳ ಹಿಂದೆ ಕಾಂಕ್ರೀಟ್ ನಿಲ್ದಾಣ ಮಾಡಲಾಯಿತು. ಆದರೆ, ಮಳೆ ನೀರು ಹೊರಹೋಗಲು ಸರಿಯಾದ ವ್ಯವಸ್ಥೆ ಮಾಡಲಿಲ್ಲ. ಹೀಗಾಗಿ, ಮಳೆಗಾಲ ಬಂತೆಂದೆರೆ ಬಸ್‌ ನಿಲ್ದಾಣ ಕೆರೆಯ ನೆನಪನ್ನೇ ತಂದುಕೊಡುತ್ತದೆ.

ADVERTISEMENT

ಇಲ್ಲಿ ಸಂಗ್ರಹವಾಗುವ ನೀರು ಹೊರಹೊಗಲು ವೈಜ್ಞಾನಿಕ ವ್ಯವಸ್ಥೆ ಇಲ್ಲದಿರುವುದರಿಂದ ಸೊಳ್ಳೆಗಳ ಆವಾಸ ತಾಣವಾಗಿ ರೋಗ ಹರಡುವ ಸ್ಥಳವಾಗಿದೆ. ಆದ್ದರಿಂದ ಪ್ರಯಾಣಿಕರು ಬಸ್‌ ನಿಲ್ದಾಣಕ್ಕೆ ಬರಲು ಹಿಂದೇಟು ಹಾಕುತ್ತಾರೆ.

ಅಲ್ಲದೆ, ಬಸ್ ನಿಲ್ದಾಣದ ಎಲ್ಲ ಚರಂಡಿಗಳು ಕೊಳಚೆ ನೀರಿನಿಂದ ತುಂಬಿಕೊಂಡಿವೆ. ನಿಲ್ದಾಣದ ನೀರನ್ನು ಹೊರಸಾಗಿಸಲು ಹೊಸ ಪೈಪ್‌ಲೈನ್ ಮಾಡಬೇಕಿದೆ. ಜತೆಗೆ ತ್ಯಾಜ್ಯವಸ್ತುಗಳನ್ನು ಹೊರಸಾಗಿಸಬೇಕಿದೆ.

* * 

ರಾಜಕಾಲುವೆಯನ್ನು ತಿಂಗಳಿಗೊಮ್ಮೆ ಯಾದರೂ ಸ್ವಚ್ಛ ಗೊಳಿಸಬೇಕು. ಬಸ್ ನಿಲ್ದಾಣದಿಂದ ಹಳ್ಳದವರೆಗೂ ತೆರೆದ ಚರಂಡಿಯನ್ನು ನಿರ್ಮಾಣ ಮಾಡಬೇಕು
ಕೆ.ಬಿ.ನಂದೀಶ್ ಕುಮಾರ್
ಪುರಸಭೆ ಸದಸ್ಯ, ಕೆ.ಆರ್.ಪೇಟೆ

* * 

ಮಳೆ ಬಂದು ನೀರು ಸಂಗ್ರಹ ವಾಗಿ ಸಮಸ್ಯೆ ಬಂದಾಗ ಮಾತ್ರ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಆನಂತರ ನಿರ್ಲಕ್ಷ್ಯ ವಹಿಸುತ್ತಾರೆ. ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು
ಲೋಕೇಶ್
ಹೊಟೇಲ್ ಮಾಲೀಕ, ಕೆ.ಆರ್‌.ಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.