ADVERTISEMENT

ಯೋಜನೆ ಜಾರಿಗೆ ಅಧಿಕಾರಿಗಳ ನಿರ್ಲಕ್ಷ್ಯ:ಆರೋಪ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 9:40 IST
Last Updated 14 ಸೆಪ್ಟೆಂಬರ್ 2011, 9:40 IST

ನಾಗಮಂಗಲ: ಹಿಂದಿನ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ಕ್ರಿಯಾ ಯೋಜನೆಗಳಿಗೆ ಜಿಲ್ಲಾ ಪಂಚಾಯಿತಿ ಅನುಮತಿ ಪಡೆದು ಅವುಗಳನ್ನು ಜಾರಿಗೊಳಿಸುವಲ್ಲಿ ತಾಪಂ ಅಧಿಕಾರಿಗಳು  ವಿಫಲರಾಗಿದ್ದಾರೆ ಎಂದು ಇಲ್ಲಿನ  ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯರು ಆರೋಪಿಸಿದರು.

ಬೋಗಾದಿ ಕ್ಷೇತ್ರದ ಸದಸ್ಯ ದೇವರಾಜು ಮಾತನಾಡಿ, ಅಧಿಕಾರಿಗಳು ತಾಪಂ ಸದಸ್ಯರಿಗೆ ಕಿಂಚಿತ್ತು ಬೆಲೆ ಕೊಡುವುದಿಲ್ಲ ಎಂದು ದೂರಿದರು. ಇದಕ್ಕೆ ಇತರ ಸದಸ್ಯರು ಸಹಮತ ವ್ಯಕ್ತಪಡಿಸಿದರು. 

 ತಾಪಂ ಪ್ರಭಾರ ಇಒ ಡಾ.ಕೆ.ಮಾಲತಿ ಪ್ರತಿಕ್ರಿಯಿಸಿ, ಅಧಿಕಾರಿಗಳಿಗೆ ಸಲಹೆ ನೀಡಿ ಸಭೆ ಮುಂದುವರೆಸಲು ಅನುವು ಮಾಡಿಕೊಟ್ಟರು.

ತಾಲ್ಲೂಕು ಪಂಚಾಯಿತಿಯಲ್ಲಿ  ಅನುಷ್ಟಾನಗೊಂಡಿರುವ ಕ್ರಿಯಾಯೋಜನೆಗಳನ್ನು ಆಯಾ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುವಲ್ಲಿ ತಾಪಂ ವಿಫಲವಾಗಿದೆ. ಇದರಿಂದಾಗಿ ಅನುಮೋದನೆ ಪಡೆದ ಕಾಮಗಾರಿಗಳು ಜಾರಿಗೊಳಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯರಾದ ಎನ್.ಬಿ.ಕುಮಾರ್, ಬಿ.ಬಿ.ಲಕ್ಷ್ಮಿನಾರಾಯಣ ಆರೋಪಿಸಿದರು.

ದೇವಲಾಪುರ ಪಂಚಾಯಿತಿ ಕಾರ್ಯದರ್ಶಿ ಅಲ್ಲಿನ ಅಧ್ಯಕ್ಷರ ಜೊತೆ ಅನುಚಿತವಾಗಿ ವರ್ತಿಸಿದ್ದರ ಹಿನ್ನೆಲೆಯಲ್ಲಿ ನೀಡಿದ ನೋಟೀಸ್‌ಗೆ ಕಾರ್ಯದರ್ಶಿ ನೀಡಿರುವ ಉತ್ತರದಿಂದ ತೃಪ್ತರಾಗದ ಸದಸ್ಯೆ ಚಂದ್ರಕಲಾ ರಾಜೇಶ್ ಕಾರ್ಯದರ್ಶಿಯನ್ನು ಬೇರೆಡೆಗೆ ವರ್ಗಾಯಿಸಲು ಪಟ್ಟು ಹಿಡಿದರು. ಇದಕ್ಕೆ ಸ್ಪಂದಿಸಿದ ಸಭೆ ಮೇಲಾಧಿಕಾರಿಗಳಿಗೆ ಪತ್ರ ಬರೆದು ಅವರನ್ನು ಕೂಡಲೇ ವರ್ಗಾಯಿಸುವಂತೆ ಇಒ ಮಾಲತಿ ಅವರಿಗೆ ಸೂಚಿಸಿದರು.

ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಮಾತನಾಡಿ ದುಸ್ಥಿತಿಯಲ್ಲಿರುವ ತಾಲ್ಲೂಕಿನ 108 ಅಂಗನವಾಡಿ ಕೇಂದ್ರಗಳು ದುರಸ್ಥಿಗೆ ಅನುದಾನ ನೀಡಲು ಮನವಿ ಸಲ್ಲಿಸಿದರು. ಪಿ.ನೇರಲಕೆರೆಯಲ್ಲಿ ನೂತನ ಅಂಗನವಾಡಿ ಕೇಂದ್ರ ನಿರ್ಮಿಸಲು ತೀರ್ಮಾನಿಸಲಾಯಿತು.

ತಾ.ಪಂ ಅಧ್ಯಕ್ಷ ಕೃಷ್ಣಪ್ಪ  ಮಾತನಾಡಿ, ಸಾಮಾನ್ಯ ಸಭೆಗೆ ಗೈರು ಹಾಜರಾಗುವ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ಇಒಗೆ ಸೂಚಿಸಿದರು.

ಬರಗಾಲದ ಮುನ್ಸೂಚನೆ : ತಾಲ್ಲೂಕಿನಾದ್ಯಂತ ಬರಗಾಲದ ಮುನ್ಸೂಚನೆ ಇದೆ. ನೀರಿಲ್ಲದೇ ಪರದಾಡುತ್ತಿರುವ ಜನ ಜಾನುವಾರುಗಳಿಗೆ ರಕ್ಷಣೆ ನೀಡಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ ಉಪಾಧ್ಯಕ್ಷ ಎಚ್.ಸಿ.ಶಂಕರ್ ನೀಡಿದ ಸಲಹೆಗೆ ಸದಸ್ಯರಾದ ದೇವರಾಜು, ಮೂಡ್ಲಿಗೌಡ ದನಿಗೂಡಿಸಿದರು.

ಸಾರ್ವಜನಿಕ ಆಸ್ಪತ್ರೆಯ ಶೌಚಾಲಯಗಳು ದುರ್ನಾತ ಕೇಂದ್ರಳಾಗಿದ್ದು, ರೋಗಿಗಳು ಮೂಗು ಮುಚ್ಚಿ ಓಡಾಡುವ ಸ್ಥಿತಿ ಇದೆ. ವಾರಕ್ಕೊಮ್ಮೆಯೂ ಹಾಸಿಗೆಯ ಬೆಡ್‌ಶೀಟ್ ಬದಲಿಸುತ್ತಿಲ್ಲ ಎಂದು ಕೆಲವರು ದೂರಿದರು. ಸರ್ಕಾರದಿಂದ ಬರುವ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ಆಸ್ಪತ್ರೆಯನ್ನು ಶುಚಿಯಾಗಿಡುವಂತೆ ವೈದ್ಯಾಧಿಕಾರಿಗೆ ಸೂಚಿಸಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.