ADVERTISEMENT

ರಕ್ತದಲ್ಲಿ ಪತ್ರ ಬರೆದು ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 6:37 IST
Last Updated 18 ಸೆಪ್ಟೆಂಬರ್ 2013, 6:37 IST

ಶ್ರೀರಂಗಪಟ್ಟಣ: ಮೈಸೂರಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಿಯಕರನಿಗೆ ರಕ್ತದಲ್ಲಿ ಪ್ರೇಮಪತ್ರ ಬರೆದು, ನಂತರ ಅತಿಯಾದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.

ಶ್ರೀರಂಗನಾಥಸ್ವಾಮಿ ದೇವಾಲಯ ಬಳಿ ಅಸ್ವಸ್ಥಗೊಂಡು ಬಿದ್ದಿದ್ದ ಸುಮಾರು 19 ವರ್ಷದ ಯುವತಿಯನ್ನು ದೇವಾಲಯದಲ್ಲಿ ಕೆಲಸ ಮಾಡುವ ಶಶಿಕಲಾ ಹಾಗೂ ಇತರರು ಕರೆತಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದರು.

ರಕ್ತದ ಒತ್ತಡಕ್ಕೆ ನೀಡುವ ‘ಅಟೆನ್‌–50’ ಎಂಬ 20 ಮಾತ್ರೆಗಳು ಹಾಗೂ ಗ್ಯಾಸ್‌ ಟ್ರಬಲ್‌ಗೆ ಕೊಡುವ ‘ಓಮಿ’ ಹೆಸರಿನ 8 ಮಾತ್ರೆಗಳನ್ನು ಯುವತಿ ನುಂಗಿದ್ದಾಳೆ ಎಂದು ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯ ಡಾ.ಕೆ.ಬಿ. ಶಿವಕುಮಾರ್‌ ತಿಳಿಸಿದ್ದಾರೆ.

ಸ್ಥಳದಲ್ಲಿ ಮಾತ್ರೆಯ ಕವರ್‌ಗಳು ಪತ್ತೆಯಾಗಿದ್ದು, ಪೊಲೀಸರ ವಶಕ್ಕೆ ನೀಡಲಾಗಿದೆ. ಯುವತಿಯ ಉಸಿರಾಟ ಮತ್ತು ರಕ್ತದ ಒತ್ತಡದಲ್ಲಿ ಏರುಪೇರು ಕಂಡುಬಂದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ.

ಬೆಳಿಗ್ಗೆ 10ಗಂಟೆ ವೇಳೆಯಲ್ಲಿ ರಂಗನಾಥಸ್ವಾಮಿ ದೇವಾಲಯ ಬಳಿ ಯುವಕನೊಬ್ಬನ ಜತೆ ಈ ಯುವತಿ ಓಡಾಡುತ್ತಿದ್ದು, 11ಗಂಟೆ ವೇಳೆಗೆ ದೇವಾಲಯ ಬಳಿಯ ಆಟೊ ನಿಲ್ದಾಣದ ಸಮೀಪದ ಅಸ್ವಸ್ಥಗೊಂಡು ಬಿದ್ದಿದ್ದಳು ಎಂದು ಶಶಿಕಲಾ ತಿಳಿಸಿದ್ದಾರೆ.

ತನ್ನ ಎಲ್ಲ ಪುಸ್ತಕಗಳಲ್ಲಿ ವಿಜಯ್‌ ಎಂಬ ಹೆಸರನ್ನು ಬರೆದುಕೊಂಡಿದ್ದಾಳೆ. ಎರಡು ಕಡೆ ರಕ್ತದಲ್ಲಿ ಪತ್ರ ಬರೆದಿದ್ದು, ಅದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳು ವುದಾಗಿ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಯುವತಿಯನ್ನು ಮೈಸೂರಿಗೆ ಕರೆದೊಯ್ಯುವ ಮುನ್ನ ಆಕೆಯ ಸಂಬಂಧಿಕರ ಹೇಳಿಕೆ ಪಡೆದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.