ADVERTISEMENT

ರೈತರಿಗೆ ಸಂಕಷ್ಟ, ಗ್ರಾಹಕರಿಗೆ ಸಮಾಧಾನ

ಮಂಡ್ಯ: ತರಕಾರಿಗಳ ಬೆಲೆ ತೀವ್ರ ಕುಸಿತ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 6:56 IST
Last Updated 5 ಡಿಸೆಂಬರ್ 2013, 6:56 IST

ಮಂಡ್ಯ: ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ಕುಸಿದಿರುವುದು ಗ್ರಾಹಕರಿಗೆ ಸಮಾಧಾನ ತಂದಿದ್ದರೆ, ಅದನ್ನು ಬೆಳೆದ ರೈತರಿಗೆ ದಿಕ್ಕೇ ತೋಚದಂತಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಬಹುತೇಕ ತರಕಾರಿಗಳ ಬೆಲೆಯು ಮಂಡ್ಯದ ಮಾರುಕಟ್ಟೆಯಲ್ಲಿ ಕೆಜಿಗೆ 10 ರೂಪಾಯಿಯಂತೆ ದೊರೆಯುತ್ತಿದೆ. ತರಕಾರಿ ಬೆಳೆದುಕೊಂಡು ನಾಲ್ಕು ಕಾಸು ಪಡೆದುಕೊಳ್ಳುತ್ತಿದ್ದ ರೈತ ಸಮೂಹ ಸಿಲುಕಿದೆ.

ಬೆಂಡೆಕಾಯಿ, ಮೂಲಂಗಿ, ಬಿನ್ಸ್‌, ಈರೇಕಾಯಿ, ಗೆಡ್ಡೆಕೋಸು ಕೇವಲ ರೂ10 ಕೆಜಿ ಇದ್ದರೆ, ಸೀಮೆ ಬದನೆಕಾಯಿ ರೂ20 ಮಾರಾಟ ಮಾಡಲಾಗುತ್ತಿದೆ.

ತೊಗರಿಕಾಯಿ ರೂ25, ಅವರೆಕಾಯಿ ರೂ30, ಬಿಟ್‌ರೂಟ್‌ ರೂ30, ಕ್ಯಾರೆಟ್‌ ರೂ 40 ರೂಪಾಯಿಗೆ ಕೆಜಿಯಂತೆ ಮಾರಾಟವಾಗುತ್ತಿದೆ. ಸೊಪ್ಪಿನ ಸೂಡುಗಳೂ ರೂ5 ಒಂದರಂತೆ ಮಾರಾಟ ಮಾಡಲಾಗುತ್ತದೆ. ಕೋತಂಬರಿ ಸೂಡಿನಲ್ಲಿಯೂ ಬೆಲೆ ಇಳಿಕೆಯಾಗಿದೆ.

ಕೆಲ ದಿನಗಳ ಹಿಂದೆ 20 ರೂಪಾಯಿ ಕೆಜಿಗೆ ಮಾರಾಟವಾಗುತ್ತಿದ್ದ ಟೊಮ್ಯಾಟೊ ಬೆಲೆಯೂ ಈಗ ರೂ10 ಕೆಜಿಗೆ ಕುಸಿದಿದೆ. ಹತ್ತು ರೂಪಾಯಿಗೆ ಹತ್ತು ಸೌತೆಕಾಯಿ ನೀಡಲಾಗುತ್ತಿದೆ.

ಹದಿನೈದು ದಿನಗಳಲ್ಲಿ 50 ರೂಪಾಯಿಗೆ ಕೆಜಿಗೆ ಮಾರಾಟವಾಗುವ ಮೂಲಕ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಬೆಲೆಯೂ ಕೆಜಿಗೆ 20 ರಿಂದ 25 ರೂಪಾಯಿಗೆ ಇಳಿದಿರುವುದು ಸಮಾಧಾನ ತರಿಸಿದೆ.

ಅರ್ಧ ಕೆಜಿ ಇಲ್ಲ: ಬೆಲೆ ಇಳಿಕೆಯಿಂದಾಗಿ ಮಾರಾಟಗಾರರು, ಕಾಲು ಕೆಜಿಯ ಲೆಕ್ಕದಲ್ಲಿ ತರಕಾರಿ ತೂಗುವುದನ್ನು ನಿಲ್ಲಿಸಿಬಿಟ್ಟಿದ್ದಾರೆ.

ಕೆಲವರು ಅರ್ಧ ಕೆಜಿಯೂ ತೂಗುವುದಿಲ್ಲ. ಐದು ರೂಪಾಯಿ ಚಿಲ್ಲರೆ ಇದ್ದರೆ ಮಾತ್ರ ನೀಡಲಾಗುತ್ತದೆ. ಇಲ್ಲದಿದ್ದರೆ ಮಿಕ್ಸ್‌ ತರಕಾರಿಯನ್ನು ತೆಗೆದುಕೊಳ್ಳಬೇಕು ಎಂದು ಷರತ್ತು ವಿಧಿಸುತ್ತಾರೆ.

ಬೇಡಿಕೆಗಿಂತ ಹೆಚ್ಚಾಗಿ ತರಕಾರಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆ ಇಲ್ಲದಂತಾಗಿದೆ. ಬಹುತೇಕ ತರಕಾರಿ ಹತ್ತು ರೂಪಾಯಿಗೆ ಕೆಜಿಯಂತೆ ದೊರೆಯುತ್ತಿದೆ. ರೈತರಿಂದ ರೂ8 ಕೆಜಿಯಂತೆ ತೆಗೆದುಕೊಂಡು ಹತ್ತು ರೂಪಾಯಿಗೆ ಮಾರುತ್ತಿದ್ದೇವೆ ಎನ್ನುತ್ತಾರೆ ವ್ಯಾಪಾರಿ ಅಬ್ದುಲ್‌.

ಕಳೆದ ಬಾರಿ ಬಿನ್ಸ್‌ ಮಾರುಕಟ್ಟೆಗೆ ಬಂದಾಗ ರೂ 40  ಕೆಜಿಯಂತೆ ಇತ್ತು. ನಾನು ರೂ30 ಕೆಜಿಯಂತೆ ನೀಡಿ ಹೋಗಿದ್ದೆ. ಆದರೆ, ಈ ಬಾರಿ ರೂ5  ಕೆಜಿಯಂತೆ ಕೇಳುತ್ತಿದ್ದಾರೆ. ಹೊಲದಲ್ಲಿ ಬೆಳೆದ ಕೂಲಿಯೂ ಸಿಗುತ್ತಿಲ್ಲ ಎಂದು ದೂರುತ್ತಾರೆ ದೊಡ್ಡಬ್ಯಾಡರಹಳ್ಳಿಯ ರೈತ ಶಂಭೂಗೌಡ.

ಐದು ರೂಪಾಯಿಗೆ ಒಂದು ಕಪ್‌ ಚಹಾ ಸಹಿತ ಸಿಗುವುದಿಲ್ಲ. ಆ ಬೆಲೆಗೆ ಕೆಜಿ ತರಕಾರಿಯನ್ನು ಮಾರುವಂತಾಗಿದೆ. ತರಕಾರಿ ಬೆಳೆದರೆ ಒಂದಷ್ಟು ಲಾಭವಾಗುತ್ತದೆ ಎಂಬುದಿತ್ತು. ಈಗ ಅದೂ ಇಲ್ಲದಂತಾಗಿದೆ ಎನ್ನುತ್ತಾರೆ ರೈತರು.

ತರಕಾರಿಯೇ ಜೀವನ: ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ರೈತರು ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಒಣ ಬೇಸಾಯವನ್ನು ಹೊಂದಿರುವ ಮಳವಳ್ಳಿ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ.

ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್‌. ಪೇಟೆ ಹಾಗೂ ಮದ್ದೂರು ತಾಲ್ಲೂಕುಗಳಲ್ಲಿಯೂ ತರಕಾರಿಯನ್ನು ಬೆಳೆಯಲಾಗುತ್ತದೆ.

ಮಾಂಸಹಾರವನ್ನು ವರ್ಜಿಸಿ, ಸಸ್ಯಹಾರವನ್ನು ಹೆಚ್ಚಾಗಿ ಬಳಸುವ ಕಾರ್ತಿಕ ಮಾಸದಲ್ಲಿಯೇ ಹೀಗಾದರೆ, ಮುಂದಿನ ದಿನಗಳಲ್ಲಿ ಹೇಗಾಗಬಹುದು ಎನ್ನುವ ಚಿಂತೆ ಅವರನ್ನು ಕಾಡುತ್ತಿದೆ. ಕಳೆದ ಮೂರ್‌ನಾಲ್ಕು ದಿನಗಳಿಂದ ತರಕಾರಿ ಬೆಲೆಗಳಲ್ಲಿ ತೀವ್ರ ಕುಸಿತ ಉಂಟಾಗಿರುವುದು ರೈತರನ್ನು ಕಂಗಾಲಾಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.