ADVERTISEMENT

ಲೋಕಾಯುಕ್ತ ಬಲೆಗೆ ಬಿಇಒ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 6:41 IST
Last Updated 26 ಏಪ್ರಿಲ್ 2013, 6:41 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಗದೀಶ್ ಅನುದಾನಿತ ಶಾಲೆಯ ಶಿಕ್ಷಕರೊಬ್ಬರಿಂದ ಗುರುವಾರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

  ತಾಲ್ಲೂಕಿನ ಅರಕೆರೆ ನಿರ್ಮಲ ವಿದ್ಯಾಸಂಸ್ಥೆಯ ಸಹ ಶಿಕ್ಷಕ ತಿಮ್ಮಯ್ಯ ಅವರಿಂದ ರೂ.5 ಸಾವಿರ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಶಿಕ್ಷಕ ತಿಮ್ಮಯ್ಯ ಅವರ ಅರಿಯರ್ಸ್‌ ಸೇರಿದಂತೆ ಇತರ ಹಣ ಬಿಡುಗಡೆ ಮಾಡಿಸಲು ಕೆ.ಜಗದೀಶ್ ಅವರು ಕಚೇರಿಯಲ್ಲಿ ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಮಧ್ಯಾಹ್ನ 3.30ರ ವೇಳೆಯಲ್ಲಿ ಅವರನ್ನು ಖುದ್ದು ಹಿಡಿದಿದ್ದಾರೆ. ತಿಮ್ಮಯ್ಯ ಅವರಿಂದ ಪಡೆದಿದ್ದ ಸಾವಿರ ರೂಪಾಯಿ ಮುಖ ಬೆಲೆಯ 5 ನೋಟುಗಳನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

  ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಗದೀಶ್ ಹಣ ನೀಡುವಂತೆ ತಿಮ್ಮಯ್ಯ ಅವರನ್ನು ಏ.20ರಂದು ಒತ್ತಾಯಿಸಿದ್ದರು. ಏ.25ರಂದು ಹಣ ನೀಡುವುದಾಗಿ ತಿಮ್ಮಯ್ಯ ಹೇಳಿದ್ದರು. ಲಂಚಕ್ಕೆ ಪೀಡಿಸುತ್ತಿರುವ ಕುರಿತು ತಿಮ್ಮಯ್ಯ ಗುರುವಾರ ಬೆಳಿಗ್ಗೆ ಮಂಡ್ಯ ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಖಚಿತ ಮಾಹಿತಿ ಆಧರಿಸಿ ಇಲ್ಲಿಗೆ ಧಾವಿಸಿದ ಲೋಕಾಯುಕ್ತ ಅಧಿಕಾರಿಗಳ ತಂಡದ ಸದಸ್ಯರಾದ ಶಿವರುದ್ರಯ್ಯ, ವೆಂಕಟೇಶ ಆಚಾರ್ ಇತರರು ಕೆ.ಜಗದೀಶ್ ಅವರನ್ನು ಹಿಡಿದಿದ್ದಾರೆ. ಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವುದಾಗಿ ತನಿಖಾಧಿಕಾರಿ ಕೆ.ಸಂತೋಷ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.