ADVERTISEMENT

ವಿಷಯುಕ್ತ ನೀರು ಕುಡಿದು 8 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 17 ಜೂನ್ 2015, 6:06 IST
Last Updated 17 ಜೂನ್ 2015, 6:06 IST
ಹುಣಗನಹಳ್ಳಿ ಗ್ರಾಮದ ಹಳ್ಳದಲ್ಲಿ ವಿಷಯುಕ್ತ  ನೀರು ಕುಡಿದು ಕುರಿಗಳು ಮೃತಪಟ್ಟಿರುವುದು
ಹುಣಗನಹಳ್ಳಿ ಗ್ರಾಮದ ಹಳ್ಳದಲ್ಲಿ ವಿಷಯುಕ್ತ ನೀರು ಕುಡಿದು ಕುರಿಗಳು ಮೃತಪಟ್ಟಿರುವುದು   

ಮದ್ದೂರು: ಹಳ್ಳದಲ್ಲಿ ಹರಿಯುತ್ತಿದ್ದ  ವಿಷಯುಕ್ತ  ನೀರು ಸೇವಿಸಿ  8 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹುಣಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ತಾಲ್ಲೂಕಿನ ಗೊಲ್ಲರದೊಡ್ಡಿ ಗ್ರಾಮದ ಶೆಟ್ಟಪ್ಪ, ಶಿವಲಿಂಗಮ್ಮ, ಶಿವರಾಜಮ್ಮ, ಎಂದಿನಂತೆ ಬೆಳಿಗ್ಗೆ 9ಕ್ಕೆ ಸಮೀಪದ ಹುಣಗನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ತಮ್ಮ  200ಕ್ಕೂ ಹೆಚ್ಚು ಕುರಿಗಳನ್ನು  ಮೇಯಿಸಲು ಬಿಟ್ಟಿದ್ದರು.

ಸಂಜೆ 4 ಗಂಟೆ ಸಮಯದಲ್ಲಿ ಪಕ್ಕದಲ್ಲಿಯೇ ಇದ್ದ ಹಳ್ಳವೊಂದರಲ್ಲಿ ಕುರಿಗಳು ನೀರು ಕುಡಿದವು. ಅರ್ಧ ಗಂಟೆ ಕಳೆಯುತ್ತಿದ್ದಂತೆ  ಇದ್ದಕ್ಕಿದ್ದ ಹಾಗೆ 8 ಕುರಿಗಳು ವಿಲವಿಲನೆ ಒದ್ದಾಡುತ್ತ ಬಾಯಲ್ಲಿ ಜೊಲ್ಲು ಸುರಿಸಿಕೊಂಡು  ಸಾವನ್ನಪ್ಪಿದವು.

ಗಾಬರಿಗೊಂಡ ಕುರಿ ಮಂದೆ ಯಜಮಾನ ಶೆಟ್ಟಪ್ಪ, ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ತಿಮ್ಮಯ್ಯ ಅವರನ್ನು ಭೇಟಿ ಮಾಡಿ ನಡೆದ ವಿಷಯ ತಿಳಿಸಿದರು. ಕೂಡಲೇ ಪಶು ವೈದ್ಯರಿಗೆ ತಿಮ್ಮಯ್ಯ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಪಶು ವೈದ್ಯರು ಅಸ್ವಸ್ಥವಾಗಿದ್ದ ಇನ್ನಷ್ಟು ಕುರಿಗಳಿಗೆ ಪ್ರಥಮ ಚಿಕಿತ್ಸೆ ಹಾಗೂ  ಚುಚ್ಚುಮದ್ದನ್ನು ನೀಡಿ ಹಲವಾರು ಕುರಿಗಳನ್ನು ಸಾವಿನ ದವಡೆಯಿಂದ ತಪ್ಪಿಸಿದರು.

ಬಳಿಕ ಗುಂಡಿಯಲ್ಲಿದ್ದ ವಿಷಯುಕ್ತ  ನೀರನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುವುದಾಗಿ ಪಶು ವೈದ್ಯರು ತಿಳಿಸಿದ್ದು, ಪ್ರಯೋಗಾಲಯದಿಂದ ವರದಿ ಬಂದ ಬಳಿಕ ಕುರಿಗಳ ಸಾವಿಗೆ ಕಾರಣವೇನು ಎಂಬುದು ತಿಳಿಯಲಿದೆ ಎಂದಿದ್ದಾರೆ.

ಕಳೆದ 20 ವರ್ಷದಿಂದ ಕುರಿ ಸಾಕಾಣಿಕೆ ಮಾಡಿ ಜೀವನ ನಡೆಸುತ್ತಿರುವ ನಮಗೆ ಹೀಗೆ ಆದದ್ದು ಇದೇ ಮೊದಲು. 8 ಕುರಿಗಳ ಸಾವಿನಿಂದಾಗಿ ನಮಗೆ ₨ 50 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ. ಬಡವರಾದ ನಮಗೆ ಕೂಡಲೇ ತಾಲ್ಲೂಕು ಆಡಳಿತ ಪರಿಹಾರ ನೀಡಬೇಕು ಎಂದು ಕುರಿ ಮಂದೆ ಯಜಮಾನ ಶೆಟ್ಟಪ್ಪ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.