ನಾಗಮಂಗಲ: ಮಾರ್ಚ್ 3ರ ಸೋಮವಾರ ರಾತ್ರಿ ಸುರಿದ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಹತ್ತಾರು ಮನೆಗಳು, 50ಕ್ಕೂ ಹೆಚ್ಚು ತೆಂಗಿನ ಮರಗಳು, ಅಪಾರ ಪ್ರಮಾಣದ ದವಸ ಧಾನ್ಯಗಳು ಹಾನಿಯಾಗಿ ಸಂಕಷ್ಟಕ್ಕೀಡಾಗಿರುವ ತಾಲ್ಲೂಕಿನ ಹೊಣಕೆರೆ ಹೋಬಳಿ ಹಿಂಡಸಹಳ್ಳಿ ಗ್ರಾಮ ಕಳೆದ ಎರಡು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕಗ್ಗತ್ತಲಲ್ಲಿ ಮುಳುಗಿದೆ.
ತಾಲೂಕಿನ ಗಡಿಭಾಗದಲ್ಲಿ ಪ್ರಕೃತಿ ವಿಕೋಪಕ್ಕೊಳಗಾಗಿರುವ ಹಿಂಡಸಹಳ್ಳಿ ಗ್ರಾಮಕ್ಕೆ ಶಾಸಕ ಎನ್. ಚಲುವರಾಯಸ್ವಾಮಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೆಂಗಿನ ತೋಟಗಳನ್ನು ವೀಕ್ಷಿಸಿದ ಚಲುವರಾಯಸ್ವಾಮಿ, ಬೇಸಿಗೆ ಕಾಲದಲ್ಲಿ ಸುರಿದಿರುವ ಅಕಾಲಿಕ ಮಳೆಯಿಂದಾಗಿ ಗ್ರಾಮದ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ.
ತೆಂಗಿನ ಮರಗಳು, ಹಲಸಿನ ಮರಗಳು, ತರಕಾರಿ ಬೆಳೆಗಳು ಹಾನಿಯಾಗಿರುವುದನ್ನು ನೋಡಿದರೆ, ಒಂದೆಡೆ ಮಳೆಯಾಯಿತಲ್ಲ ಎಂಬ ಸಂತೋಷವಾದರೆ ಮತ್ತೊಂದೆಡೆ ಪ್ರಕೃತಿ ವಿಕೋಪಕ್ಕೆ ಸಿಲುಕಿ ರೈತರು ತೊಂದರೆಗೆ ಸಿಲುಕಿದರೆಂಬ ಆತಂಕ ಕಾಡುತ್ತಿದೆ. ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆಗಳು ನೀಡುವ ಪರಿಹಾರ ಧನವನ್ನು ಸಂಭವಿಸಿರುವ ನಷ್ಟಕ್ಕೆ ಹೋಲಿಕೆ ಮಾಡಿದರೆ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ.
ಜಿಲ್ಲಾಧಿಕಾರಿಗಳ ಮೂಲಕ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚಿನ ಪರಿಹಾರ ಕೊಡಿಸಲು ತಾವು ಶ್ರಮಿಸುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.