ADVERTISEMENT

ಕನ್ನಡದ ಅಸ್ಮಿತೆ ಕಾಪಾಡಿದ ಬಿಎಂಶ್ರೀ: ಸಾಹಿತಿ ಶುಭಶ್ರೀ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 6:38 IST
Last Updated 4 ಜನವರಿ 2026, 6:38 IST
ಮಂಡ್ಯ ನಗರದ ಗಾಂಧಿಭವನದಲ್ಲಿ ಜಿಲ್ಲಾ ಬಬ್ಬೂರುಕಮ್ಮೆ ಸೇವಾ ಬಳಗ ಶನಿವಾರ ಆಯೋಜಿಸಿದ್ದ ‘ಕನ್ನಡದ ಕಣ್ವ’ ಬಿ.ಎಂ.ಶ್ರೀಕಂಠಯ್ಯ ಅವರ 142ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು ಉದ್ಘಾಟಿಸಿದರು 
ಮಂಡ್ಯ ನಗರದ ಗಾಂಧಿಭವನದಲ್ಲಿ ಜಿಲ್ಲಾ ಬಬ್ಬೂರುಕಮ್ಮೆ ಸೇವಾ ಬಳಗ ಶನಿವಾರ ಆಯೋಜಿಸಿದ್ದ ‘ಕನ್ನಡದ ಕಣ್ವ’ ಬಿ.ಎಂ.ಶ್ರೀಕಂಠಯ್ಯ ಅವರ 142ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು ಉದ್ಘಾಟಿಸಿದರು    

ಮಂಡ್ಯ: ‘ಇಂಗ್ಲಿಷ್‌ ಭಾಷೆಯ ಅನೇಕ ಸುಪ್ರಸಿದ್ಧ ಕೃತಿಗಳನ್ನು ಕನ್ನಡದ ಸೊಗಡಿಗೆ ತಕ್ಕಂತೆ, ಇಲ್ಲಿಯ ಸಂಸ್ಕೃತಿಗೆ ಹೊಂದುವಂತೆ ಕನ್ನಡಕ್ಕೆ ಅನುವಾದಿಸುವ ಭಾಷಾ ಪ್ರಾವೀಣ್ಯತೆ ಮತ್ತು ಚಾಕಚಕ್ಯತೆಯನ್ನು ಬಿ.ಎಂ.ಶ್ರೀ ಅವರಲ್ಲಿತ್ತು ಎಂದು ಸಾಹಿತಿ ಶುಭಶ್ರೀ ಪ್ರಸಾದ್ ಹೇಳಿದರು.

ನಗರದ ಗಾಂಧಿಭವನದಲ್ಲಿ ಜಿಲ್ಲಾ ಬಬ್ಬೂರುಕಮ್ಮೆ ಸೇವಾ ಬಳಗ ಶನಿವಾರ ಆಯೋಜಿಸಿದ್ದ ‘ಕನ್ನಡದ ಕಣ್ವ’ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅವರ 142ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿ.ಎಂ.ಶ್ರೀ.ರವರು ‘ಇಂಗ್ಲಿಷ್ ಗೀತಗಳು’ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ಇದು ಹಲವು ಇಂಗ್ಲಿಷ್‌ ಕವಿತೆಗಳ ಸೊಗಸಾದ ಕನ್ನಡ ಅನುವಾದ. ಸಂಗ್ರಹದ 63 ಕವಿತೆಗಳಲ್ಲಿ 3 ಮಾತ್ರ ಶ್ರೀಯವರ ಸ್ವಂತ ಕವಿತೆಗಳು. ನ್ಯೂಮನ್ ಕವಿ ಬರೆದ ‘ಲೀಡ್‌ ಕೈಂಡ್ಲಿ ಲೈಟ್‌’ ಎಂಬ ಕವಿತೆಯನ್ನು ಕನ್ನಡದಲ್ಲಿ ಅನುವಾದ ಮಾಡಿದ ‘ಕರುಣಾಳು ಬಾ ಬೆಳಕೆ’ ಎಂಬ ಕವನ ತುಂಬಾ ಜನಪ್ರಿಯವಾಯಿತು ಎಂದರು. 

ADVERTISEMENT

ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು ಮಾತನಾಡಿ, ‘ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯಲು ನಿರ್ಧರಿಸಿ, ತಮ್ಮ ಇಡೀ ಜೀವನವನ್ನು ಕನ್ನಡಕ್ಕಾಗಿಯೇ ಮುಡಿಪಾಗಿಟ್ಟವರು. 1928ರಲ್ಲಿ ಗುಲಬರ್ಗಾದಲ್ಲಿ (ಕಲಬುರ್ಗಿ) ನಡೆದ 14ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೈಸೂರಿನ ಮಹಾರಾಜರಿಂದ ‘ರಾಜ ಸೇವಾಸಕ್ತ’ ಎಂಬ ಬಿರುದನ್ನು ಪಡೆದಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಬ್ಬೂರುಕಮ್ಮೆ ಸೇವಾ ಬಳಗ ಅಧ್ಯಕ್ಷ ಎನ್.ರಮೇಶ್, ಪತ್ರಕರ್ತ ಕಬ್ಬನಹಳ್ಳಿ ಶಂಭು, ಬಳಗದ ಕಾರ್ಯದರ್ಶಿ ಶ್ರೀನಿವಾಸ್, ಶಿಕ್ಷಕಿ ಪದ್ಮಾ ಶ್ರೀನಿವಾಸ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.