ADVERTISEMENT

ಮಂಡ್ಯ: ಜಿಲ್ಲೆಯಲ್ಲಿ 2,341 ಎಕರೆ ಅರಣ್ಯ ಒತ್ತುವರಿ

ಮಂಡ್ಯ ತಾಲ್ಲೂಕಿನಲ್ಲೇ ಅತಿ ಹೆಚ್ಚು ಪ್ರಕರಣಗಳು: ಒತ್ತುವರಿ ತೆರವಿಗೆ ಪರಿಸರ ಪ್ರೇಮಿಗಳ ಆಗ್ರಹ

ಸಿದ್ದು ಆರ್.ಜಿ.ಹಳ್ಳಿ
Published 25 ಮಾರ್ಚ್ 2025, 4:02 IST
Last Updated 25 ಮಾರ್ಚ್ 2025, 4:02 IST
ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಸಮೀಪದ ಕಾವೇರಿ ವನ್ಯಜೀವಿ ಧಾಮದ ವಿಹಂಗಮ ನೋಟ 
ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಸಮೀಪದ ಕಾವೇರಿ ವನ್ಯಜೀವಿ ಧಾಮದ ವಿಹಂಗಮ ನೋಟ    

ಮಂಡ್ಯ: ಜಿಲ್ಲೆಯ 7 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 48,281 ಹೆಕ್ಟೇರ್‌ (1.21 ಲಕ್ಷ ಎಕರೆ) ಅರಣ್ಯ ಪ್ರದೇಶವಿದ್ದು, ಅದರಲ್ಲಿ ಬರೋಬ್ಬರಿ 2,341 ಎಕರೆ ಒತ್ತುವರಿಯಾಗಿದೆ. ಒತ್ತುವರಿ ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ ಎಂಬುದು ಪರಿಸರ ಪ್ರೇಮಿಗಳ ಗಂಭೀರ ಆರೋಪ. 

ಮಂಡ್ಯ ಪ್ರಾದೇಶಿಕ ಅರಣ್ಯ ವಿಭಾಗದಲ್ಲಿ ಮಂಡ್ಯ ಮತ್ತು ನಾಗಮಂಗಲ ಎಂಬ ಎರಡು ಉಪವಿಭಾಗಗಳಿವೆ. ಮಂಡ್ಯ ಉಪವಿಭಾಗದಲ್ಲಿ ಮಂಡ್ಯ, ಮಳವಳ್ಳಿ, ಮದ್ದೂರು, ಶ್ರೀರಂಗಪಟ್ಟಣ ಸೇರಿದಂತೆ 4 ವಲಯಗಳಿವೆ. ನಾಗಮಂಗಲ ಉಪವಿಭಾಗದಲ್ಲಿ ನಾಗಮಂಗಲ, ಕೆ.ಆರ್‌.ಪೇಟೆ, ಪಾಂಡವಪುರ ಸೇರಿದಂತೆ 3 ವಲಯಗಳಿವೆ. ಇದು ಅತಿ ಕಡಿಮೆ ಅರಣ್ಯ ಹೊಂದಿರುವ ಜಿಲ್ಲೆಗಳಲ್ಲಿ ಒಂದಾಗಿದೆ.

727 ಒತ್ತುವರಿ ಪ್ರಕರಣ: ಮಂಡ್ಯ ತಾಲ್ಲೂಕಿನಲ್ಲಿ 5859 ಹೆಕ್ಟೇರ್‌, ಮದ್ದೂರು–1001, ಮಳವಳ್ಳಿ–2730, ಪಾಂಡವಪುರ–5803, ಶ್ರೀರಂಗಪಟ್ಟಣ–2815, ಕೆ.ಆರ್‌.ಪೇಟೆ– 8342 ಮತ್ತು ನಾಗಮಂಗಲ ತಾಲ್ಲೂಕಿನಲ್ಲಿ 22,140 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ಜಿಲ್ಲೆಯಲ್ಲಿ ಒಟ್ಟು 727 ಒತ್ತುವರಿ ಪ್ರಕರಣಗಳು ದಾಖಲಾಗಿವೆ. 

ADVERTISEMENT

ಮಂಡ್ಯ ತಾಲ್ಲೂಕಿನಲ್ಲಿ 396 ಪ್ರಕರಣಗಳು, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 144 ಪ್ರಕರಣಗಳು ದಾಖಲಾಗಿದ್ದು, ಈ ಎರಡು ತಾಲ್ಲೂಕುಗಳಲ್ಲಿ ಒತ್ತುವರಿ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ. ಪಾಂಡವಪುರ ತಾಲ್ಲೂಕಿನಲ್ಲಿ 1 ಪ್ರಕರಣ ಮತ್ತು ಮಳವಳ್ಳಿ ತಾಲ್ಲೂಕಿನಲ್ಲಿ 2 ಪ್ರಕರಣಗಳು ದಾಖಲಾಗಿದ್ದು, ಅತಿ ಕಡಿಮೆ ಪ್ರಕರಣಗಳು ಎನಿಸಿವೆ. 

727 ಪ‍್ರಕರಣಗಳ ಪೈಕಿ, 10ರಿಂದ 30 ಎಕರೆಯಷ್ಟು ಒತ್ತುವರಿ ವಿಭಾಗದಲ್ಲಿ 10 ಪ್ರಕರಣಗಳು, 3ರಿಂದ 10 ಎಕರೆಯಷ್ಟು ಒತ್ತುವರಿ ವಿಭಾಗದಲ್ಲಿ 339 ಪ್ರಕರಣಗಳು, 3 ಎಕರೆಗಿಂತ ಕಡಿಮೆ ಒತ್ತುವರಿ ವಿಭಾಗದಲ್ಲಿ 331 ಪ್ರಕರಣಗಳು ದಾಖಲಾಗಿವೆ.

ಸಿಬ್ಬಂದಿ ಕೊರತೆ: ಮಂಡ್ಯ ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ಒಟ್ಟು 160 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 100 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ವಲಯ ಅರಣ್ಯಾಧಿಕಾರಿ–2 ಹುದ್ದೆ, ಎಫ್‌ಡಿಎ–2, ಎಸ್‌ಡಿಎ–7, ಅರಣ್ಯ ವೀಕ್ಷಕರು–22, ದಲಾಯತ್‌–18 ಸೇರಿದಂತೆ ಒಟ್ಟು 60 ಹುದ್ದೆಗಳು ಖಾಲಿ ಉಳಿದಿವೆ. ಸಿಬ್ಬಂದಿ ಕೊರತೆಯಿಂದ ಇಲಾಖೆಯ ಕೆಲಸ ಕಾರ್ಯಗಳನ್ನು ನಿಗದಿತ ವೇಳೆಯಲ್ಲಿ ಮತ್ತು ಪರಿಣಾಮಕಾರಿಯಾಗಿ ಮಾಡಲು ತೊಡಕಾಗಿದೆ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು. 

727 ಒತ್ತುವರಿ ಪ್ರಕರಣಗಳಲ್ಲಿ 47 ಪ್ರಕರಣಗಳಿಗೆ ಸಂಬಂಧಿಸಿದಂತೆ 185 ಎಕರೆ ಒತ್ತುವರಿಯನ್ನು ತೆರವುಗೊಳಿಸಿದ್ದು ಪ್ರಕ್ರಿಯೆ ಜಾರಿಯಲ್ಲಿದೆ. ಅರಣ್ಯ ಪ್ರದೇಶ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ
-ರಾಜು, ಡಿಸಿಎಫ್‌ ಮಂಡ್ಯ
ಕಾಡು ಉಳಿದರೆ ನಾಡು ಉಳಿದಂತೆ. ಮನುಷ್ಯರ ಭೂದಾಹಕ್ಕೆ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಅರಣ್ಯ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು. ಕೂಡಲೇ ಒತ್ತುವರಿ ತೆರವುಗೊಳಿಸಬೇಕು
-ಸುಮನ್ಸ್ ಕೌಲಗಿ, ಪರಿಸರ ಪ್ರೇಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.