ADVERTISEMENT

ಶ್ರೀರಂಗಪಟ್ಟಣ:₹7.11ಲಕ್ಷ ವಿದ್ಯುತ್‌ ಬಿಲ್‌ ಬಾಕಿ;ಮಿನಿ ವಿಧಾನಸೌಧದ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2022, 5:34 IST
Last Updated 28 ಡಿಸೆಂಬರ್ 2022, 5:34 IST
ಶ್ರೀರಂಗಪಟ್ಟಣ ಪ್ರವಾಸಿ ಮಂದಿರದ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲು ಸೆಸ್ಕ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ಧಾವಿಸಿದ್ದರು
ಶ್ರೀರಂಗಪಟ್ಟಣ ಪ್ರವಾಸಿ ಮಂದಿರದ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲು ಸೆಸ್ಕ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ಧಾವಿಸಿದ್ದರು   

ಶ್ರೀರಂಗಪಟ್ಟಣ: ₹7.11 ಲಕ್ಷ ಶುಲ್ಕ ಬಾಕಿ ಉಳಿಸಿಕೊಂಡಿರುವ ಪಟ್ಟಣದ ಮಿನಿ ವಿಧಾನಸೌಧದ ವಿದ್ಯುತ್‌ ಸಂಪರ್ಕ ವನ್ನು ಸೆಸ್ಕ್‌ ಸಿಬ್ಬಂದಿ ಮಂಗಳವಾರ ಕಡಿತಗೊಳಿಸಿದರು.

ತಹಶೀಲ್ದಾರ್‌ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಮಹಿಳಾ–ಮಕ್ಕಳ ಕಲ್ಯಾಣ ಇಲಾಖೆ, ಸರ್ವೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆಹಾರ ಇಲಾಖೆ, ಉಪ ಖಜಾನೆಗಳ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ‘ಯುಪಿಎಸ್‌ ಇರುವೆಡೆ ಕೆಲಸಗಳು ನಡೆದವು. ಬುಧವಾರ ಸಂಪರ್ಕ ಕಲ್ಪಿಸ ದಿದ್ದರೆ ಎಲ್ಲ ಕೆಲಸಗಳು ಸ್ಥಗಿತಗೊಳ್ಳಲಿವೆ’ ಎಂದು ಸಿಬ್ಬಂದಿ ತಿಳಿಸಿದರು.

‘ಎಲ್ಲ ಕಚೇರಿಗಳಿಗೂ ಸೇರಿ ಒಂದೇ ಮೀಟರ್‌ ಅಳವಡಿಸಿದ್ದು, ಕಂದಾಯ ಇಲಾಖೆಯೇಬಿಲ್‌ ಪಾವತಿಸಬೇಕಾಗಿದೆ. ಜಿಲ್ಲಾಧಿಕಾರಿ ಗಮನ ಸೆಳೆದಿದ್ದೇನೆ’ ಎಂದು ತಹಶೀಲ್ದಾರ್‌ ಶ್ವೇತಾ ರವೀಂದ್ರ ಪ್ರತಿಕ್ರಿಯಿಸಿದರು. ‘ಸದ್ಯ ₹50 ಸಾವಿರ ದವರೆಗೆ ಪಾವತಿಸಬಹುದು. ಉಳಿದದ್ದನ್ನು ಎಲ್ಲಿಂದ ತರಲಿ’ ಎಂದು ಪ್ರಶ್ನಿಸಿದರು.

ADVERTISEMENT

‘ಸರ್ಕಾರಿ ಆಸ್ಪತ್ರೆ, ನ್ಯಾಯಾಲಯ ಮತ್ತು ಪೊಲೀಸ್‌ ಠಾಣೆ ಹೊರತು ಪಡಿಸಿ, ₹ 500ಕ್ಕಿಂತ ಹೆಚ್ಚು ಶುಲ್ಕ ಬಾಕಿ ಉಳಿಸಿಕೊಂಡಿರುವ ಎಲ್ಲ ಸಂಪರ್ಕಗಳನ್ನು ಕಡಿತಗೊಳಿಸಬೇಕೆಂಬ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಸೆಸ್ಕ್‌ನ ಆಂತರಿಕ ಲೆಕ್ಕ ಪರಿಶೋಧಕ ಮಹದೇವಪ್ಪ ಹೇಳಿದರು.

‘ಪಟ್ಟಣದ ಪ್ರವಾಸಿ ಮಂದಿರದ ವಿದ್ಯುತ್‌ ಶುಲ್ಕ ₹17,290 ಬಾಕಿ ಇದ್ದು, ಮಂಗಳವಾರ ಸಭೆ ನಡೆಯುತ್ತಿತ್ತು. ನ್ಯಾಯಾಧೀಶರೂ ಉಳಿದುಕೊಂಡಿದ್ದ ರಿಂದ ಸಂಪರ್ಕ ಕಡಿತಗೊಳಿಸಿಲ್ಲ. ಬುಧವಾರ ಶುಲ್ಕ ಪಾವತಿಸದಿದ್ದರೆ ಕಡಿತಗೊಳಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.