
ಶ್ರೀರಂಗಪಟ್ಟಣ: ‘ಪಟ್ಟಣದ ಮುಸ್ಲಿಂ ವಸತಿ ಶಾಲೆ ಮತ್ತು ಕಾಲೇಜು ಆವರಣದಲ್ಲಿ ಎಪಿಜೆ ಅಬ್ದುಲ್ ಕಲಾಂ ಸಂಶೋಧನಾ ಕೇಂದ್ರ ತೆರೆಯಲು ಉದ್ದೇಶಿಸಲಾಗಿದ್ದು, ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ’ ಎಂದು ಸೆಸ್ಕ್ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ಪಟ್ಟಣದ ಮುಸ್ಲಿಂ ವಸತಿ ಶಾಲೆ ಮತ್ತು ಕಾಲೇಜಿಗೆ ಶನಿವಾರ ಭೇಟಿ ನೀಡಿದ್ದ ಅವರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಊಟ ಮತ್ತು ವಸತಿ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.
‘ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ತಮ್ಮ ವಿಂಗ್ಸ್ ಆಫ್ ಫೈರ್ ಕೃತಿಯಲ್ಲಿ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಕಾಲದ ರಾಕೆಟ್ ತಂತ್ರಜ್ಞಾನದ ಬಗ್ಗೆ ಉಲ್ಲೇಖಿಸಿದ್ದಾರೆ. ಇದು ಈ ಊರಿಗೆ ಹೆಮ್ಮೆಯ ವಿಷಯ. ಪ್ರಸಿದ್ಧ ವಿಜ್ಞಾನಿಯೂ ಆದ ಅವರ ಹೆಸರಿನಲ್ಲಿ ಇಲ್ಲಿ ಸಂಶೋಧನಾ ಕೇಂದ್ರ ತೆರೆಯಲಾಗುವುದು. ಕೇಂದ್ರದ ಮಾಜಿ ಶಿಕ್ಷಣ ಸಚಿವ ಮೌಲಾನ ಅಬುಲ್ ಕಲಾಂ ಆಜಾದ್ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪೂರ್ವ ಹಂತದ ತರಗತಿಗಳನ್ನು ಆರಂಭಿಸಲಾಗುವುದು. ಕಳೆದ ವರ್ಷ ಆರಂಭವಾಗಿರುವ ಮುಸ್ಲಿಂ ವಸತಿ ಕಾಲೇಜಿನಲ್ಲಿ ಮುಸ್ಲಿಂ ಮತ್ತು ಇತರ ವರ್ಗದ ವಿದ್ಯಾರ್ಥಿಗಳಿಗೆ ಶೆ 75:25 ಅನುಪಾತದಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.
‘ಪಟ್ಟಣದಲ್ಲಿ 1994ರಲ್ಲಿ ಆರಂಭವಾದ ಮುಸ್ಲಿಂ ವಸತಿ ಶಾಲೆಗೆ ಸ್ವಂತ ಕಟ್ಟಡ ಮತ್ತು ಇತರ ಮೂಲ ಸೌಕರ್ಯ ಕಲ್ಪಿಸಲು ವಕ್ಫ್ ಮಂಡಳಿಯಿಂದ ಜಾಗವನ್ನು 2017ರಲ್ಲಿ 30 ವರ್ಷಗಳಿಗೆ ಲೀಸ್ ಪಡೆಯಲಾಗಿದೆ. ಶಾಲೆಯ ವರೆಗೆ ರಸ್ತೆ ಮತ್ತು ಕಾಂಪೌಂಡ್ ನಿರ್ಮಾಣವಾಗಿದೆ. ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಇದನ್ನು ರಾಜ್ಯದಲ್ಲೇ ಅತ್ಯುತ್ತಮ ಶಾಲೆಯನ್ನಾಗಿ ರೂಪಿಸುವುದು ನನ್ನ ಗುರಿ’ ಎಂದು ತಿಳಿಸಿದರು.
‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಉತ್ತೀರ್ಣರಾಗುವಂತೆ ತರಬೇತು ಮಾಡಬೇಕು. ಇಬ್ಬರು ವಿದ್ಯಾರ್ಥಿಗಳನ್ನು ಒಬ್ಬ ಶಿಕ್ಷಕರು ದತ್ತು ಪಡೆದು ಪರೀಕ್ಷೆಗೆ ಸಜ್ಜುಗೊಳಿಸಬೇಕು. ಸಂಸ್ಥೆಯಲ್ಲಿ ಯಾವುದೇ ಸಮಸ್ಯೆ ಕಂಡು ಬಂದರೆ ತಕ್ಷಣ ನನ್ನ ಗಮನಕ್ಕೆ ತರಬೇಕು’ ಎಂದು ಪ್ರಾಂಶುಪಾಲ ಎನ್.ಕೆ. ಬಾಲಕೃಷ್ಣ ಅವರಿಗೆ ಸೂಚಿಸಿದರು. ವಾರ್ಡನ್ ಸಮೀವುಲ್ಲಾ, ಹಿರಿಯ ಶಿಕ್ಷಕರಾದ ಮೊಹಿನುದ್ದೀನ್, ಗೌರಿಶಂಕರಮೂರ್ತಿ, ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್. ಸಂದೇಶ್, ಮುಖಂಡರಾದ ಮುಜೀಬ್, ಇಮ್ರಾನ್, ಮಹಮದ್ ಅನ್ಸರ್, ಇರ್ಫಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.