ನಾಗಮಂಗಲ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಆದಿಚುಂಚನಗಿರಿ ಸುಕ್ಷೇತ್ರದಲ್ಲಿ ಗಂಗಾಧರೇಶ್ವರ ಸ್ವಾಮಿಯ ‘ಮಹಾರಥೋತ್ಸವ’ ಹಾಗೂ ನಿರ್ಮಲಾನಂದನಾಥ ಸ್ವಾಮಿಜೀಯವರ ‘ಅಡ್ಡಪಲ್ಲಕ್ಕಿ ಉತ್ಸವ’ವು ಮಂಗಳವಾರ ಮುಂಜಾನೆ ವಿಜೃಂಭಣೆಯಿಂದ ನಡೆಯಿತು.
ಸರ್ವಾಲಂಕೃತವಾದ ರಥದಲ್ಲಿ ಗಂಗಾಧರೇಶ್ವರ ಸ್ವಾಮಿಯ ಮೂರ್ತಿ ಸ್ಥಾಪಿತವಾಗುತ್ತಿದ್ದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು
ಕಾಲಭೈರವೇಶ್ವರ ಸ್ವಾಮಿ, ಬಾಲಗಂಗಾಧರನಾಥ ಸ್ವಾಮಿ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಕುರಿತು ಜಯಘೋಷ ಮೊಳಗಿಸಿದರು.
ಭಕ್ತರು ರಥವನ್ನು ಎಳೆದು ಭಕ್ತಿಭಾವ ಮೆರೆದರು. ಕೆಲವರು ತಮ್ಮ ಇಷ್ಟಾರ್ಥ ಸಿದ್ಧಿಸಲಿ ಎಂಬ ಇಂಗಿತದೊಂದಿಗೆ ಹಣ್ಣು ಜವನವನ್ನು ರಥಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿ ಪ್ರದರ್ಶಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಸೋಮವಾರ ರಾತ್ರಿ ಕಾಲಭೈರವೇಶ್ವರಸ್ವಾಮಿಯ ತಿರುಗಣಿ ಉತ್ಸವ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿಯವರ ತೆಪ್ಪೋತ್ಸವ ವೀಕ್ಷಿಸಿದ್ದರು. ಬಳಿಕ ಶ್ರೀಕ್ಷೇತ್ರದಲ್ಲಿ ಹಲವು ಕಡೆ ಆಯೋಜಿಸಿದ್ದ ಪೌರಾಣಿಕ ನಾಟಕ ಪ್ರದರ್ಶನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಡಗರದಿಂದ ಪಾಲ್ಗೊಂಡರು.
ಹಲವು ಭಕ್ತರು ಮುಡಿ ಸಮರ್ಪಣೆಯ ಧಾರ್ಮಿಕ ವಿಧಿ ವಿಧಾನ ಪೂರೈಸಿ ಕ್ಷೇತ್ರ ಪಾಲಕ ಕಾಲಭೈರವೇಶ್ವರಸ್ವಾಮಿ ದರ್ಶನ ಪಡೆದು ನಂತರ ಬ್ರಾಹ್ಮೀ ಮೂಹೂರ್ತದ ಸಮಯಕ್ಕೆ ಸರಿಯಾಗಿ ರಥ ಬೀದಿಯಲ್ಲಿ ಜಮಾವಣೆಗೊಂಡರು.
ಉತ್ಸವಮೂರ್ತಿಗಳ ಗಿರಿಪ್ರದಕ್ಷಿಣೆ:
ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 250ಕ್ಕೂ ಹೆಚ್ಚು ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ‘ಗಿರಿ ಪ್ರದಕ್ಷಿಣೆ’ ವೈಭವದಿಂದ ನಡೆಯಿತು.
ಗ್ರಾಮ ದೇವತೆಗಳ ಉತ್ಸವ ಮೂರ್ತಿಗಳಿಗೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಕಾಲಭೈರವೇಶ್ವರ ಸ್ವಾಮಿ ದೇಗುಲದಿಂದ ಪ್ರಾರಂಭಗೊಂಡು ಚುಂಚನಗಿರಿಯ ಸುತ್ತಲೂ ಇರುವ ಕಣಿವೆ ಆಂಜನೇಯಸ್ವಾಮಿ, ಕೂಗುಬಂಡೆ ಮಾರ್ಗ ಸೇರಿದಂತೆ ನಾಗರಕಲ್ಲು (ನಾಗದೇವತೆ) ಬಳಸಿಕೊಂಡು ರಥಬೀದಿ ಮೂಲಕ ಸನ್ನಿಧಿಯನ್ನು ತಲುಪಿತು. ನಂತರ ಸೋಮೇಶ್ವರ ಉತ್ಸವ ವೈಭವದಿಂದ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.