ADVERTISEMENT

ಆದಿಚುಂಚನಗಿರಿ ಜಾತ್ರೆ ಇಂದಿನಿಂದ: ಮಾರ್ಚ್‌ 2ರಂದು ಸರ್ವಧರ್ಮ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:05 IST
Last Updated 24 ಫೆಬ್ರುವರಿ 2026, 7:05 IST
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದ ನೋಟ
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದ ನೋಟ   

ನಾಗಮಂಗಲ (ಮಂಡ ಜಿಲ್ಲೆ): ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಫೆ.24ರಿಂದ ಮಾರ್ಚ್‌ 4ರವರೆಗೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.

24ರಂದು ಮುಂಜಾನೆ ಕ್ಷೇತ್ರದ ದೇವರುಗಳಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆಗಳು ನಡೆಯಲಿವೆ. ಮಠದ ನಿರ್ಮಲಾನಂದನಾಥ ಸ್ವಾಮೀಜಿ ನಾಂದಿ ಪೂಜೆಯೊಂದಿಗೆ ಧರ್ಮಧ್ವಜ ಸ್ಥಾಪನೆ ಮಾಡುವ ಮೂಲಕ ಚಾಲನೆ ನೀಡುವರು. ಬೆಳಿಗ್ಗೆ 10ಕ್ಕೆ ಸಭಾ ಕಾರ್ಯಕ್ರಮ ಜರುಗಲಿದೆ.

25ರಂದು ಸಂಜೆ 7ಕ್ಕೆ ಚಂದ್ರಮೌಳೇಶ್ವರಸ್ವಾಮಿ ಉತ್ಸವ ನಡೆಯಲಿದೆ.

ADVERTISEMENT

26ರಂದು ರಾತ್ರಿ 7ಕ್ಕೆ ಮಲ್ಲೇಶ್ವರಸ್ವಾಮಿ ಉತ್ಸವ. 27ರಂದು ಬೆಳಿಗ್ಗೆ 9.30ಕ್ಕೆ ಬಿಜಿಎಸ್ ಸಭಾ ಭವನದಲ್ಲಿ ಉಚಿತ ಸಾಮೂಹಿಕ ವಿವಾಹ, ಹಿರಿಯ ದಂಪತಿಗಳಿಗೆ ಸನ್ಮಾನ ಸಮಾರಂಭ ಹಾಗೂ ಸಂಜೆ 7ಕ್ಕೆ ಸಿದ್ದೇಶ್ವರಸ್ವಾಮಿ ಉತ್ಸವ ನಡೆಯಲಿದೆ.

28ರಂದು ಬೆಳಿಗ್ಗೆ 6.30ಕ್ಕೆ ಕ್ಷೇತ್ರದ ದೇವತೆಗಳಿಗೆ ವಿಶೇಷ ಪೂಜೆ, ಸಂಜೆ 7ಕ್ಕೆ ಕಾಲಭೈರವೇಶ್ವರಸ್ವಾಮಿ ಹೂವಿನ ಪಲ್ಲಕ್ಕಿ ಉತ್ಸವ ಹಾಗೂ ಸ್ವಾಮೀಜಿ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಮಾ.1ರಂದು ಬೆಳಿಗ್ಗೆ 6.30ಕ್ಕೆ ಕಾಲಭೈರವೇಶ್ವರಸ್ವಾಮಿಗೆ ಸುವರ್ಣ ಕವಚಾಲಂಕಾರ ಹಾಗೂ ಗಂಗಾಧರೇಶ್ವರ ಸ್ವಾಮಿಗೆ ರಜತ ನಾಗಾಭರಣ ಅಲಂಕಾರ ಮಾಡಲಾಗುವುದು. ರಾತ್ರಿ 7.30ಕ್ಕೆ ನಿರ್ಮಲಾನಂದನಾಥ ಸ್ವಾಮೀಜಿಯವರಿಂದ ಜ್ವಾಲಾಪೀಠಾರೋಹಣ, ಸಿದ್ಧಸಿಂಹಾಸನ ಪೂಜೆ ಹಾಗೂ ರಾತ್ರಿ 8ಕ್ಕೆ ಚಂದ್ರ ಮಂಡಲೋತ್ಸವ ಪೂಜೆ ಜರುಗಲಿದೆ.

ಮಾ. 2ರಂದು ಸಂಜೆ 6.30ಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಬಳಿಕ ಕಾಲಭೈರವೇಶ್ವರ ಸ್ವಾಮಿಯ ತಿರುಗಣಿ ಉತ್ಸವ, ಪುಷ್ಕರಣಿಯಲ್ಲಿ ತೆಪ್ಪೋತ್ಸವ ಜರುಗಲಿದೆ. ಪೌರಾಣಿಕ ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇಡೀ ರಾತ್ರಿ ನಡೆಯಲಿವೆ.

ಮಾ. 3ರಂದು ಮುಂಜಾನೆ 4ಕ್ಕೆ ಗಂಗಾಧರೇಶ್ವರ ಸ್ವಾಮಿ ಮಹಾ ರಥೋತ್ಸವ ಹಾಗೂ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದೆ. ಸಂಜೆ 6ಕ್ಕೆ ಗ್ರಾಮದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ಗಿರಿ ಪ್ರದಕ್ಷಿಣಿ ನಡೆಯಲಿದೆ. ಬಳಿಕ ಸೋಮೇಶ್ವರ ಸ್ವಾಮಿ ಉತ್ಸವ ಜರುಗಲಿದೆ.

ಮಾ.4ರಂದು ಬೆಳಿಗ್ಗೆ 9ಕ್ಕೆ ಧರ್ಮಧ್ವಜಾವರೋಹಣ, 9.30ಕ್ಕೆ ಬಿಂದು ಸರೋವರದಲ್ಲಿ ಅವಭೃತ ಸ್ನಾನ, ಮಹಾಭಿಷೇಕ ಮತ್ತು ಸಭಾ ಕಾರ್ಯಕ್ರಮದೊಂದಿಗೆ 9 ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದು ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಸನ್ನನಾಥ ಸ್ವಾಮೀಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.