ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರ 12ನೇ ವರ್ಷದ ವಾರ್ಷಿಕ ಪಟ್ಟಾಭಿಷೇಕದ ಅಂಗವಾಗಿ ಫೆ.19 ಮತ್ತು 20ರಂದು ‘ವಿಜ್ಞಾತಂ ಉತ್ಸವ’ ಆಯೋಜಿಸಲಾಗಿದೆ ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಸ್. ರಾಮೇಗೌಡ ತಿಳಿಸಿದರು.
ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಫೆ.19ರಂದು ಬೆಳಿಗ್ಗೆ 10ಕ್ಕೆ ಕ್ಷೇತ್ರದ ಬಿ.ಜಿ.ಎಸ್. ಸಭಾ ಭವನದಲ್ಲಿ ‘ವಿಜ್ಞಾತಂ ಉತ್ಸವ’ದ ವಸ್ತು ಪ್ರದರ್ಶನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತುಮಕೂರಿನ ಸಿದ್ದಗಂಗಾ ಕ್ಷೇತ್ರದ ಸಿದ್ದಲಿಂಗ ಸ್ವಾಮೀಜಿ ಅವರು ಸಾನಿಧ್ಯ ವಹಿಸಲಿದ್ದು, ಗೃಹ ಸಚಿವ ಜಿ.ಪರಮೇಶ್ವರ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಕೃಷಿ ಸಚಿವ ಎನ್.ಚಲುರಾಯಸ್ವಾಮಿ ಅವರು ‘ವಿಜ್ಞಾತಂ ಸಂಚಯ-3’ ಸಂಚಿಕೆ ಬಿಡುಗಡೆ ಮಾಡುವರು. ವಸ್ತು ಪ್ರದರ್ಶನವನ್ನು ಭಾರತೀಯ ವಿಜ್ಞಾನ ಸಂಸ್ಥೆ ಸಂಸ್ಥೆಯ ವಿಜ್ಞಾನಿ ಗೌತಮ್ ರಾಧಾಕೃಷ್ಣ ದೇಸಿರಾಜು ಉದ್ಘಾಟಿಸಲಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಮುಖ್ಯ ಅತಿಥಿಯಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭಾಗವಹಿಸಲಿದ್ದು, ಶಾಸಕ ರವಿ ಗಣಿಗ ಮತ್ತು ಜಿಲ್ಲಾಧಿಕಾರಿ ಕುಮಾರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಫೆ. 19ರಂದು ಮಧ್ಯಾಹ್ನ ವಿಶೇಷ ಉಪನ್ಯಾಸಗಳು ಜರುಗಲಿದ್ದು, ಐ.ವೇಣುಗೋಪಾಲ್, ಎನ್.ಬಿ. ರಾಮಚಂದ್ರ, ವಿ.ಬಿ.ಆರತಿ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ’ ಎಂದರು.
‘ಫೆ.20ರಂದು ಬೆಳಿಗ್ಗೆ 10.30ಕ್ಕೆ ಕ್ಷೇತ್ರದ ಬಿ.ಜಿ.ಎಸ್ ಸಭಾ ಭವನದಲ್ಲಿ ಜರುಗುವ ನಿರ್ಮಲಾನಂದನಾಥ ಸ್ವಾಮೀಜಿ ಅವರ 12ನೇ ವರ್ಷದ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಮತ್ತು ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಅವರಿಗೆ ಪ್ರಸಕ್ತ ಸಾಲಿನ ‘ವಿಜ್ಞಾತಂ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು’ ಎಂದು ಮಾಹಿತಿ ನೀಡಿದರು.
‘ರಾಜ್ ಕೋಟ್- ವಡೋದರ ಆರ್ಷ ವಿದ್ಯಾ ಮಂದಿರದ ಅಧ್ಯಕ್ಷ ಸ್ವಾಮಿ ಪರಮಾತ್ಮನಂದ ಸರಸ್ವತಿ ಜೀ ಮತ್ತು ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಜೀ ಮಹಾರಾಜ್ ಭಾಗವಹಿಸಲಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿರೋಧ ಪಕ್ಷದ ನಾಯಕ ಆರ್.ಅಶೋಕ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಲ್ಲದೆ ಚಿಕ್ಕಬಳ್ಳಾಪುರ ಸಂಸದ ಕೆ.ಸುಧಾಕರ್ ಮತ್ತು ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಅಲ್ಲದೇ ಎರಡು ದಿನಗಳೂ ಸುಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜು ಆಡಳಿತ ಮಂಡಳಿ ಸದಸ್ಯ ಎಚ್.ಟಿ.ಕೃಷ್ಣೇಗೌಡ, ಸಿಇಒ ಕಚೇರಿ ರಿಜಿಸ್ಟ್ರಾರ್ ಎಸ್.ಚಂದ್ರೇಗೌಡ, ಪ್ರಾಂಶುಪಾಲ ಶ್ರೇಯಸ್ ಕೃಷ್ಣನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.