
ಮಂಡ್ಯ: ‘ಶಿಕ್ಷಣ ಕ್ರಾಂತಿ ಮೂಡಿಸಿದ ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರಿಗೂ ಓದುವ ಹಕ್ಕು ದಕ್ಕಿಸುವಲ್ಲಿ ಯಶಸ್ವಿಯಾದ ಅವರ ಹೋರಾಟವು ಇಂದಿಗೂ ಪ್ರಸ್ತುತ’ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದರು.
ನಗರದ ಹರ್ಡೀಕರ್ ಭವನದಲ್ಲಿ ರಾಷ್ಟ್ರೀಯ ಭೀಮ ಪಡೆ ವತಿಯಿಂದ ಶನಿವಾರ ನಡೆದ ಪ್ರಥಮ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಬಾಯಿ ಫುಲೆ ಅವರ ಜಯಂತ್ಯುತ್ಸವದಲ್ಲಿ ‘ಅಕ್ಷರದವ್ವ‘ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1901ರಲ್ಲಿ ಸಾಕ್ಷರತೆ ಪ್ರಮಾಣ ಶೇ 6ರಷ್ಟಿತ್ತು, ಮಹಿಳಾ ಸಾಕ್ಷರತಾ ಪ್ರಮಾಣ ಶೂನ್ಯವಿತ್ತು. 1950ರಲ್ಲಿ ಶೇ 6ರಿಂದ 16ರಷ್ಟು ಜಾಸ್ತಿಯಾಯಿತು. ಇದಕ್ಕೆ ಕಾರಣರಾದವರು ಸಾವಿತ್ರಿಬಾಯಿ ಫುಲೆ. ಇಂದು ಶೇ 76ರಷ್ಟು ಸಾಕ್ಷರತಾ ಹೆಚ್ಚಾಗಿದೆ ಎಂದರು.
ಭಾರತ ದೇಶದಲ್ಲಿ ಜ್ಯೋತಿ ಬಾಫುಲೆ, ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣಕ್ಕೆ ನೀಡಿದ ಮಹತ್ತರ ಕೊಡುಗೆ ಹಾಗೂ ತ್ಯಾಗವನ್ನು ಎಂದಿಗೂ ಮರೆಯಬಾರದು. ‘ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ’ ಎಂಬ ಮಾತನ್ನು ಬಿ.ಆರ್. ಅಂಬೇಡ್ಕರ್ ಹೇಳಿದ್ದಾರೆ. ಆ ಮಾತುಗಳು ಸತ್ಯ ಎಂದರು.
ಭೀಮಪಡೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಎ. ಆತ್ಮಾನಂದ ಮಾತನಾಡಿ, ಮನು ಸಂವಿಧಾನದ ಪ್ರಕಾರ ಮಹಿಳೆ ವಿದ್ಯೆ ಕಲಿಯಲು ಅರ್ಹಳಲ್ಲ. ಮಹಿಳೆಯರ ಸ್ವಾತಂತ್ರ‍್ಯವನ್ನು ಕಿತ್ತುಕೊಳ್ಳುವ ಕೆಲಸವನ್ನು ಮಾಡಲಾಗಿತ್ತು. ಶಿಕ್ಷಣದ ಮುಖಾಂತರ ಮಾತ್ರ ಸಾಮಾಜಿಕ ಸಮಾನತೆ ತರಲು ಸಾಧ್ಯ ಎಂಬುದನ್ನು ಸಾವಿತ್ರಿಬಾಯಿ ಫುಲೆ ಹೇಳಿದ್ದಾರೆ ಎಂದರು.
ಹಾಲಿ ಮತ್ತು ನಿವೃತ್ತ ಶಿಕ್ಷಕರು ಸೇರಿದಂತೆ ಒಟ್ಟು 55 ಮಂದಿಗೆ ‘ಅಕ್ಷರದವ್ವ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮನ್‌ಮುಲ್ ನಿರ್ದೇಶಕ ಬಿ.ಆರ್. ರಾಮಚಂದ್ರ, ಭೀಮಪಡೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಆರ್. ನಿತ್ಯಾನಂದ್, ಜಿಲ್ಲಾ ಘಟಕ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ವೈರಮುಡಿ, ಕಾರ್ಯದರ್ಶಿ ಶಶಿಕುಮಾರ್, ಮುಖಂಡರಾದ ಡಾ.ಸದಾನಂದ, ಕೆಂಪಬೋರಯ್ಯ, ವಸಂತಕುಮಾರ್, ಮಂಗಳಾ ಕುಮಾರಿ, ಸರೋಜನಿ ಭಾಗವಹಿಸಿದ್ದದರು.
ಪ್ರಾಧ್ಯಾಪಕಿ ಪುಷ್ಪಾ ಮಾತನಾಡಿ ಕಂದಾಚಾರದಿಂದ ಜನರು ಬಳಲುತ್ತಿದ್ದಾರೆ. ಅದನ್ನು ಹೋಗಲಾಡಿಸಲು ಹೆಣ್ಣು ಮಕ್ಕಳು ಅಕ್ಷರಸ್ಥರಾಗಬೇಕೆಂದು ಹೇಳಿ ಅದರಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಸಾವಿತ್ರಿಬಾಯಿ ಫುಲೆ ಅವರ ಮನೆಯಲ್ಲಿ ಅಷ್ಟೊಂದು ಬಡತನವಿದ್ದರೂ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗುತ್ತಾರೆ. ಆನಂತರ ಶಿಕ್ಷಕಿಯಾಗಿ ಮೂರ್ನಾಲ್ಕು ದಶಕಗಳ ಕಾಲ ಕರ್ತವ್ಯ ನಿರ್ವಹಿಸುತ್ತಾರೆ. 14 ಶಾಲೆಗಳನ್ನು ತೆರೆಯುತ್ತಾರೆ. ಕೋಳಿ ಮೊಟ್ಟೆ ಮತ್ತು ಸಗಣಿ ಎಸೆತ ಸೇರಿ ಎಲ್ಲ ಅವಮಾನ ಸಹಿಸಿಕೊಂಡು ನೊಂದ ದಲಿತ ಹಾಗೂ ಶಾಲೆ ವಂಚಿತ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗುತ್ತಾರೆ ಎಂದು ವಿವರಿಸಿದರು.