
ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ಹೋಬಳಿ ಪುರ ಗ್ರಾಮದ ಸ.ನಂ. 33ರಲ್ಲಿದ್ದ ಸಾರ್ವಜನಿಕ ಕಟ್ಟೆಯನ್ನು ಖಾಸಗಿ ಸಂಸ್ಥೆಯು ಅತಿಕ್ರಮಿಸಿದ್ದು, ಅದನ್ನು ತೆರವು ಮಾಡಿಸಬೇಕು ಎಂದು ಆಗ್ರಹಿಸಿ ಬೆಳಗೊಳ ಇತರ ಗ್ರಾಮಗಳ ರೈತರು ಶನಿವಾರ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಪುರ ಗ್ರಾಮದ ಸ.ನಂ. 33ರಲ್ಲಿ ಇದ್ದ 19 ಗುಂಟೆ ವಿಸ್ತೀರ್ಣದ ಸಾರ್ವಜನಿಕ ಕಟ್ಟೆ ಶೇ 90 ಭಾಗ ಅತಿಕ್ರಮವಾಗಿದೆ. ಪ್ಲಾನೆಟ್ ಅರ್ಥ್ ಹೆಸರಿನ ಸಂಸ್ಥೆ ಈ ಕಟ್ಟೆಯನ್ನು ಅತಿಕ್ರಮಿಸಿದೆ. ದನ, ಕರುಗಳಿಗೆ ನೀರು ಕುಡಿಸಲು ಮೀಸಲಾಗಿದ್ದ ಕಟ್ಟೆಯನ್ನು ಅತಿಕ್ರಮಿಸಿರುವ ಸಂಗತಿ ಸ್ಥಳೀಯ ಕಂದಾಯ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಮೌನ ವಹಿಸಿದ್ದಾರೆ ಎಂದು ಬೆಳಗೊಳ ಗ್ರಾಮದ ಮುಖಂಡ ಸುನಿಲ್ ದೂರಿದರು.
ಶತಮಾನಗಳಷ್ಟು ಹಳೆಯದಾದ ಕಟ್ಟೆಯ ಸುತ್ತಲೂ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ತ್ಯಾಜ್ಯವನ್ನು ಈ ಕಟ್ಟೆಗೆ ತುಂಬಲಾಗಿದೆ. ಅಲ್ಲಿ ಕಟ್ಟೆ ಇತ್ತು ಎಂಬ ಗುರುತು ಉಳಿಯದಂತೆ ಮಾಡಿದ್ದಾರೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಅವ್ಯವಹಾರ ಆರೋಪ: ಬೆಳಗೊಳ ಗ್ರಾಮದ ಸಾರ್ವಜನಿಕ ಆಸ್ಪತ್ರೆ ಮೈದಾನವನ್ನು ಸಮತಟ್ಟುಗೊಳಿಸುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಗ್ರಾಮದ ಮುಖಂಡ ವಿಷಕಂಠು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗೆ ಶನಿವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
‘ಸುಮಾರು ₹3 ಲಕ್ಷ ಹಣದಲ್ಲಿ ಆಸ್ಪತ್ರೆ ಆವರಣವನ್ನು ಸಮತಟ್ಟು ಮಾಡುವ ಕಾಮಗಾರಿ ನಡೆದಿದೆ. ಆದರೆ ಇದರಲ್ಲಿ ಹಣ ದುರುಪಯೋಗ ಆಗಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ದಾಖಲೆ ಪಡೆದು, ಸ್ಥಳ ಪರಿಶೀಲನೆ ನಡೆಸಿ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
ಪಾಲಹಳ್ಳಿ ರಾಮಚಂದ್ರು, ಚಂದಗಿರಿಕೊಪ್ಪಲು ಕೆಂಪೇಗೌಡ, ವಿನಯ್, ವಿನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.