ADVERTISEMENT

ಮಂಡ್ಯ | ಕಲೆಗೆ ಪೋಷಣೆ ಸಿಗದಿದ್ದರೆ ವಿನಾಶಕ್ಕೆ ದಾರಿ: ಹುಲ್ಕೆರೆ ಮಹದೇವು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 4:08 IST
Last Updated 4 ಆಗಸ್ಟ್ 2025, 4:08 IST
ಮಂಡ್ಯ ನಗರದ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು
ಮಂಡ್ಯ ನಗರದ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು   

ಮಂಡ್ಯ: ಕಲೆ, ಸಾಹಿತ್ಯ, ಸಂಸ್ಕೃತಿ ಯಾವ ಸಮಾಜದಲ್ಲಿ ಪೋಷಣೆ ಆಗುವುದಿಲ್ಲವೋ ಅಂತಹ ಸಮಾಜವು ವಿನಾಶದ ಕಡೆಗೆ ಸಾಗುತ್ತದೆ ಎಂದು ಸಾಹಿತಿ ಹುಲ್ಕೆರೆ ಮಹದೇವು ಹೇಳಿದರು.

ನಗರದ ಗಾಂಧಿ ಭವನದಲ್ಲಿ ಸಿಂಧುಶ್ರೀ ಕಲಾ ಸಂಸ್ಥೆ, ಸಂಧ್ಯಾ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಭಾನುವಾರ ನಡೆದ ಹಿರಿಯ ಮತ್ತು ಕಿರಿಯ ಕಲಾವಿದರ ಹಾಗೂ ಸಾಹಿತ್ಯಗಳ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ವ್ಯಕ್ತಿತ್ವ ಮನುಷ್ಯರಲ್ಲಿ ಮಾನವೀಯತೆ ಮತ್ತು ಸಮಾನತೆಯ ಭಾವನೆ ಅರಳಿಸುತ್ತದೆ. ಸಮಾಜಕ್ಕೆ ಸ್ಪಂದಿಸುವ ಗುಣವನ್ನು ಬೆಳೆಸುತ್ತದೆ. ನಾವೆಲ್ಲರೂ ಸುಸಂಸ್ಕೃತರಾಗಿ ಬಾಳಬೇಕು. ಇತ್ತೀಚಿನ ವರ್ಷಗಳಲ್ಲಿ ಗುಣಮಟ್ಟದ ಅಥವಾ ಕಾಡುವ ಸಾಹಿತ್ಯದ ರಚನೆಯ ಪ್ರಮಾಣ ಕಡಿಮೆ ಆಗುತ್ತಿದೆ. ಸಾಹಿತಿಗಳು ಅಧ್ಯಯನದ ಜೊತೆಗೆ ವಿಶಾಲ ಭಾವನೆ ರೂಢಿಸಿಕೊಂಡಾಗ ಮಾನವತಾವಾದದ ಬರವಣಿಗೆ ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಲ್‌.ಸಂದೇಶ್‌ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಸೈದ್ಧಾಂತಿಕವಾಗಿ ನಡೆಯುತ್ತಿರುವ ಎಡ ಬಲದ ಸಂಘರ್ಷದ ನಡುವೆ ವಾಸ್ತವ ಸಂಗತಿಗಳು ದೂರಾಗುತ್ತಿವೆ. ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸದ ಸಾಹಿತ್ಯ ಜಡವಾಗಿ ಉಳಿಯುತ್ತದೆ. ಸಾಹಿತಿಗಳಲ್ಲಿ ಸದಾ ಸಾಮಾಜಿಕ ಸ್ಪಂದನೆಯ ಮನೋಭಾವನೆ ಇರಬೇಕು ಎಂದು ಸಲಹೆ ನೀಡಿದರು.

ಸಾಹಿತಿಗಳಿಗೆ ಸಂವಿಧಾನದ ಆಶಯಗಳೇ ಅಜೆಂಡಾ ಆಗಬೇಕು. ಸಂವಿಧಾನದಲ್ಲಿರುವ ಸೋದರತ್ವ, ಸಮಾನತೆ ಹಾಗೂ ಮಾನವೀಯ ಗುಣಗಳು ತಮ್ಮ ಬರಹದ ರೂಪದಲ್ಲಿ ಜನ ಸಾಮಾನ್ಯರನ್ನು ತಲುಪಿದರೆ ಸಮಾಜದ ಸುಧಾರಣೆ ಸಾಧ್ಯವಾಗಬಹುದು. ವಿಶೇಷವಾಗಿ ಯುವ ಸಾಹಿತಿಗಳು ಗಂಭೀರ ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದರು.

ಜಿಲ್ಲಾ ಯುವ ಬರಹಗಾರ ಬಳಗದ ಅಧ್ಯಕ್ಷ ಸತೀಶ್‌ ಜವರೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರು, ಸಾಹಿತಿಗಳು ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಲಾಯಿತು.

ರಂಗಭೂಮಿ ಕಲಾವಿದರಾದ ಕಾಳೇನಹಳ್ಳಿ ಕೆಂಚೇಗೌಡ, ಬಸವರಾಜು ಸಂಪಹಳ್ಳಿ, ಮಾರ್ಕಾಲು ದೇವರಾಜು, ಡಾ.ಮನೋಹರ್‌, ಕಾನೂನು ಶಿಕ್ಷಕ ಕೆ.ಎಸ್‌.ಜಯಕುಮಾರ್‌, ರೇಷ್ಮೆ ಕೃಷಿಕ ಗರಕಹಳ್ಳಿ, ಕವಿ ಕಲ್ಕುಣಿ ಲೋಕೇಶ್‌, ಟ್ರಸ್ಟ್‌ ಅಧ್ಯಕ್ಷ ಹೆಮ್ಮಿಗೆ ಶಿವಣ್ಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.