ADVERTISEMENT

ಮದ್ದೂರು: ಸೆಸ್ಕ್‌ ಸಿಬ್ಬಂದಿ ಮೇಲೆ ಹಲ್ಲೆ

ವಿದ್ಯುತ್‌ ಅಕ್ರಮ ಸಂಪರ್ಕ ಕಡಿತಗೊಳಿಸಲು ಹೋಗಿದ್ದರು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 2:37 IST
Last Updated 24 ಡಿಸೆಂಬರ್ 2020, 2:37 IST
ಮದ್ದೂರು ತಾಲ್ಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ಸೆಸ್ಕ್‌ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ನಿವಾಸಿಗಳು
ಮದ್ದೂರು ತಾಲ್ಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ಸೆಸ್ಕ್‌ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ನಿವಾಸಿಗಳು   

ಮದ್ದೂರು: ತಾಲ್ಲೂಕಿನ ಕೆಸ್ತೂರು ವ್ಯಾಪ್ತಿ ಮಾಚಹಳ್ಳಿ ಗ್ರಾಮದ ಮನೆಯೊಂದಕ್ಕೆ, ಅಕ್ರಮವಾಗಿ ಪಡೆದುಕೊಂಡಿದ್ದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಹೋಗಿದ್ದ ಸೆಸ್ಕ್ ಸಿಬ್ಬಂದಿ ಮೇಲೆ ಮಂಗಳವಾರ ಹಲ್ಲೆ ನಡೆದಿದೆ.

ಆರೋಪಿಗಳಾದ, ಗ್ರಾಮದ ಜಯಬೋರಮ್ಮ ಮತ್ತು ಅವರ ಪುತ್ರ ಬಿಳಿಯ ಎಂಬುವವರ ವಿರುದ್ಧ ಕೆಸ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಂಡಿರುವ ಬಗ್ಗೆ ದೂರು ಬಂದಿದ್ದರಿಂದ ಸೆಸ್ಕ್‌ ಕಿರಿಯ ಎಂಜಿನಿಯರ್‌ ಸುಧಾಕುಮಾರಿ, ಸಿಬ್ಬಂದಿ ವಿಜಯೇಂದ್ರ, ಬರಮಲಿಂಗಪ್ಪ ಮೊದಲಾದವರು ಗ್ರಾಮಕ್ಕೆ ತೆರಳಿದ್ದಾರೆ. ಕಂಬದಿಂದ ನೇರವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವುದು ನಿಯಮ ಬಾಹಿರ ಎಂದು ಸಿಬ್ಬಂದಿ ತಿಳಿ ಹೇಳಿದ್ದಾರೆ. ಈ ವೇಳೆ ಆಕ್ರೋಶಗೊಂಡ ಜಯಬೋರಮ್ಮ ಸಿಬ್ಬಂದಿಗೆ ಕಚ್ಚಿದ್ದಾರೆ. ಅವರ ಮಗ ಬಿಳಿಯ, ಮನೆಯಲ್ಲಿದ್ದ ಮಚ್ಚನ್ನು ತೆಗೆದುಕೊಂಡು ಹಲ್ಲೆಗೆ ಮುಂದಾಗಿದ್ದಾರೆ. ಇದರೊಂದಿಗೆ, ಹಲ್ಲೆ ತಡೆಯಲು ಹೋದ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.

ADVERTISEMENT

ಹಲ್ಲೆಗೀಡಾದ ವಿಜಯೇಂದ್ರ ಹಾಗೂ ಬರಮಲಿಂಗಪ್ಪ ಅವರಿಗೆ ಕೆಸ್ತೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.

ಕಾರ್ಮಿಕರ ಸಂಘದಿಂದ ಖಂಡನೆ: ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಇಂಥ ಹಲ್ಲೆಗಳು ನಡೆಯುತ್ತಿವೆ. ನೌಕರರಿಗೆ ಹೆಚ್ಚಿನ ಭದ್ರತೆ ನೀಡಬೇಕು ಎಂದು ಸೆಸ್ಕ್‌ ಕಾರ್ಮಿಕ ಸಂಘಟನೆಯ ವಿಭಾಗೀಯ ಅಧ್ಯಕ್ಷ ಲೋಕೇಶ್ ಹಾಗೂ ಕಾರ್ಯದರ್ಶಿ ಓಂಕಾರ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.