ಪಾಂಡವಪುರ: ‘ವಕೀಲರೊಬ್ಬರು ಮುಖ್ಯನ್ಯಾಯಾಧೀಶರ ಮೇಲೆ ಶೂ ಎಸೆದದ್ದು, ನಮ್ಮ ಸಂವಿಧಾನದ ಮೇಲೆ ನಡೆದ ದಾಳಿಯಾಗಿದೆ. ದೇಶದ ಸಾರ್ವಭೌಮತ್ವ ಮತ್ತು ಸಂವಿಧಾನಕ್ಕೆ ಸವಾಲು ಎದುರಾಗಿದ್ದು, ಈ ಸವಾಲನ್ನು ನಾವು ಸ್ವೀಕರಿಸಿ ಪ್ರತಿರೋಧ ಮತ್ತು ಪ್ರತಿಭಟಿಸಬೇಕಿದೆ’ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಾಜಿರಾವ್ ಅಭಿಪ್ರಾಯಪಟ್ಟರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಶನಿವಾರ ಆಯೋಜಿಸಿದ್ದ ದುಡಿಯುವ ಜನರ ಹಕ್ಕುಗಳ ರಕ್ಷಣೆಗಾಗಿ ಸಿಐಟಿಯು 9ನೇ ಮಂಡ್ಯ ಜಿಲ್ಲಾ ಸಮ್ಮೇಳನವನ್ನು ಉದ್ಫಾಟಿಸಿ ಅವರು ಮಾತನಾಡಿದರು.
‘ಸ್ವಾತಂತ್ರ್ಯ, ಸಮಾನತೆ, ಸಹೋದರತೆಯನ್ನು ಸಾರುವ ನಮ್ಮ ಸಂವಿಧಾನದ ಮೇಲೆ ನಿರಂತರ ದಾಳಿ ನಡೆಯತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಇಂತಹ ದಾಳಿಯನ್ನು ನಾವು ಹಿಮ್ಮೆಟ್ಟಿಸದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಅಲ್ಲದೇ ದೇಶಕ್ಕೆ ಭವಿಷ್ಯವೇ ಇರುವುದಿಲ್ಲ’ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ‘ಪ್ರಸ್ತುತದಲ್ಲಿ ಸಂಘಟನೆ ಮತ್ತು ಹೋರಾಟಗಳನ್ನು ಬಲಗೊಳಿಸಬೇಕಿದೆ. ಬಿಡಿಬಿಡಿ ಹೋರಾಟ ನಡೆಸದೆ, ಎಲ್ಲ ಜನಪರ ಸಂಘಟನೆಗಳು ಒಂದುಗೂಡಿ ಹೋರಾಟ ರೂಪಿಸಬೇಕಿದೆ. ವರ್ತಮಾನಗಳಿಗೆ ಪ್ರತಿಕ್ರಿಯಿಸುತ್ತಾ ಪ್ರಶ್ನಿಸುವುದನ್ನು ರೂಢಿಸಿಕೊಳ್ಳಬೇಕು. ಇಲ್ಲದಿದ್ದರೆ ದುಡಿಯುವ ವರ್ಗಗಳು ಮತ್ತಷ್ಟು ಗುಲಾಮಗಿರಿಯನ್ನು ಅನುಭವಿಸಬೇಕಾಗುತ್ತದೆ’ ಎಂದರು.
ಸಿಐಟಿಯು ಜಿಲ್ಲಾ ಪ್ರದಾನ ಕಾರ್ಯದರ್ಶಿ ಸಿ.ಕುಮಾರಿ, ರಾಜ್ಯ ಉಪಾಧ್ಯಕ್ಷೆ ಮಾಲಿನಿ ಮೇಸ್ತಾ, ಕೆಪಿಆರ್‌ಎಸ್ ರೈತ ಮುಖಂಡ ಟಿ.ಎಲ್.ಕೃಷ್ಣೇಗೌಡ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಮಹದೇವಮ್ಮ, ತಾಲ್ಲೂಕು ಘಟಕದ ಅಧ್ಯಕ್ಷೆ ಶಾರದ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಹದೇವಮ್ಮ, ಎಐಎಡಬ್ಲೂಯು ಜಿಲ್ಲಾ ಉಪಾಧ್ಯಕ್ಷ ಎನ್.ಸುರೇಂದ್ರ ದಸಂಸ ಮುಖಂಡ ಡಿ.ಕೆ.ಅಂಕಯ್ಯ ಇತರರು ಇದ್ದರು.
ಕಾರ್ಯಕ್ರಮಕ್ಕೂ ಮೊದಲು ಸಿಐಟಿಯು ಕಾರ್ಯಕರ್ತರು ಪಟ್ಟಣದ ಐದು ದೀಪ ವೃತ್ತದಿಂದ ಶಿಕ್ಷಕರ ಭವನದರೆಗೂ ಮೆರವಣಿಗೆ ನಡೆಸಿದರು.
‘ಕೋಮುವಾದಿಗಳಿಂದ ಮಂಡ್ಯ ಉಳಿಸಬೇಕಿದೆ’
’ಮಂಡ್ಯದ ನೆಲವು ಜಾತ್ಯಾತೀತ ಸೌಹಾರ್ದತೆ ಸಹಬಾಳ್ವೆಯ ಹಿನ್ನೆಲೆಯನ್ನು ಹೊಂದಿದೆ. ಆದರೆ ಕೋಮುವಾದಿಗಳು ಭಗಧ್ವಜ ಗಣೇಶ್ ಉತ್ಸವದ ಹೆಸರಿನಲ್ಲಿ ಜನರ ನಡುವೆ ದ್ವೇಷ ಬೆಳೆಸಿ ಹಿಂಸೆಗೆ ಪ್ರಚೋದಿಸುತ್ತಿವೆ. ನಿರುದ್ಯೋಗಿ ಯುವಕರಿಗೆ ಬದುಕುವ ದಾರಿ ತೋರದೆ ಕೋಮುದ್ವೇಷ ಬಿತ್ತಿ ಅವರ ಕೈಯಲ್ಲಿ ದೊಣ್ಣೆ ಕತ್ತಿ ತಲವಾರ್ ನೀಡಿ ಕೋಮು ಗಲಭೆ ಮಾಡಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ’ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಾಜಿರಾವ್ಆಕ್ರೋಶ ವ್ಯಕ್ತಪಡಿಸಿದರು.
ಋತುಮಾಸದ ರಜೆ ಘೋಷಣೆ; ಸ್ವಾಗತಾರ್ಹ
‘ಕಾರ್ಮಕರನ್ನು ಮನಸೋಇಚ್ಚೆ ದುಡಿಸಿಕೊಳ್ಳುತ್ತಿದ್ದಾರೆಯೇ ವಿನಃ ದುಡಿಮೆಗೆ ಸಮರ್ಪಕ ಕೂಲಿ ನೀಡುತ್ತಿಲ್ಲ. ಮಹಿಳೆಯರು ಮತ್ತು ಅಸಂಘಟಿತ ಕಾರ್ಮಿಕರು ಸಂಘಟಿತರಾಗಿ ಹೋರಾಟ ನಡೆಸುವುದು ಅನೀವಾರ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳಾ ನೌಕರರಿಗೆ ಋತುಮಾಸದ ರಜೆ ಘೋಷಿಸಿರುವುದು ಸ್ವಾಗತಾರ್ಹ’ ಎಂದು ಸಿಐಟಿಯು ಜಿಲ್ಲಾ ಪ್ರದಾನ ಕಾರ್ಯದರ್ಶಿ ಸಿ.ಕುಮಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.