ADVERTISEMENT

ವಿಜೃಂಭಣೆಯಿಂದ ನಡೆದ ಬಡಗುಡಮ್ಮ ಜಾತ್ರೆ

ಬಂದಮ್ಮ, ಎಲ್ಲಮ್ಮ, ಉಪ್ಪಾರಹಳ್ಳಿ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 17:00 IST
Last Updated 27 ಏಪ್ರಿಲ್ 2019, 17:00 IST
ನಾಗಮಂಗಲ ಪಟ್ಟಣದ ಟಿವಿ ಬಡಾವಣೆಯಲ್ಲಿ ಬಡಗುಡಮ್ಮ ದೇವಿಯ ಪಲ್ಲಕ್ಕಿಯ ರಥವನ್ನು ಭಕ್ತರು ಎಳೆದರು
ನಾಗಮಂಗಲ ಪಟ್ಟಣದ ಟಿವಿ ಬಡಾವಣೆಯಲ್ಲಿ ಬಡಗುಡಮ್ಮ ದೇವಿಯ ಪಲ್ಲಕ್ಕಿಯ ರಥವನ್ನು ಭಕ್ತರು ಎಳೆದರು   

ನಾಗಮಂಗಲ: ಪಟ್ಟಣದ ಟಿವಿ ಬಡಾವಣೆಯಲ್ಲಿ ಬಡಗುಡಮ್ಮ ಜಾತ್ರೆಯು ಶನಿವಾರ ವೈಭವದಿಂದ ನಡೆಯಿತು.

ಟಿವಿ ಬಡಾವಣೆಯ ದೇವಾಲಯದ ಆವರಣದಲ್ಲಿ ಬಡಗುಡಮ್ಮ, ಬಂದಮ್ಮ, ಎಲ್ಲಮ್ಮ ಮತ್ತು ಉಪ್ಪಾರಹಳ್ಳಿ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು. ಉಪ್ಪಾರಹಳ್ಳಿಯಿಂದ ತಂಬಿಟ್ಟು ಮತ್ತು ಮಡೆ ಆರತಿಯನ್ನು ಬೆಳಗಿನ ಜಾವ 3 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತರಲಾಯಿತು.

ತಂಬಿಟ್ಟಿನ ಆರತಿಗಳನ್ನು ಗುಲಾಬಿ, ಕಣಿಗಲೆ, ಕನಕಾಂಬರ, ಮಲ್ಲಿಗೆ ಹೂವು ಹಾಗೂ ವೀಳ್ಯದೆಲೆಯಿಂದ ಸಿಂಗಾರ ಮಾಡಲಾಗಿತ್ತು. ಮೆರವಣಿಗೆ ನಂತರ ದೇವಾಲಯದ ಅವರಣದಲ್ಲಿ ಆರತಿಗಳನ್ನು ಸಾಲಿನಲ್ಲಿ ಇಟ್ಟು ಪೂಜೆ ಸಲ್ಲಿಸಲಾಯಿತು.

ADVERTISEMENT

ದೇವಾಲಯದ ಅರ್ಚಕರು ದೇವರನ್ನು ಹೊತ್ತು ಕೊಂಡ ಹಾಯ್ದರು. ಹರಕೆ ಹೊತ್ತವರು ಕೊಂಡಕ್ಕೆ ಹರಳು ಬೀಜಗಳನ್ನು ಹಾಕಿದರು. ಹೀಗೆ ಮಾಡುವುದರಿಂದ ಚರ್ಮರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ.

ಮೆರವಣಿಗೆಯಲ್ಲಿ ತಮಟೆ, ಡೊಳ್ಳುಕುಣಿತ, ಪೂಜಾ ಕುಣಿತ ಗಮನ ಸೆಳೆಯಿತು. ರಥದ ಪಲ್ಲಕ್ಕಿಯಲ್ಲಿ ಬಡಗುಡಮ್ಮ ದೇವಿಯ ಮೂರ್ತಿಯನ್ನು ಇಟ್ಟು ಪೂಜೆ ಸಲ್ಲಿಸಿದ ನಂತರ ಸಾವಿರಾರು ಭಕ್ತರು ರಥವನ್ನು ಎಳೆದರು.

ರಥೋತ್ಸವ ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಕಿಕ್ಕಿರಿದು ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.