ADVERTISEMENT

ಬ್ಯಾಂಕ್‌ ಮುಷ್ಕರ: ಎಟಿಎಂ, ಹಣ ಜಮೆ ಯಂತ್ರವೂ ಬಂದ್‌, ಗ್ರಾಹಕರ ಪರದಾಟ

ಸಾರ್ವಜನಿಕರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 13:00 IST
Last Updated 21 ಡಿಸೆಂಬರ್ 2018, 13:00 IST
ಬ್ಯಾಂಕ್‌ ಮುಷ್ಕರದ ಅಂಗವಾಗಿ ಮಂಡ್ಯದ ಬಂದೀಗೌಡ ಬಡಾವಣೆಯ ಎಸ್‌ಬಿಐ ಶಾಖೆ ಬಾಗಿಲು ಮುಚ್ಚಿತ್ತು
ಬ್ಯಾಂಕ್‌ ಮುಷ್ಕರದ ಅಂಗವಾಗಿ ಮಂಡ್ಯದ ಬಂದೀಗೌಡ ಬಡಾವಣೆಯ ಎಸ್‌ಬಿಐ ಶಾಖೆ ಬಾಗಿಲು ಮುಚ್ಚಿತ್ತು   

ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ನಗರದ ಎಲ್ಲಾ ಬ್ಯಾಂಕ್‌ಗಳ ಶಾಖೆಗಳು ಶುಕ್ರವಾರ ಬಂದ್‌ ಆಗಿದ್ದವು. ಬ್ಯಾಂಕ್‌ಗೆ ಬಂದಿದ್ದ ಗ್ರಾಹಕರು ಪರದಾಡಿದರು.

ಬ್ಯಾಂಕ್‌ ಶಾಖೆಗಳ ಎದುರು ‘ಮುಷ್ಕರದ ಅಂಗವಾಗಿ ರಜೆ’ ಫಲಕ ಹಾಕಲಾಗಿತ್ತು. ಗ್ರಾಹಕರು ವಾಪಸ್‌ ತೆರಳುತ್ತಿದ್ದರು. ವಾರಾಂತ್ಯ, ಕ್ರಿಸ್‌ಮಸ್‌ ರಜೆ ಸೇರಿ ಐದಾರು ದಿನ ಬ್ಯಾಂಕ್‌ ಸೇವೆ ದೊರೆಯುವುದಿಲ್ಲ ಎಂದು ತಿಳಿದ ಜನರು ಬೇಸರ ವ್ಯಕ್ತಪಡಿಸಿದರು. ಬಹುತೇಕ ಎಟಿಎಂಗಳು ಬಂದ್‌ ಆಗಿದ್ದವು. ಹಲವೆಡೆ, ಹಣ ಇಲ್ಲ ಎಂಬ ಫಲಕ ಹಾಕಲಾಗಿತ್ತು.

‘ಬ್ಯಾಂಕ್‌ ಅಧಿಕಾರಿಗಳು ರಜೆಗೆ ಮೊದಲು ಎಟಿಎಂ ಯಂತ್ರಕ್ಕೆ ಹಣ ತುಂಬಬೇಕಿತ್ತು. ರಜೆ ಇದ್ದರೂ ಜನರಿಗೆ ಹಣಕಾಸಿನ ಸಮಸ್ಯೆ ಆಗುತ್ತಿರಲಿಲ್ಲ. ಪ್ರತಿ ಬಾರಿ ಸರಣಿ ರಜೆ ಬಂದಾಗ ನಗರದ ಎಟಿಎಂನಲ್ಲಿ ಹಣ ಸಿಗುವುದಿಲ್ಲ. ಮೊದಲ ದಿನವೇ ಹಣ ಸಿಗುತ್ತಿಲ್ಲ. ಇನ್ನೂ ನಾಲ್ಕೈದು ದಿನ ಪರದಾಡಬೇಕು. ಮೈಸೂರು ಅಥವಾ ಬೆಂಗಳೂರಿಗೆ ತೆರಳಿ ಎಟಿಎಂನಲ್ಲಿ ಹಣ ತರಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಅನುಭವಿಸಬೇಕಾಗಿದೆ’ ಎಂದು ಗ್ರಾಹಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಜಮೆ ಯಂತ್ರವೂ ಇಲ್ಲ
ನಗರದಲ್ಲಿರುವ ವಿವಿಧ ಬ್ಯಾಂಕ್‌ಗಳ ನಗದು ಜಮೆ ಯಂತ್ರವೂ ಸ್ಥಗಿತಗೊಂಡಿದ್ದವು. ಬಾಗಿಲು ಬಂದ್‌ ಮಾಡಲಾಗಿತ್ತು. ಆರ್‌ಪಿ ರಸ್ತೆಯಲ್ಲಿರುವ ಎಸ್‌ಬಿಐ ಜಮೆ ಯಂತ್ರ, ಅಶೋಕ್‌ನಗರದಲ್ಲಿರುವ ಸಿಂಡಿಕೇಟ್‌ ಬ್ಯಾಂಕ್‌ ಜಮೆ ಯಂತ್ರಗಳು ಕಾರ್ಯನಿರ್ವಹಿಸಲಿಲ್ಲ. ಗ್ರಾಹಕರು ಪರದಾಡಬೇಕಾಯಿತು.

‘ಇನ್ನು ಐದು ದಿನವೂ ಎಂಟಿಎಂ, ನಗದು ಜಮೆ ಯಂತ್ರ ಕಾರ್ಯನಿರ್ವಹಿಸುವುದಿಲ್ಲ. ಮಂಡ್ಯದಲ್ಲಿ ಬ್ಯಾಂಕಿಂಗ್‌ ಚಟುವಟಿಕೆ ಸಮರ್ಪಕವಾಗಿಲ್ಲ. ಅಧಿಕಾರಿಗಳಿಗೆ ಗ್ರಾಹಕರ ಮೇಲೆ ಕಾಳಜಿ ಇಲ್ಲ’ ಎಂದು ಅಶೋಕ್‌ನಗರದ ನಿವಾಸಿ ಕೀರ್ತಿಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು. ಖಾಸಗಿ ಸ್ವಾಮ್ಯದ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.