ADVERTISEMENT

ನದಿ ವಿವಾದದಿಂದ ನಿರಾಶಿತನಾಗಿ ರಾಜ್ಯ ತ್ಯಜಿಸಿದ ಬುದ್ಧ: ಬರಗೂರು ರಾಮಚಂದ್ರಪ್ಪ

‘ಬುದ್ಧ ಚಿಂತನೆಯ ಸ್ವರೂಪ’ ವಿಚಾರ ಸಂಕಿರಣ; ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 15:55 IST
Last Updated 12 ಜೂನ್ 2021, 15:55 IST
ಆನ್‌ಲೈನ್‌ ವಿಚಾರ ಸಂಕಿರಣದಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿದರು
ಆನ್‌ಲೈನ್‌ ವಿಚಾರ ಸಂಕಿರಣದಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿದರು   

ಮಂಡ್ಯ: ‘ಬುದ್ಧನ ಬಗ್ಗೆ ಹಲವು ರೂಪಕ, ಪುರಾಣ ಪ್ರತೀಕಗಳು ಜನಮಾನಸದಲ್ಲಿವೆ. ಆದರೆ, ಬುದ್ಧ ನದಿ ವಿವಾದದಿಂದ ನಿರಾಶಿತನಾಗಿ ರಾಜ್ಯ, ಸಿಂಹಾಸನ ತ್ಯಜಿಸಿದ್ದ ಎಂಬ ಅಂಶ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಸಂಶೋಧನೆಯಿಂದ ಬೆಳಕಿಗೆ ಬಂದಿದೆ’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.

ಆದಿಚುಂಚನಗಿರಿ ಸಾಂಸ್ಕೃತಿಕ ಮತ್ತು ಆಧ್ಮಾತ್ಮಿಕ ಪ್ರತಿಷ್ಠಾನದ ವತಿಯಿಂದ ಶನಿವಾರ ನಡೆದ ‘ಬುದ್ಧ ಚಿಂತನೆಯ ಸ್ವರೂಪ’ ಕುರಿತ ಆನ್‌ಲೈನ್‌ ವಿಚಾರಣಾ ಸಂಕಿರಣದಲ್ಲಿ ಅವರು ‘ಬುದ್ಧ ಮತ್ತು ಜನಮಾನಸ ಪ್ರಜ್ಞೆ’ ಕುರಿತು ವಿಚಾರ ಮಂಡಿಸಿದರು.

‘ಜನರು ಮಹಾನ್‌ ಸಾಧಕರನ್ನು ಗುರುತಿಸುವ ಕ್ರಮ ರೂಪಕದ ಮಾದರಿಯಲ್ಲಿದೆ. ಅವರ ಬಗೆಗಿನ ಪುರಾಣ ಪ್ರತೀಕದ ವಿವರಗಳು ಅತಾರ್ಕಿಕವಾಗಿರುತ್ತವೆ. ಆದರೆ ಅದರ ಒಳ ಹೊಕ್ಕು ನೋಡಿದಾಗ ಅದರ ಆಶಯ ಸತ್ಯವಾಗಿರುತ್ತದೆ. ಅದರಂತೆ ಬುದ್ಧನ ಬಗೆಗೂ ಐತಿಹ್ಯಗಳಿವೆ. ಆತನ ಜನ್ಮದ ಬಗ್ಗೆ ಹಲವು ಕತೆಗಳಿವೆ. ಮುಪ್ಪು, ಸಾವು, ನೋವು ಕಂಡು ರಾಜ್ಯ ಬಿಟ್ಟ ಎಂಬ ಪುರಾಣದ ಕತೆಗಳಿವೆ. ಆದರೆ ಅಂಬೇಡ್ಕರ್‌ ಅವರು ಬುದ್ಧನ ಬಗೆಗೆ ನಡೆಸಿದ ಸಂಶೋಧನೆ ಬಹಳ ಭಿನ್ನವಾಗಿದೆ’ ಎಂದರು.

ADVERTISEMENT

‘ಪುಲಿಯರು ಹಾಗೂ ಶಾಖ್ಯರ ನಡುವೆ ರೋಹಿಣಿ ನದಿ ನೀರು ಹಂಚಿಕೆಯಲ್ಲಿ ವಿವಾದವಿತ್ತು, ಅದು ಸಂಘರ್ಷಕ್ಕೆ ಕಾರಣವಾಗಿತ್ತು. ಬುದ್ಧ ಕೂಡ ಒಂದು ಗುಂಪಿನ ಸದಸ್ಯನಾಗಿ ಚರ್ಚೆಯಲ್ಲಿ ಭಾಗವಹಿಸಿದ್ದ. ನದಿ ನೀರಿಗಾಗಿ ಯುದ್ಧ ನಡೆಯುವ ಸಂದರ್ಭ ಬಂದಾಗ ಬುದ್ಧ ರಾಜ್ಯ, ಸಿಂಹಾಸನ ತ್ಯಜಿಸಿ ಶಾಂತಿ ಅರೆಸುತ್ತಾ ನಡೆದ ಎಂಬ ವಿವರ ಅಂಬೇಡ್ಕರ್‌ ಶೋಧನೆಯಿಂದ ತಿಳಿದು ಬರುತ್ತದೆ’ ಎಂದರು.

‘ಈಗ ಕಾವೇರಿ, ಕೃಷ್ಣ ನದಿಗಳಿಗೆ ವಿವಾದಗಳಿರುವಂತೆ ಬುದ್ಧನ ಕಾಲದಲ್ಲೂ ವಿವಾದ ಇತ್ತು. ಯುದ್ಧದಿಂದ ಉಂಟಾಗುವ ಸಾವು, ನೋವು, ಹಿಂಸೆಗಳು ಬುದ್ಧನಿಗೆ ಅಧಿಕಾರ ನಿರಸನಗೊಳಿಸಿದವು. ಶಾಂತಿಗಾಗಿ ಅಧಿಕಾರ ತ್ಯಜಿಸಿದವರೆಲ್ಲರೂ ಮಹಾನ್‌ ಸಾಧಕರೇ ಆಗಿದ್ದಾರೆ. ಪಿತೃವಾಕ್ಯ ಪರಿಪಾಲನೆಗಾಗಿ ರಾಜ್ಯ ತ್ಯಜಿಸಿದ ಶ್ರೀರಾಮ, ಕಾಡಿನಲ್ಲಿ ವನವಾಸ ಮಾಡಿದ ಪಾಂಡವರು, ನಳ ಮಹರಾಜ ಮುಂತಾದವರು ದೈವ ಸ್ವರೂಪಿಗಳಾಗಿದ್ದಾರೆ’ ಎಂದರು.

‘ಬುದ್ಧನಿಗೆ ಅಧಿಕಾರ, ಸಂಪತ್ತು, ಸಿಂಹಾಸನ, ಸವಲತ್ತುಗಳು ಸರ್ವಸ್ವವಾಗಿರಲಿಲ್ಲ. ಸಂಕಟ ದೂರ ಮಾಡುವ ಸ್ವಾತಂತ್ರ್ಯದ ಹುಡುಕಾಟ ಮುಖ್ಯವಾಗಿತ್ತು. ಸಿದ್ಧ ಅರ್ಥಗಳನ್ನು ಮೀರಿದವನೇ ಸಿದ್ಧಾರ್ಥ. 1954, ಅಕ್ಟೋಬರ್‌ 3ರಂದು ಅಂಬೇಡ್ಕರ್‌ ಅವರು ಬುದ್ಧನ ಕುರಿತಾಗಿ ಭಾಷಣ ಮಾಡುತ್ತಾರೆ, ಸಂವಿಧಾನದ ಸ್ವಾತಂತ್ರ, ಸಮಾನತೆ, ಸೋದರತೆಯ ತತ್ವಗಳಿಗೆ ಬುದ್ಧ ಪ್ರಜ್ಞೆ, ಬುದ್ಧ ಬೋಧನೆಗಳೇ ಪ್ರೇರಣೆ ಎಂದು ತಿಳಿಸಿದ್ದಾರೆ’ ಎಂದರು.

‘1949 ನವೆಂಬರ್‌ 25ರಂದು ಸಂವಿಧಾನದ ಮೊದಲ ಪ್ರತಿ ಸ್ವೀಕರಿಸಿದ ದಿನ ಅವರು ಬುದ್ಧನ ಬಗ್ಗೆ ಮಾತನಾಡಿದ್ದರು. ಆಧುನಿಕ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಕೂಡ ಬುದ್ಧ ಪ್ರಜ್ಞೆಯಿಂದ ಬಂದದ್ದು ಎಂದು ತಿಳಿಸಿದ್ದರು. ವಿಶ್ವ ಬೌದ್ಧ ಸಮ್ಮೇಳನದಲ್ಲಿ ಅಂಬೇಡ್ಕರ್‌ ಮಾತನಾಡುವಾಗ ಮಾರ್ಕ್ಸ್‌ ವಾದ ಹಾಗೂ ಬುದ್ಧನ ಚಿಂತನೆಗಳನ್ನು ಹೋಲಿಕೆ ಮಾಡಿದ್ದರು. ಎರಡರಲ್ಲೂ ಖಾಸಗಿ ಆಸ್ತಿಯ ಹಕ್ಕಿನ ನಿರಾಕರಣೆಯನ್ನು ಗುರುತಿಸಿದ್ದರು. ಅಂಬೇಡ್ಕರ್‌ ಅವರು ಬುದ್ಧಪ್ರಜ್ಞೆಯನ್ನು ಆಳವಾಗಿ ಅಧ್ಯಯನ ಮಾಡಿದ್ದರು’ ಎಂದರು.

ವಿಮರ್ಶಕ ಡಾ.ನಟರಾಜ ಬೂದಾಳು ‘ಬೌದ್ಧ ತಾತ್ಮಿಕತೆಯ ಪ್ರಸ್ತುತತೆ’ ಕುರಿತು ವಿಚಾರ ಮಂಡಿಸಿದರು. ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

**********

ಭೂಮಿ ಬದ್ಧತೆಯ ಬುದ್ಧ ಪ್ರಜ್ಞೆ

‘ಸ್ವರ್ಗ ಪಡೆಯುವುದೇ ತಪಸ್ವಿಗಳ ಉದ್ದೇಶ. ಆದರೆ ಬುದ್ಧನ ಹಂಬಲ ಬೇರೆಯದ್ದೇ ಆಗತ್ತು. ಭೂಮಿಯ ಮೇಲಿನ ಕೆಡಕು, ಕೊಳಕುಗಳನ್ನು ಶೋಧಿಸಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದೇ ಬುದ್ಧನ ಉದ್ದೇಶವಾಗಿತ್ತು. ಭೂಮಿ ಬದ್ಧತೆಯ ಬುದ್ಧನ ಪ್ರಜ್ಞೆ ಅತ್ಯಂತ ವಿಸ್ತಾರವಾದುದು’ ಬರಗೂರು ರಾಮಚಂದ್ರಪ್ಪ ಹೇಳಿದರು.

‘ಜೀವಜಾಲದ ಸಂಕಟಗಳ ಶೋಧಕ, ಭೌತಿಕ ಅಭೌತಿಕ ನೆಲೆಗಳ ಚಿಂತಕ, ಮೌಢ್ಯಗಳ ವಿರೋಧಿ, ಪಶ್ನಿಸಿ, ಪರಿಶೀಲಿಸಿ ಒಪ್ಪಿಕೊಳ್ಳುವುದು ಬುದ್ಧ ತತ್ವವಾಗಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.