ಮಂಡ್ಯ: ಜಿಲ್ಲೆಯ ನಾಲೆಗಳ ಬಳಿ ಸಂಭವಿಸುತ್ತಿರುವ ಜಲ ದುರಂತಗಳಿಂದ ಉಂಟಾಗುವ ಸಾವು–ನೋವುಗಳನ್ನು ತಡೆಗಟ್ಟಲು ಮಂಡ್ಯ ಜಿಲ್ಲಾಡಳಿತ ತಡೆಗೋಡೆ ನಿರ್ಮಾಣ, ವೈಜ್ಞಾನಿಕ ರಸ್ತೆ ಉಬ್ಬು, ಸೂಚನಾ ಫಲಕ ಅಳವಡಿಸಲು ಕ್ರಮ ಕೈಗೊಂಡಿದೆ.
ವಿಶ್ವೇಶ್ವರಯ್ಯ ನಾಲೆಯ (ವಿ.ಸಿ) ಸುತ್ತಲಿನ ರಸ್ತೆಗಳಲ್ಲಿ ಅಪಘಾತ ವಲಯಗಳನ್ನು ಗುರುತಿಸಿ, 33 ಕಿ.ಮೀ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ವತಿಯಿಂದ ರಸ್ತೆ ತಡೆಗೋಡೆ ನಿರ್ಮಿಸಲಾಗಿದೆ.
ಜಿಲ್ಲೆಯಲ್ಲಿ ಅಂದಾಜು 540 ಕಿ.ಮೀ ನಾಲೆ ವ್ಯಾಪ್ತಿಯಿದ್ದು, ಸಂಪೂರ್ಣವಾಗಿ ತಡೆಗೋಡೆ ನಿರ್ಮಿಸುವುದು ಕಷ್ಟಕರ. ಅಪಘಾತ ವಲಯಗಳನ್ನು ಗುರುತಿಸಿ ಲೋಕೋಪಯೋಗಿ ಇಲಾಖೆಯಿಂದ 20 ಕಿ.ಮೀ ಹಾಗೂ ನೀರಾವರಿ ಇಲಾಖೆಗಳಿಂದ 13 ಕಿ.ಮೀ.ನಷ್ಟು ತಡೆಗೋಡೆ (ಕ್ರ್ಯಾಶ್ ಬ್ಯಾರಿಯರ್) ನಿರ್ಮಾಣ ಮಾಡಲಾಗಿದೆ.
ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಹೆಚ್ಚಿನ ಭಾಗದ ರಸ್ತೆ ಬರಲಿದ್ದು, ಇಲಾಖೆಗೆ ನೀಡಲಾಗುವ ಅನುದಾನದಲ್ಲಿ ಅಪಘಾತ ತಡೆಗಟ್ಟಲು ಅನುದಾನ ಮೀಸಲಿಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿ ಕುಮಾರ ಸೂಚಿಸಿದ್ದಾರೆ.
ತಾಂತ್ರಿಕ ಸಮಿತಿ ರಚನೆ
ನಾಲೆ ಬಳಿ ಉಂಟಾಗುತ್ತಿರುವ ಜಲ ಅವಘಡಗಳನ್ನು ತಪ್ಪಿಸುವ ಕುರಿತು ಅಧ್ಯಯನ ನಡೆಸಿ, ವರದಿ ಸಲ್ಲಿಸಲು ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ನೀರಾವರಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಅಧಿಕಾರಗಳನ್ನು ಒಳಗೊಂಡ ತಾಂತ್ರಿಕ ಸಮಿತಿಯನ್ನು ಜಿಲ್ಲಾಧಿಕಾರಿ ರಚಿಸಿದ್ದರು. ಈ ಸಮಿತಿಯವರು ಅಪಘಾತ ಸಂಭವಿಸಬಹುದಾದ ವಲಯಗಳನ್ನು ಗುರುತಿಸಿ, ಆ ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸುವುದು ಅಗತ್ಯವಿದೆ ಎಂದು ವರದಿ ನೀಡಿದ್ದರು.
₹141 ಕೋಟಿಗೆ ಬೇಡಿಕೆ
ಜಿಲ್ಲೆಯ ವಿಶ್ವೇಶ್ವರಯ್ಯ ನಾಲಾ ವ್ಯಾಪ್ತಿಯ ರಸ್ತೆಗಳಲ್ಲಿ ಕೆಲವು ವಲಯಗಳಲ್ಲಿ ತಡೆಗೋಡೆಗಳು ಇಲ್ಲದೇ ಇರುವುದರಿಂದ ವಾಹನಗಳು ಚಾಲಕರ ನಿಯಂತ್ರಣ ತಪ್ಪಿ, ನಾಲೆಗೆ ಬಿದ್ದು ಪ್ರಾಣ ಹಾನಿಯಾಗುತ್ತಿದೆ. ಹೀಗಾಗಿ ತಡೆಗೋಡೆ ನಿರ್ಮಿಸಲು ಅಗತ್ಯವಿರುವ ₹141 ಕೋಟಿ ಬಿಡುಗಡೆಗೆ ಸರ್ಕಾರಕ್ಕೆ ಜಿಲ್ಲಾಡಳಿತ 2024ರ ಜುಲೈನಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಇದುವರೆಗೆ ಅನುದಾನ ಬಿಡುಗಡೆಯಾಗಿಲ್ಲ.
ಸಚಿವರ ಸೂಚನೆ
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ 2024ರಲ್ಲಿ ನಡೆದ ಮೈಸೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಸಚಿವರು ನೀಡಿದ ನಿರ್ದೇಶನದಂತೆ ತುರ್ತಾಗಿ ಅಗತ್ಯವಿರುವ ಕಡೆ ನಾಲೆ/ ಕಾಲುವೆಗಳಿಗೆ ತಡೆಗೋಡೆ ನಿರ್ಮಿಸಲು ಸಂಬಂಧಪಟ್ಟ ಇಲಾಖೆಗಳಿಂದ ₹20 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಸಚಿವರು ಸೂಚಿಸಿದ್ದರು.
‘50 ಕಿ.ಮೀ. ವ್ಯಾಪ್ತಿಯಲ್ಲಿ 89 ತುರ್ತು ಕಾಮಗಾರಿಗಳನ್ನು ನಡೆಸಲು ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ 33 ಕಿ.ಮೀ. ವ್ಯಾಪ್ತಿಯಲ್ಲಿ ತಡೆಗೋಡೆ ನಿರ್ಮಾಣವಾಗಿದ್ದು, ಬಾಕಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಕ್ರಮವಹಿಸಿದ್ದೇವೆ’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಹರ್ಷ ತಿಳಿಸಿದರು.
ಜಲ ದುರಂತಗಳ ಸರಮಾಲೆ
2018 ನ.24: ಪಾಂಡವಪುರ ತಾಲ್ಲೂಕು ಕನಗನಮರಡಿ ಸಮೀಪ ವಿಶ್ವೇಶ್ವರಯ್ಯ ನಾಲೆಗೆ ಖಾಸಗಿ ಬಸ್ ಬಿದ್ದು ವಿದ್ಯಾರ್ಥಿಗಳು ಸೇರಿ 34 ಮಂದಿ ದುರ್ಮರಣ 2023 ಜುಲೈ 29: ಮಗಳ ಮದುವೆಯ ಆಹ್ವಾನ ಪತ್ರಿಕೆ ಹಂಚಲು ತೆರಳುತ್ತಿದ್ದ ವೇಳೆ ಶ್ರೀರಂಗಪಟ್ಟಣ ತಾಲ್ಲೂಕು ಗಾಮನಹಳ್ಳಿ ಸಮೀಪ ಸಂಪರ್ಕ ನಾಲೆಗೆ ಕಾರು ಉರುಳಿ ಬಿದ್ದು 4 ಮಂದಿ ಸಾವು 2023 ಜುಲೈ 27: ಮಂಡ್ಯ ತಾಲ್ಲೂಕು ದುದ್ದ ಹೋಬಳಿ ಜಯಪುರ ಗ್ರಾಮದ ಬಳಿ ವಿಶ್ವೇಶ್ವರಯ್ಯ ನಾಲೆಗೆ ಕಾರು ಪಲ್ಟಿ ಹೊಡೆದು ಚಾಲಕ ಸಾವು 2023 ನ.7: ಪಾಂಡವಪುರ ತಾಲ್ಲೂಕು ಬನಘಟ್ಟ ಬಳಿ ವಿಶ್ವೇಶ್ವರಯ್ಯ ನಾಲೆಗೆ ರಾತ್ರಿ ವೇಳೆ ಕಾರು ಬಿದ್ದು ಒಂದೇ ಕುಟುಂಬದ ಐವರು ಜಲಸಮಾಧಿ 2025 ಫೆ.3: ಮಂಡ್ಯ ತಾಲ್ಲೂಕು ಮಾಚಹಳ್ಳಿ– ತಿಬ್ಬನಹಳ್ಳಿ ಬಳಿ ವಿಶ್ವೇಶ್ವರಯ್ಯ ನಾಲೆಗೆ ಕಾರು ಬಿದ್ದು ಮೂವರು ನೀರುಪಾಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.