ADVERTISEMENT

ಮೈಸೂರು–ಬೆಂಗಳೂರು ಹೆದ್ದಾರಿ ಮೇಲ್ಸೇತುವೆ ಸಂಚಾರ: ವ್ಯಾಪಾರಿಗಳ ಬದುಕು ಬೀದಿಗೆ

ಮದ್ದೂರು ಪಟ್ಟಣದಲ್ಲಿ ಕುಗ್ಗಿದ ವಾಹನಗಳ ಓಡಾಟ, ಮುಚ್ಚುತ್ತಿವೆ ಹೋಟೆಲ್‌, ಕ್ಯಾಂಟೀನ್‌ಗಳು

ಎಂ.ಆರ್.ಅಶೋಕ್ ಕುಮಾರ್
Published 9 ಜನವರಿ 2023, 19:30 IST
Last Updated 9 ಜನವರಿ 2023, 19:30 IST
ವಹಿವಾಟು ಕುಸಿತ ಕಂಡ ಪರಿಣಾಮ ಎಂಪೈರ್‌ ಹೋಟೆಲ್‌ ಬಂದ್‌ ಆಗಿರುವುದು
ವಹಿವಾಟು ಕುಸಿತ ಕಂಡ ಪರಿಣಾಮ ಎಂಪೈರ್‌ ಹೋಟೆಲ್‌ ಬಂದ್‌ ಆಗಿರುವುದು   

ಮದ್ದೂರು: ಮೈಸೂರು -ಬೆಂಗಳೂರು ದಶಪಥ ಹೆದ್ದಾರಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾದ ನಂತರ ಪಟ್ಟಣದಲ್ಲಿ ವಾಹನಗಳ ಸಂಚಾರ ತೀವ್ರವಾಗಿ ಕಡಿಮೆಯಾಗಿದೆ. ಜೊತೆಗೆ ವ್ಯಾಪಾರ, ವಹಿವಾಟು ಕೂಡ ಕುಸಿತ ಕಂಡಿದ್ದು ಸಣ್ಣ, ಪುಟ್ಟ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ಮೇಲ್ಸೇತುವೆ ಕಾಮಗಾರಿ ಪಟ್ಟಣದ ಜನರಿಗೆ ಕಳೆದೆರಡು ವರ್ಷಗಳಿಂದ ತಲೆನೋವಾಗಿತ್ತು. ಒಳಚರಂಡಿ ಪೈಪ್‌ಗಳು ಒಡೆದು ಹೋಗಿ ರಸ್ತೆ ಮೇಲೆ ಕೊಳಚೆ ನೀರು ನುಗ್ಗಿತ್ತು, ಕಿರಿದಾದ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ಅಕ್ಕಪಕ್ಕದ ಮನೆ, ಅಂಗಡಿಗಳಿಗೆ ದೂಳಿನ ಗೋಳಾಗಿತ್ತು. ಆದರೆ ತಿಂಗಳಿಂದೀಚೆಗೆ ಮೇಲ್ಸೇತುವೆಯಲ್ಲಿ ವಾಹನಗಳು ಓಡಾಡುತ್ತಿದ್ದು ಕೆಳಗಿನ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆಯಾಗಿದೆ.

ಬೆಂಗಳೂರು– ಮೈಸೂರು ನಡುವೆ ಓಡಾಡುವ ವಾಹನಗಳು ಮೇಲ್ಸೇತುವೆಯಲ್ಲೇ ಚಲಿಸುತ್ತವೆ. ಸರ್ವೀಸ್‌ ರಸ್ತೆಯಲ್ಲಿ ಓಡಾಡುವ ವಾಹನಗಳು ಕೂಡ ಕೆಳಗೆ ಬರುತ್ತವೆ. ಈಗ ವಾತಾವರಣ ಸಂಪೂರ್ಣವಾಗಿ ಬದಲಾಗಿದ್ದು ವಾಹನಗಳ ದಟ್ಟಣೆ, ಗದ್ದಲ ಮಾಯವಾಗಿದೆ. ದೂಳುಮಯ ಪರಿಸ್ಥಿತಿಯಿಂದ ಮುಕ್ತವಾಗಿದ್ದು ಜನರು ನಿರಾಳರಾಗಿದ್ದಾರೆ. ಆದರೆ ವ್ಯಾಪಾರ ಸ್ಥಗಿತಗೊಂಡಿರುವ ಕಾರಣ ವ್ಯಾಪಾರಿಗಳ ಗೋಳು ಹೇಳತೀರದಾಗಿದೆ.

ADVERTISEMENT

ಮದ್ದೂರು ಪಟ್ಟಣ ಸೇರಿದಂತೆ ಶಿವಪುರ, ಸೋಮನಹಳ್ಳಿ, ಗೆಜ್ಜಲಗೆರೆ, ನಿಡಘಟ್ಟ ರಸ್ತೆ ಬದಿಯಲ್ಲಿ ನೂರಾರು ಅಂಗಡಿಕಾರರು ವ್ಯಾಪಾರ ನೆಚ್ಚಿ ಬದುಕುತ್ತಿದ್ದರು. ಈಗ ವಾಹನಗಳೆಲ್ಲವೂ ಮೇಲ್ಗಡೆ ಹೋಗುವ ಕಾರಣ ಕೆಳಗಿನ ವರ್ತಕರಿಗೆ ವ್ಯಾಪಾರ ಸಂಪೂರ್ಣವಾಗಿ ನಿಂತು ಹೋಗಿದೆ. ರಸ್ತೆ ಬದಿಯ ಹಲವು ಹೋಟೆಲ್‌ಗಳು ಈಗಾಗಲೇ ಬಾಗಿಲು ಮುಚ್ಚಿವೆ.

ಸಣ್ಣ ಹೋಟೆಲ್ ಗಳು, ನೂರಾರು ಟೀ ಅಂಗಡಿಗಳು, ಹಣ್ಣು, ತರಕಾರಿ ಅಂಗಡಿಗಳು, ಟೈಯರ್ ಪಂಚರ್ ಹಾಕುವ ಅಂಗಡಿಗಳು, ಕರಕುಶಲ ವಸ್ತುಗಳ ಅಂಗಡಿಗಳು ಬಂದ್‌ ಆಗುವ ಭೀತಿ ಆರಂಭವಾಗಿದೆ. ದಶಪಥ ಕಾಮಗಾರಿ ಆರಂಭವಾದ ಸಂದರ್ಭದಲ್ಲೇ ಹಲವು ಅಂಗಡಿಗಳು ಬಂದ್‌ ಆಗಿದ್ದವು. ಈಗ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಿರುವ ಹಿನ್ನೆಲೆಯಲ್ಲಿ ಉಳಿದ ಎಲ್ಲಾ ಅಂಗಡಿಗಳು ಕೂಡ ಬಂದ್‌ ಆಗುತ್ತಿವೆ.

‘ಟೀ ಅಂಗಡಿಯಿಂದ ನಿತ್ಯ ₹ 2 ಸಾವಿರ ಸಂಪಾದನೆ ಮಾಡುತ್ತಿದ್ದೆ. ಮಧ್ಯರಾತ್ರಿಯವರೆಗೂ ಟೀ ಮಾಡಿ ಕೊಡುತ್ತಿದ್ದೆ. ಹೊರರಾಜ್ಯಗಳ ಲಾರಿ, ಇತರ ವಾಹನ ಚಾಲಕರು ಗ್ರಾಹಕರಾಗಿದ್ದರು. ಈಗ ವಾಹನಗಳು ಮೇಲ್ಸೇತುವೆಯಲ್ಲಿ ಓಡಾಡುತ್ತಿದ್ದು ಯಾರೂ ಟೀ ಅಂಗಡಿಗೆ ಬರುತ್ತಿಲ್ಲ. ಈಗಾಗಲೇ ಅಂಗಡಿ ಮುಚ್ಚಿದ್ದು ಬೆಂಗಳೂರಿಗೆ ಗುಳೇ ಹೋಗಲು ನಿರ್ಧರಿಸಿದ್ದೇನೆ’ ಎಂದು ಸೋಮನಹಳ್ಳಿ ಟೀ ಅಂಗಡಿ ನಡೆಸುತ್ತಿದ್ದು ರಮೇಶ್‌ ಹೇಳಿದರು.

ಹೋಟೆಲ್‌ಗಳಿಗೂ ಹೊಡೆತ: ಸಣ್ಣಪುಟ್ಟ ವ್ಯಾಪಾರಿಗಳು ಮಾತ್ರವಲ್ಲದೇ ದೊಡ್ಡ ಹೋಟೆಲ್‌ಗಳಿಗೂ ಮೇಲ್ಸೇತುವೆಯಿಂದ ಹೊಡೆತ ಬಿದ್ದಿದೆ. ಮದ್ದೂರಿನ ಶಿವಪುರದ ಪ್ರಸಿದ್ಧ ಮದ್ದೂರು ಟಿಫಾನೀಸ್ , ಹೋಟೆಲ್ ಅಡಿಗಾಸ್‌ಗೂ ಗ್ರಾಹಕರ ಕೊರತೆ ಎದುರಾಗಿದೆ. ಗ್ರಾಹಕರ ಕೊರತೆ ಎದುರಿಸುತ್ತಿದ್ದ ಎಂಪೈರ್‌ ಹೋಟೆಲ್‌ ಚನ್ನಪಟ್ಟಣ ಕಡೆಗೆ ಸ್ಥಳಾಂತರಗೊಂಡಿದೆ.

ಮೈಸೂರು - ಬೆಂಗಳೂರು ಹೆದ್ದಾರಿಯ ಎರಡೂ ಕಡೆ ಕಬ್ಬಿಣದ ತಡೆ ಗೋಡೆ ನಿರ್ಮಿಸಲಾಗಿದ್ದು ಎರಡೂ ಕಡೆ ಸ್ಥಳೀಯ ಸರ್ವಿಸ್ ರಸ್ತೆ ಕಡಿತಗೊಂಡಿದೆ. ಹೀಗಾಗಿ ವಾಹನಗಳು ಕೆಳಗಿಳಿದು ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ‘ಮೇಲ್ಸೇತುವೆ ಮುಕ್ತವಾದ ನಂತರ ಮದ್ದೂರು ಬಂದಿದ್ದು, ಹೋಗಿದ್ದು ಯಾವುದೂ ತಿಳಿಯುತ್ತಿಲ್ಲ. ಮದ್ದೂರು ಸಂಪರ್ಕವೇ ಕಡಿದು ಹೋಗಿದೆ. ರಾಮನಗರ, ಚನ್ನಪಟ್ಟಣ, ಮಂಡ್ಯ ನಗರಕ್ಕೂ ಇದೇ ಪರಿಸ್ಥಿತಿ ಇದೆ’ ಎಂದು ಮಂಡ್ಯದ ಪ್ರಯಾಣಿಕ ರಾಜೇಗೌಡ ಹೇಳಿದರು.

ಮದ್ದೂರು ವಡೆ, ಎಳನೀರು ಕೇಳುವವರಾರು?
ಮದ್ದೂರು ತಾಲ್ಲೂಕು ವ್ಯಾಪ್ತಿಯಲ್ಲಿ ನೂರಾರು ವ್ಯಾಪಾರಿಗಳು ಮದ್ದೂರು ವಡೆ ಮಾರಾಟ ಮಾಡಿಕೊಂಡು ಬದುಕುತ್ತಿದ್ದರು. ಅವರಿಗೆ ಹೆದ್ದಾರಿಯಲ್ಲಿ ಓಡಾಡುವ ಪ್ರವಾಸಿಗರೇ ಪ್ರಮುಖ ಗ್ರಾಹಕರಾಗಿದ್ದರು. ಜೊತೆಗೆ ಮದ್ದೂರು ಸಿಹಿ ಎಳನೀರು ಎಲ್ಲೆಡೆ ಪ್ರಸಿದ್ಧಿ ಪಡೆದಿತ್ತು. ಈಗ ಮೇಲ್ಸೇತುವೆಯಿಂದಾಗಿ ವಾಹನಗಳು ಮದ್ದೂರು ಪಟ್ಟಣದ ಸಂಪರ್ಕವೇ ಕಡಿತಗೊಂಡಿವೆ. ಹೀಗಾಗಿ ಮದ್ದೂರುವಡೆ, ಸಿಹಿ ಎಳನೀರು ಕೇಳುವವರಾರು ಎಂಬು ಪ್ರಶ್ನೆ ನಿರ್ಮಾಣವಾಗಿದೆ’ ಎಂದು ಹೋಟೆಲ್‌ ಮಾಲೀಕ ಪ್ರಕಾಶ್‌ ತಿಳಿಸಿದರು.

‘ಬೆಂಗಳೂರು ಹಾಗೂ ಮೈಸೂರು ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಡುವೆ ಬರುವ ಪಟ್ಟಣ, ಹಳ್ಳಿಗಳ ಸಂಪರ್ಕವನ್ನೇ ಕಡಿದು ಹಾಕಲಾಗಿದೆ. ಭೂಮಿ ಕೊಟ್ಟವರಿಗೆ ಏನೂ ಸಿಗಲಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.